UN NETWORKS
ಉಳ್ಳಾಲ: ಕ್ಯಾನ್ಸರ್ ಕುರಿತ ಕ್ಲಿನಿಕಲ್ ಸಂಶೋಧನೆಗಳು ದೇಶದಲ್ಲಿ ಅತ್ಯಂತ ಕಳಪೆ ಮಟ್ಟದಲ್ಲಿವೆ. ಸರಕಾರಗಳು ಈ ಕುರಿತು ಗಂಭೀರ ಚಿಂತನೆಯನ್ನು ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಯೆನೆಪೋಯ ವಿಶ್ವವಿದ್ಯಾಲಯ ದ ಕುಲಪತಿ ಡಾ.ಎಂ ವಿಜಯಕುಮಾರ್ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಫಾರ್ಮಸಿ ಕಾಲೇಜಿನ ಆಶ್ರಯದಲ್ಲಿ ದೇರಳಕಟ್ಟೆ ಪಾನೀರು ಕ್ಯಾಂಪಸ್ ಆಡಿಟೋರಿಯಂ ನಲ್ಲಿ ಗುರುವಾರ ಜರಗಿದ ಇಂಡಿಯನ್ ಫಾರ್ಮಕಾಲೊಜಿಕಲ್ ಸೊಸೈಟಿ ಪ್ರಾಯೋಜಿತ ` ನ್ಯಾಷನಲ್ ಸಿಂಪೋಸಿಯಂ ಆಂಡ್ ವರ್ಕ್ಶಾಪ್ ಆನ್ ಎಮರ್ಜಿಂಗ್ ಪರ್ಸೆಪೆಕ್ಟಿವ್ಸ್ ಇನ್ ಪ್ರಿ ಕ್ಲಿನಿಕಲ್ ಆಂಡ್ ಕ್ಲಿನಿಕಲ್ ರಿಸರ್ಚ್ ‘ ಕುರಿತ ಒಂದು ದಿನದ ರಾಷ್ಟ್ರ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ಕೆಲಸವಿಲ್ಲದವರು ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಅನ್ನುವ ಮಾಹಿತಿಯ ಕೊರತೆ ಸರಕಾರಗಳಿಗಿವೆ. ಇದರಿಂದಾಗಿ ಕ್ಲಿನಿಕಲ್ ಸಂಶೋಧನೆಗಳು ಬಹಳಷ್ಟು ಹಿನ್ನೆಡೆಯನ್ನು ಪಡೆದುಕೊಂಡಿದೆ. ನೂತನ ಡ್ರಗ್ ಸಂಶೋಧಿಸಿದರೂ ಅದನ್ನು ಮಾನವ ರಹಿತ ಪ್ರಯೋಗಕ್ಕೆ ಬಳಸಲು ಮುಂದಾದರೂ, ಸರಕಾರದಿಂದ ಬೆಂಬಲ ದೊರೆಯುತ್ತಿಲ್ಲ. ಉತ್ತಮ ವೈದ್ಯಕೀಯ ಅಭ್ಯಾಸ (ಜಿಸಿಪಿ ಗುಡ್ ಕ್ಲಿನಿಕಲ್ ಪ್ರಾಕ್ಟಿಸ್) ಕಾನೂನಿನಡಿ ಮಾನವ ಹಕ್ಕುಗಳಿಗೆ ತೊಂದರೆಯಾಗದ ರೀತಿಯಲ್ಲಿ ಆವಿಷ್ಕಾರದ ಪ್ರಯೋಗಾರ್ಥಗಳು ನಡೆಯಬಹುದು . ಆದರೆ ನೈತಿಕ ಮೌಲ್ಯಗಳ ಸಮಿತಿಗಳಲ್ಲಿ ವೈದ್ಯಕೀಯ ಕ್ಷೇತ್ರದವರ ಅನುಪಸ್ಥಿತಿಯಿಂದಾಗಿ ಡ್ರಗ್ ಆವಿಷ್ಕಾರದ ಮಹತ್ವಗಳ ಪರಿಚಯವಾಗುತ್ತಿಲ್ಲ. ಇನ್ನೊಂದೆಡೆ ಸರಕಾರೀ ಸಂಸ್ಥೆಗಳಲ್ಲಿ ಸೂಕ್ತ ಮೂಲಭೂತ ಸೌಕರ್ಯ ಹಾಗೂ ಅನುದಾನದ ಕೊರತೆಯಿಂದಾಗಿ ಸಂಶೋಧನೆಗಳು ಅಸಾಧ್ಯ. ಅದಕ್ಕಾಗಿ ಖಾಸಗಿ ಸಂಸ್ಥೆಗಳನ್ನು ಸಂಶೋಧಕರು ಆರಿಸಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಅಂತರ್ ವಿಶ್ವವಿದ್ಯಾಲಯಗಳ ಸೇರುವಿಕೆಯಿಂದ ಜ್ಞಾನ, ಸಂಶೋಧನೆಗಳಿಗೆ ಸಹಕಾರ ದೊರೆಯುವುದು. ಈ ಮೂಲಕ ಹಣ ಮತ್ತು ಮಾನವ ಸಂಪಲ್ಮೂಲ ನಿರ್ವಹಣೆಯೂ ಸಾಧ್ಯವಾಗುವುದು. ಐಸಿಎಂ ಆರ್ ಮತ್ತು ಎಸಿಎಂ ಆರ್ ಪ್ರಾಜೆಕ್ಟ್ ಗಳು ಮರಳಿ ಬರುತ್ತಿದೆ. ಪದವಿ ವಿದ್ಯಾರ್ಥಿಗಳು ಐಸಿಎಂಆರ್ ಮತ್ತು ಸ್ನಾತಕೋತ್ತರ ವಿಭಾಗದವರು ಎಸಿಎಂಆರ್ ಪ್ರಾಜೆಕ್ಟ್ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು ಎಂದರು.
ನಿಟ್ಟೆ ವಿಶ್ವವಿದ್ಯಾಲಯ ದ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿಟ್ಟೆ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳದೇ, ವಿದ್ಯಾರ್ಥಿಗಳ ಹಾಗೂ ರೋಗಿಗಳ ಅನುಕೂಲಕ್ಕಾಗಿ ಇತರೆ ವಿ.ವಿಗಳ ಸಹಯೋಗವನ್ನು ಪಡೆದುಕೊಂಡು ಮುನ್ನಡೆಯುತ್ತಿದೆ. ವೈದ್ಯಕೀಯ ಕ್ಷೇತ್ರದ ಸಂಶೋಧನೆಗೂ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ ಎಂದರು. ಧಾರವಾಡದ ಖ್ಯಾತ ಫಾರ್ಮಕಾಲಜಿಸ್ಟ್ , ಪಂಜಾಬ್ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಪ್ರೊ.ಎಸ್.ಕೆ ಕುಲಕರ್ಣಿ ಮುಖ್ಯ ಅತಿಥಿಯಾಗಿದ್ದರು.
ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಯಸ್ ಶಾಸ್ತ್ರಿ ಸ್ವಾಗತಿಸಿದರು. ಝೀನಾ ಫೆರ್ನಾಂಡಿಸ್ ನಿರೂಪಿಸಿದರು. ಸಂಘಟಕ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಎಂ ವಿಜಯಕುಮಾರ್ ವಂದಿಸಿದರು.
19 ಕಾಲೇಜುಗಳು ಕಾರ್ಯಗಾರದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭ 19 ಕಾಲೇಜುಗಳ ವಿದ್ಯಾರ್ಥಿಗಳು ಪ್ರಸ್ತುಪಡಿಸಿದ 40 ವೈಜ್ಞಾನಿಕ ವಿವರಗಳ ` ಅಬ್ಸ್ಟಾಕ್ಟ್ ಈ-ಬುಕ್’ ಅನ್ನು ಬಿಡುಗಡೆಗೊಳಿಸಲಾಯಿತು.


