UN NETWORKS
ತೊಕ್ಕೊಟ್ಟು : ತೊಕ್ಕೊಟ್ಟು-ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ನಾಟೆಕಲ್ ಸರ್ಕಲ್ ನಿಂದ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆವರೆಗಿನ ರಸ್ತೆಯ ಎರಡು ಬದಿಯಲ್ಲಿರುವ ಅಂಗಡಿ ಮುಗ್ಗಟ್ಟುಗಳನ್ನು ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ, ಬೆಳ್ಮ ಪಂಚಾಯಿತಿ ಹಾಗೂ ಕೋಟೆಕಾರು ಪಟ್ಟಣ ಪಂಚಾಯಿತಿ ಜತೆಯಾಗಿ ಮಂಗಳವಾರ ತೆರವು ಕಾರ್ಯಾಚರಣೆ ನಡೆಸಿತು.ರಸ್ತೆ ಬದಿ ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಗೂಡಂಗಡಿಗಳ ತೆರವಿಗೆ 15 ದಿನಗಳ ಹಿಂದೆಯೇ ಎಚ್ಚರಿಸಲಾಗಿದೆ. ಬೆಳ್ಮ ಗ್ರಾಮ ಪಂಚಾಯಿತಿ ವತಿಯಿಂದ ಬ್ಯಾನರ್ ಅಳವಡಿಸಿ ಎಚ್ಚರಿಕೆಯನ್ನು ನೀಡಲಾಗಿತ್ತು. ಇದನ್ನು ಗಣನೆಗೆ ತೆಗೆದುಕೊಳ್ಳದೇ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಹಲವು ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ.
ಒಂದು ದಿನದ ಎಚ್ಚರಿಕೆ : ಕೋಟೆಕಾರು, ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಾಜ್ಯ ಹೆದ್ದಾರಿ ಬದಿಯಲ್ಲಿ ಇನ್ನೂ ಹಲವು ಅಂಗಡಿಗಳಿವೆ. ಅಂಗಡಿ ಮಾಲೀಕರ ಮನವಿ ಮೇರೆಗೆ ಒಂದು ದಿನದ ಅವಕಾಶವನ್ನು ನೀಡಲಾಗಿದೆ. ಅದರೊಳಗೆ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿ ರಸ್ತೆ ಕಾಮಗಾರಿಗೆ ಅವಕಾಶ ಕಲ್ಪಿಸುವಂತೆ ತೆರವುಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಅಧಿಕಾರಿಗಳು ಸೂಚಿಸಿದ್ದಾರೆ.
ಪಂಚಾಯಿತಿ ಅಂಗಡಿಗಳ ತೆರವು : ಬೆಳ್ಮ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿನ ವಿಸ್ತರಿಸಲಾದ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಕಾನೂನು ಎಲ್ಲರಿಗೂ ಒಂದೇ ಎಂದು ತೋರಿಸಲಾಗಿದೆ. ರಸ್ತೆ ಅಭಿವೃದ್ಧಿ ಜೊತೆಗೆ ಚರಂಡಿ ಅನುಷ್ಠಾನ,ಅಪಘಾತಗಳ ತಡೆಗಟ್ಟುವಿಕೆ, ಪಾದಚಾರಿಗಳಿಗೆ ನಡೆದಾಡಲು ಸ್ಥಳಾವಕಾಶ ಕಲ್ಪಿಸುವ ಉದ್ದೇಶದಿಂದ ಸರಕಾರಿ ಜಾಗದಲ್ಲಿರುವ ಪ್ರತಿಯೊಂದು ಅಂಗಡಿಗಳನ್ನು ತೆರವು ನಡೆಸಲಾಗಿದೆ. ಚತುಷ್ಪಥ ರಸ್ತೆ ನಿರ್ಮಾಣವಾದಲ್ಲಿ ಹೆಚ್ಚಿನ ಕೆಎಸ್ ಆರ್ ಟಿಸಿ ಬಸ್ಸುಗಳು ರಸ್ತೆಗಿಳಿಯುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಅನ್ನುವ ಅಧಿಕಾರಿಗಳ ಅಭಿಪ್ರಾಯ.
ತೆರವು ಕಾರ್ಯಾಚರಣೆಯಲ್ಲಿ ಲೋಕೋಪಯೋಗಿ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ದಾಸ್ ಪ್ರಕಾಶ್ , ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರವಿ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ , ಕೋಟೆಕಾರು ಪಟ್ಟಣ ಪಂಚಾಯಿತಿ ಪೌರಾಯುಕ್ತೆ ಪೂರ್ಣಕಲಾ ಭಾಗವಹಿಸಿದ್ದರು.


