UN NETWORKS
ಕಣಚೂರು : ಕ್ಷಯರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷಾ ಕೇಂದ್ರಗಳ ಸಹಿತ 20 ಐಸಿಟಿಸಿ ಸೆಂಟರುಗಳು ಕಾರ್ಯಾಚರಿಸುತ್ತಿವೆ ಎಂದು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಬದ್ರುದ್ದೀನ್ ಅಭಿಪ್ರಾಯಪಟ್ಟರು.
ಅವರು ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಮುದಾಯ ವಿಭಾಗದ ಆಶ್ರಯದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಪ್ರಯುಕ್ತ ಕಣಚೂರು ಆಸ್ಪತ್ರೆ ಸಭಾಂಗಣದಲ್ಲಿ ಬುಧವಾರ ಜರಗಿದ `ರಿವೈಸ್ಡ್ ನ್ಯಾಷನಲ್ ಟ್ಯೂಬರ್ ಕ್ಯುಲೋಸಿಸ್ ಕಂಟ್ರೋಲ್ ಪ್ರೊಗ್ರಾಂ’ ನಲ್ಲಿ ಭಾಗವಹಿಸಿ ಮಾತನಾಡಿದರು.ದೇಶಾದ್ಯಂತ ಕ್ಷಯರೋಗವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಆರೋಗ್ಯ ಇಲಾಖೆಗಳು ಕ್ರಮಕೈಗೊಳ್ಳುತ್ತಾ ಬಂದಿದೆ. ಜಿಲ್ಲೆಯಲ್ಲಿಯೂ ಪರಿಣಾಮಕಾರಿಯಾಗಿ ಕ್ಷಯರೋಗ ನಿರ್ಮೂಲನೆಗೆಂದು ಆರೋಗ್ಯ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಆಧುನಿಕ ಸವಲತ್ತುಗಳನ್ನು ಒಳಗೊಂಡು, ಖಾಸಗಿ ಸಂಸ್ಥೆಗಳ ಜತೆಗೆ ಸೇರಿಕೊಂಡು ಜಾಗೃತಿ ಕಾರ್ಯಕ್ರಮಗಳ ಮೂಲಕ ಕಾರ್ಯಾಚರಣೆಯನ್ನು ಮುಂದುವರಿಸಲಾಗುತ್ತಿದೆ ಎಂದ ಅವರು ಈ ನಿಟ್ಟಿನಲ್ಲಿ ಕಣಚೂರು ಸಂಸ್ಥೆ ಹಲವು ಸಮಯಗಳಿಂದ ಹಮ್ಮಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕಣಚೂರು ಮೋನು ಮಾತನಾಡಿ ` ಕ್ಲಪ್ತ ಸಮಯದಲ್ಲಿ ಕ್ಷಯರೋಗಸ್ಥರಿಗೆ ಚಿಕಿತ್ಸೆಯನ್ನು ಒದಗಿಸುವ ಕಾರ್ಯ ಜಿಲ್ಲಾ ಆರೋಗ್ಯ ಕೇಂದ್ರಗಳಿಂದ ಆಗುತ್ತಿದೆ. ಸಮಾಜದಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು. ಸಮಾಜದಲ್ಲಿ ಕ್ಷಯರೋಗ ನಿಯಂತ್ರಣ ಜಾಗೃತಿ ಮೂಡಿಸಿದಾಗ ನಿರ್ಮೂಲನೆ ಸಾಧ್ಯ ಎಂದರು.
ಈ ಸಂದರ್ಭ ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ಹೆಚ್. ಯಸ್ ವಿರೂಪಾಕ್ಷ, ಕಣಚೂರು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ದೇವಿಪ್ರಸಾದ್ ಶೆಟ್ಟಿ , ಆಸ್ಪತ್ರೆ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ , ಆಸ್ಪತ್ರೆ ಸಮುದಾಯ ವಿಭಾಗ ಮುಖ್ಯಸ್ಥ ಡಾ. ಕರ್ನಲ್ ಕಿರಣ್ ಕೆ.ಜಿ, ಶ್ವಾಸಕೋಶ ವಿಭಾಗ ಮುಖ್ಯಸ್ಥ ಡಾ. ಕೃಷ್ಣ ಪ್ರಸಾದ್ ,ಮಕ್ಕಳ ವಿಭಾಗ ಮುಖ್ಯಸ್ಥ ಡಾ. ನೂರುಲ್ಲಾ ಉಪಸ್ಥಿತರಿದ್ದರು.ಸಮುದಾಯ ವಿಭಾಗದ ಪ್ರಾಧ್ಯಾಪಕ ಡಾ. ಸತೀಶ್ ಮೋರೆ ಸ್ವಾಗತಿಸಿದರು. ನಾಗರಾಜ್ ನಿರೂಪಿಸಿದರು. ಡಾ. ಫಿಲಿಪ್ಸ್ ವಂದಿಸಿದರು.
ಇದೇ ಸಂದರ್ಭ ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಬದ್ರುದ್ದೀನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಕ್ಷಯರೋಗ ನಿರ್ಮೂಲನೆ ಕುರಿತ ಬೀದಿ ನಾಟಕ ಪ್ರದರ್ಶನಗೊಂಡಿತು.


