UN NETWORKS
ತೊಕ್ಕೊಟ್ಟು : ಳ್ಳಾಲ: ಸಮಾಜವನ್ನು ಲೂಟಿಗೈದವರಿಗೆ ಮಾತ್ರ ನೋಟ್ ಬ್ಯಾನ್ ನಿಂದ ತೊಂದರೆಯಾಗಿದೆ ಹೊರತು ಅಸಹಾಯಕರಿಗೆ, ಸಣ್ಣ ಉದ್ದಿಮೆಗಾರರಿಗೆ, ಸರಕಾರಿ ಕೆಲಸ ನಿರ್ವಹಿಸುವವರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀ ನಿವಾಸ ಪೂಜಾರಿ ಹೇಳಿದರು.

ತೊಕ್ಕೊಟ್ಟು ಕಾಪಿಕಾಡಿನ ಖಾಸಗಿ ಕಟ್ಟಡದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಲೋಕಸಭಾ ಚುನಾವಣಾ ಕಾರ್ಯಾಲಯವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರ ರಾಷ್ಟ್ರವಾದದ ಕುರಿತು ಕೈಗೊಂಡ ನಿರ್ಣಯಗಳು ಹಾಗೂ ಜನಸಾಮಾನ್ಯರಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ಜನರು ಮೆಚ್ಚಿ ಹಿಂದೆಂದು ಮಾಡದ ದಾಖಲೆ ಮತಗಳ ಮೂಲಕ ಕ್ಷೇತ್ರದ ಸಂಸದರನ್ನು ಆಯ್ಕೆ ಮಾಡಲಿದ್ದಾರೆ. ಉಗ್ರದಾಳಿಯ ಹಿಂದಿನ ಸರಕಾರದ ಪ್ರತಿಕ್ರಿಯೆ ಮತ್ತು ಮೋದಿ ಭಾರತದಲ್ಲಿ ಹತ್ತೇ ದಿನಗಳಲ್ಲಿ ಪ್ರತಿದಾಳಿಯಂತಹ ನಿರ್ಣಯಗಳ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವ ಮೂಲಕ ಸಮರ್ಥ ಭಾರತ ನಿರ್ಮಾಣವಾಗಲಿದೆ ಎಂದರು.
ನೀರವ್ ಮೋದಿ ಬಂಧನ, ಪಾಕಿಸ್ತಾನದ ಸೈನ್ಯದಿಂದ ವೀರ ಯೋಧ ಅಭಿನಂದನ್ ಕರೆತರುವಂತಹ ದೇಶ ಮೆಚ್ಚುವ ಕಾರ್ಯ ದೇಶದ ಪ್ರಧಾನಿಯಿಂದ ಆಗಿದೆ. ಇದೆಲ್ಲವನ್ನು ಜಿಲ್ಲೆಯ ಜನ ಮನಗಂಡು ಬೆಂಬಲಿಸುವ ವಿಶ್ವಾಸವಿದೆ ಎಂದರು.
ಜೆಡಿಎಸ್ ನಲ್ಲಿ ಹಣ ಕೊಟ್ಟರೆ ಸ್ಥಾನ !
ಇದೇ ವೇಳೆ ಸುಮಾರು 30 ವರ್ಷಗಳಿಂದ ಜೆಡಿಎಸ್ ಮಂಗಳೂರು ವಿಧಾನಸಭಾ ಕ್ಷೇತ್ರದ ಪರಿಶಿಷ್ಟ ಜಾತಿ/ಪಂಗಡದ ಅಧ್ಯಕ್ಷರಾಗಿದ್ದ ಬಾಬು ನರಿಂಗಾನ ಎಂಬವರು ಬಿಜೆಪಿ ಸೇರ್ಪಡೆಗೊಂಡರು. ಬಳಿಕ ಮಾತನಾಡಿ, ಜೆಡಿಎಸ್‍ನಲ್ಲಿ ಈಗ ಎರಡು ಆಟಗಳು ನಡೆಯುತ್ತಿದೆ. ಹಣ ಕೊಟ್ಟರೆ ಜಿಲ್ಲಾಧ್ಯಕ್ಷನಾಗಿ ಮಾಡುತ್ತಾರೆ. ಜೆಡಿಎಸ್ ಜಿಲ್ಲಾಧ್ಯಕ್ಷರು ಕಾಂಗ್ರೆಸ್ ಪಕ್ಷದಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ನೈಜ ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್- ದಳ ಒಂದಾಗಿರುವುದರಿಂದ ಬಹಳ ನೋವಾಗಿದೆ. ಕೈರಂಗಳ, ನರಿಂಗಾನ, ಬಾಳೆಪುಣಿ ಭಾಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಕುಡಿಯಲು ನೀರಿಲ್ಲ, ಮೂಲಭೂತ ಸೌಕರ್ಯಗಳ ಕೊರತೆ ಬಹಳಷ್ಟಿದೆ. ರಾಜ್ಯದ ಸರಕಾರ ಈ ಕಡೆ ಗಮನವೇ ಹರಿಸುತ್ತಿಲ್ಲ. ಇದರಿಂದ ರೋಸಿ ಹೋಗಿ ಹಾಗೂ ಕೇಂದ್ರ ಸರಕಾರದ ಕಾರ್ಯವೈಖರಿಯನ್ನು ಮೆಚ್ಚಿ ಬಿಜೆಪಿ ಸೇರುತ್ತಿದ್ದೇನೆ. ತನ್ನ ಜತೆಗೆ ಒಟ್ಟು 50 ಮಂದಿ ಸೇರ್ಪಡೆಯಾಗಲಿದ್ದಾರೆ ಎಂದರು.
ಚುನಾವಣಾ ಉಸ್ತುವಾರಿ ಬೂಡಿಯಾರ್ ರಾಧಾಕೃಷ್ಣ ರೈ, ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ನಮಿತಾ ಶ್ಯಾಂ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮೋಹನ್ ರಾಜ್ ಕೆ.ಆರ್, ಮನೋಜ್ ಆಚಾರ್ಯ, ಜೀವನ್ ಕುಮಾರ್ ತೊಕ್ಕೊಟ್ಟು, ಅಶ್ರಫ್ ಹರೇಕಳ, ದಯಾನಂದ ತೊಕ್ಕೊಟ್ಟು ಮುಂತಾದವರು ಉಪಸ್ಥಿತರಿದ್ದರು.


