UN NETWORKS
ಹರೇಕಳ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆ, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ ಹಾಗೂ ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಿನೂತನ ಶೈಲಿಯ ಬೇಸಿಗೆ ಶಿಬಿರ “ಚಿಣ್ಣರ ಚಿಲುಮೆ 2019” ಇದರ ಉದ್ಘಾಟನಾ ಸಮಾರಂಭ ನಡೆಯಿತು.

ಉದ್ಘಾಟನೆಯನ್ನು ಡ್ರಾಮ ಜೂನಿಯರ್ ಸೀಸನ್ 2 ಇದರ ವಿಜೇತೆ ಜೂನಿಯರ್ ಲಕ್ಷ್ಮೀ ಎಂದೇ ಕೀರ್ತಿ ಪಡೆದಿರುವ ಬಾಲ ನಟಿ ಕುಮಾರಿ ವಂಶಿ ರತ್ನಕುಮಾರ್ ಉದ್ಘಾಟಿಸಿ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅಂತಹ ಪ್ರತಿಭೆಗಳು ಬೆಳಗಬೇಕಾದರೆ ಇಂತಹ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ ಮತ್ತು ಗೈಡ್ಸ್ ಇದರ ಜಿಲ್ಲಾ ಮುಖ್ಯ ಆಯುಕ್ತರಾದ ಎನ್.ಜಿ.ಮೋಹನ್ ಅವರು ವಹಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸ್ಕೌಟ್ಸ್ ಗೈಡ್ಸ್ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಇವತ್ತು ಪ್ರಕೃತಿಯನ್ನು ಪ್ರೀತಿಸಬೇಕು, ವನ್ಯಜೀವಿಯನ್ನು ರಕ್ಷಿಸಬೇಕು, ವಿದ್ಯಾರ್ಥಿಗಳು ಪ್ರಾಣಿ ಮಿತ್ರನಾಗಿರಬೇಕು ಎಂಬುದನ್ನು ಸ್ಕೌಟ್ಸ್ ಗೈಡ್ಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಬಾಲ್ಯದಲ್ಲೇ ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಬಾಲ್ಯದಲ್ಲೇ ಶಿಸ್ತು ಮತ್ತು ಕಠಿಣ ಪರಿಶ್ರಮ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಕೋಟೆಕಾರು ವ್ಯವಸಾಯ ಸಹಕಾರಿ ಸಂಘದ ಶಾಖಾಧಿಕಾರಿ ವಾಣಿ ಲೋಕಯ್ಯ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಜಿ.ಕಜೆ, ಕೋಶಾಧಿಕಾರಿಗಳಾದ ವಾಸುದೇವ ಬೋಳೂರು, ಸ್ಕೌಟ್ ಆಯುಕ್ತರಾದ ರಾಮಶೇಷ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ಹರೇಕಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರವೀಂದ್ರ ರೈ, ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಎಡ್ವರ್ಡ್ ನಥಾನಿಯಲ್ ಐಮನ್, ಮಂಗಳೂರು ವಿಶ್ವವಿದ್ಯಾನಿಲಯದ ಜೀವ ವಿಜ್ಞಾನ ವಿಭಾಗದ ಅಧ್ಯಕ್ಷರಾದ ಡಾ. ಪ್ರಶಾಂತ್ ನಾಯಕ್, ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಇದರ ಕಾರ್ಯದರ್ಶಿ ಕಮಲಾಕ್ಷ ಶೆಟ್ಟಿಗಾರ್ ಉಪಸ್ಥಿತರಿದ್ದರು. ಶಿಬಿರದ ಸಂಯೋಜಕರಾದ ತ್ಯಾಗಂ ಹರೇಕಳ ಸ್ವಾಗತಿಸಿದರು. ಅಧ್ಯಾಪಕರಾದ ರವಿಶಂಕರ್ ಪ್ರಾರ್ಥಿಸಿದರು. ಉಳ್ಳಾಲ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಮಜೀದ್ ಶಿಬಿರ ಮುನ್ನೋಟ ನೀಡಿದರು. ಜೆಸಿಐ ಘಟಕದ ಅಧ್ಯಕ್ಷೆ ಪವಿತ್ರ ಗಣೇಶ್ ವಂದಿಸಿದರು. ಗೈಡ್ ಶಿಕ್ಷಕಿ ಗೀತಾ ಜುಡಿತ್ ಸಲ್ದಾನ ಕಾರ್ಯಕ್ರಮ ನಿರೂಪಿಸಿದರು. ಶಿಬಿರದಲ್ಲಿ 120 ಶಿಬಿರಾರ್ಥಿಗಳು ಭಾಗವಹಿಸಿದ್ದರು.


