UN NETWORKS
ದೇರಳಕಟ್ಟೆ: ಕಾಲಘಟ್ಟದ ವ್ಯವಸ್ಥೆಯಲ್ಲಿ ಹಲವು ಶಬ್ದಗಳು ಬದಲಾವಣೆಗಳಾಗುತ್ತಿವೆ. ಇಂತಹ ಕಾಲದ ಪ್ರವಾಹದಲ್ಲಿ ಕಳೆದುಕೊಳ್ಳುವ ಶಬ್ದಗಳನ್ನು ಪಡೆದುಕೊಳ್ಳಲು ನಿಘಂಟುಗಳ ಅವಶ್ಯಕತೆ ಅಗತ್ಯ . ಈ ನಿಟ್ಟಿನಲ್ಲಿ ತುಳು ಜ್ಞಾತಿ ಪದಕೋಶ ರಚನೆಗೆ ಪ್ರೋತ್ಸಾಹಿಸಿದ ನಿಟ್ಟೆ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಹಂಪ ನಾಗರಾಜಯ್ಯ ಹೇಳಿದರು.
ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ತುಳು ಭಾಷಾ ವಿಭಾಗದ ಆಶ್ರಯದಲ್ಲಿ ತುಳುಭಾಷಾ ತಜ್ಞರಾದ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಸಂಪಾದಕತ್ವದಲ್ಲಿ ರಚಿಸಲಾದ ತುಳು ಭಾಷಾ ನಿಘಂಟು “ತುಳು ಜ್ಞಾತಿ ಪದಕೋಶ’ ವನ್ನು ಶುಕ್ರವಾರ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಾಲದ ಪ್ರವಾಹದಲ್ಲಿ ಅನ್ಯ ಭಾಷೆಗಳನ್ನು ಕೂಡಿಸಿಕೊಂಡು ಕೃತಿಗಳ ರಚನೆಯಾಗುತ್ತಿದೆ. ಈ ವೇಳೆ ಶಬ್ದಗಳನ್ನು ಕಳೆದುಕೊಳ್ಳುವ, ಪಡೆದುಕೊಳ್ಳುವ ಪ್ರಕ್ರಿಯೆಗಳನ್ನು ತಿಳಿದುಕೊಳ್ಳಲು ನಿಘಂಟು ಅತ್ಯವಶ್ಯಕ. ಜಾಗತಿಕವಾಗಿ ನಿಘಂಟಿಗೆ ದೊಡ್ಡ ಇತಿಹಾಸವಿದೆ. ದೀರ್ಘಕಾಲಿಕ ಪ್ರಭಾವ ಬೀರುವ ಕೃತಿಯ ಬಿಡುಗಡೆಯ ಸಮಾರಂಭ ಸಂತಸ ನೀಡಿದೆ. ಜಗತ್ತಿನಲ್ಲಿ ಪ್ರಭುತ್ವ ಬೀರಲು ದೊಡ್ಡ ಶಕ್ತಿ ಭಾಷೆಯಾಗಿದೆ. ಭಾಷೆಯಿಲ್ಲದ ಜಗತ್ತು ಊಹಿಸಲು ಅಸಾಧ್ಯ. ನಿಟ್ಟೆ ವಿಶ್ವವಿದ್ಯಾಲಯ ಸಮಾಜಕ್ಕೆ ನೀಡಿದ ಜ್ಞಾತಿಪದಕೋಶ ಗಾತ್ರ, ಪಾತ್ರ, ಮಹತ್ವದಲ್ಲಿ ವಿಶಿಷ್ಟವಾದಂತಹ ಕೃತಿಯಾಗಿದೆ. 19 ನೇ ಶತಮಾನದಲ್ಲಿ ದ್ರಾವಿಡ ಭಾಷೆಗಳು ಸ್ವತಂತ್ರ್ಯ ಅನ್ನುವುದನ್ನು ಆಂಗ್ಲ ಕವಿ ಉಲ್ಲೇಖಿಸಿದ್ದರು. ರಾಬಟ್ ್ ಕಾಡ್ರ್ವೆಲ್ 12 ಭಾಷೆಗಳನ್ನು ಅಧ್ಯಯನ ನಡೆಸಿ ಕೃತಿಗಳನ್ನು ರಚಿಸಿರುವುದು ಸ್ಮರಣೀಯ. ಕನ್ನಡ ಸಾಹಿತ್ಯ ಪರಿಷತ್ ಕಯಗೊಂಡ ಕನ್ನಡ-ಕನ್ನಡ ನಿಘಂಟು ರಚನೆಗೆ 48 ವರ್ಷಗಳ ಪ್ರಯತ್ನ ನಡೆಯಿತು. ಈ ವೇಳೆ ಸಂಪಾದಕ ಮಂಡಳಿಯಿಂದ ಸುಮಾರು 18 ಮಂದಿ ಅಗಲಿದ್ದಾರೆ. ನಿಘಂಟು ಬೇಗನೇ ರಚನೆಗಾಗಿ ವಹಿಸಿದ ಶ್ರಮದಿಂದಾಗಿ ಆರೋಗ್ಯ ಕೆಡಿಸಿಕೊಂಡು ಡಿ.ಎಲ್ ನರಸಿಂಹ ಆಚಾರ್ಯರು ಜೀವವನ್ನೇ ಕಳೆದುಕೊಂಡರು. ಇಂಗ್ಲೆಂಡಿನಲ್ಲಿ ಥಾಮಸ್ ಬರೋ , ಅಮೆರಿಕಾದ ಎಂ.ಬಿ.ಎಮಿನೋ ದ್ರಾವಿಡ ಭಾಷೆಗಳಿಗೆ ಸಂಬಂಧಿಸಿ ನಡೆಸಿದ ಸಂಶೋಧನೆಯಿಂದ ಭಾಷಾ ಕ್ಷೇತ್ರಕ್ಕೆ, ಜ್ಞಾತಿಕೋಶದಲ್ಲಿ ವಿಸ್ತಾರದ ಕುರಿತು ಬಹಳ ಕಾರ್ಯಗಳು ನಡೆದಿವೆ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಮಾತನಾಡಿ, ತುಳುಜ್ಞಾತಿಪದಕೋಶ ರಚನೆ ಮೂಲಕ ಒಂದು ಕೋಟಿ ತುಳುವಿಗರು ಸದಾ ನೆನಪಿನಲ್ಲಿಡುವ ಕೆಲಸ ಸಂಪಾದಕೀಯ ಮಂಡಳಿಯಿಂದ ಆಗಿದೆ. ಭಾಷಾ ಸಂಸ್ಕೃತಿಗೆ ವೈದ್ಯಕೀಯ, ತಾಂತ್ರಿಕ ವಿ.ವಿಗಳ ಪ್ರೋತ್ಸಾಹ ಮೆಚ್ಚುವ ಕಾರ್ಯ. ವೈದ್ಯಕೀಯ ಕ್ಷೇತ್ರವಿರುವಂತೆ ಭಾಷಾ ವಿಜ್ಞಾನ ವಿಭಾಗಗಳು ಇವೆ. ಭಾಷಾಶಾಸ್ತ್ರ ಮತ್ತು ಲೆಕ್ಸಿಕೋಗ್ರಾಫಿ ಕುರಿತು ಕೆಲಸಗಳಾಗುತ್ತಿಲ್ಲ. ಹಿಂದೆ ರಾಜ್ಯದಲ್ಲಿ ಕಾರ್ಯಚರಿಸುತ್ತಿದ್ದ ಸಮ್ಮರ್ ಸ್ಕೂಲ್ ಆಫ್ ಲಿಂಗ್ವಿಸ್ಟಿಕ್ಸ್ ನಿಂತು ಬಹಳ ವರ್ಷಗಳೇ ಕಳೆದಿವೆ. ವಿದ್ಯಾರ್ಥಿವೇತನಗಳು ಜಾರಿಯಾಗುತ್ತಿಲ್ಲ ಎಂದ ಅವರು ತುಳು ಜ್ಞಾತಿಪದಕೋಶದ ಮುಖೇನ ತುಳು ಭಾಷೆಯನ್ನು ಮೊದಲನೇ ಸ್ಥಾನಕ್ಕೆ ತರುವ ಪ್ರಯತ್ನ ಆಗಿದೆ. ಜಾಗತಿಕವಾಗಿ ಪದಕೋಶದ ಉಪಯೋಗವಾಗುವಂತೆ ಆನ್ ಲೈನ್ ಮುಖೇನ ಲಭ್ಯವಾಗುವಂತೆ ಮಾಡುವುದು ಉತ್ತಮ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ವಹಿಸಿದ್ದರು.
ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಹಾಗೂ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್ . ರಮಾನಂದ ಶೆಟ್ಟಿ, ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ. ಸತೀಶ್ ಕುಮಾರ್ ಭಂಡಾರಿ , ಸಹ ಕುಲಪತಿ ಡಾ. ಎಂಎಂ.ಎಸ್. ಮೂಡಿತ್ತಾಯ, ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಉಪಸ್ಥಿತರಿದ್ದರು.ಸಂಪಾದಕಿ ಡಾ. ಸಾಯಿಗೀತಾ ಕಾರ್ಯಕ್ರಮ ನಿರೂಪಿಸಿದರು. ಸಂಪಾದಕ ಡಾ. ಪದ್ಮನಾಭ ಕೇಕುಣ್ಣಯ ವಂದಿಸಿದರು.


