UN NETWORKS
ಮುಡಿಪು : ಮಂಗಳೂರು ವಿಧಾನ ಸಭಾ ಕ್ಷೇತ್ರ ನೂತನ ತಾಲೂಕು ಎಂದು ಘೋಷಣೆ ಆಗಿರುವುದರಿಂದ ಈ ವ್ಯಾಪ್ತಿಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ನಡೆಸಲು ವಿಶಾಲವಾದ ಕ್ರೀಡಾಂಗಣ ಎಲ್ಲೂ ಲಭ್ಯತೆ ಇಲ್ಲದೆ ಇರುವುದರಿಂದ ಕುರ್ನಾಡು ಬಾಳೆಪುಣಿ ಹೃದಯ ಭಾಗದಲ್ಲಿರುವ ಮುಡಿಪಿನ ರಾಜೀವಗಾಂಧಿ ಕ್ರೀಡಾಂಗಣವನ್ನು ತಾಲೂಕು ಕ್ರೀಡಾಂಗಣವಾಗಿ ಉನ್ನತಿಗೇರಿಸಲು ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಶಾಸಕ ಯು.ಟಿ. ಖಾದರ್ ಅವರು ಗ್ರಾಮವಿಕಾಸ ಯೋಜನೆಯಡಿ ಮೀಸಲಿಟ್ಟ 12ಲಕ್ಷ ರೂ. ಹಾಗೂ ಒಟ್ಟು ಸೇರಿಸಿ ಹದಿನೈದು ಲಕ್ಷ ರೂ. ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಅವರು ಜಿಲ್ಲಾ ಪಂಚಾಯಿತಿ ಅನುದಾನ 3ಲಕ್ಷ ರೂ. ಒಟ್ಟು ಹದಿನೈದು ಲಕ್ಷ ರೂ. ಗಳಲ್ಲಿ ನಡೆಯಲಿರುವ ಮುಡಿಪಿನ ರಾಜೀವಗಾಂಧಿ ಕ್ರೀಡಾಂಗಣದ ತಾತ್ಕಾಲಿಕ ಅಭಿವೃದ್ಧಿ ಕಾಮಗಾರಿಗೆ ಅವರು ಮಂಗಳವಾರ ಶಿಲನ್ಯಾಸಗೈದು ಮಾತನಾಡಿದರು.ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕ್ರೀಡಾಂಗಣಕ್ಕೆ ಸೀಮಿತವಾಗಿ ಐದು ಎಕರೆಯಷ್ಟು ಸರಕಾರಿ ಸ್ಥಳ ಎಲ್ಲೂ ಲಭ್ಯ ಇಲ್ಲದಿರುವುದರಿಂದ ಮುಡಿಪಿನ ಕ್ರೀಡಾಂಗಣವನ್ನು ನೂತನ ತಾಲೂಕಿನ ತಾಲೂಕು ಕ್ರೀಡಾಂಗಣವಾಗಿ ಮಾರ್ಪಡಿಸುವ ಎಲ್ಲ ಪ್ರಯತ್ನ ಮಾಡುತ್ತೇನೆ. ಅಷ್ಟಕ್ಕೂ ಇದು ಆಗಲೇಬೇಕಾದ ಕಾರ್ಯ. ನೂತನ ತಾಲೂಕು ಆದ ಬಳಿಕ ದೊಡ್ಡ ಮಟ್ಟದ ಕ್ರೀಡೆಗಳನ್ನು ತಾಲೂಕು ಮಟ್ಟದಲ್ಲಿ ನಡೆಸುವುದಾದರೆ ಇತರ ತಾಲೂಕುಗಳಿಗೆ ಒತ್ತಡ ಕಡಿಮೆ ಆಗಲಿದೆ, ನಮ್ಮ ತಾಲೂಕಿನಲ್ಲಿ ಕ್ರೀಡಾಕೂಟಗಳು ಸುಸೂತ್ರವಾಗಿ ನಡೆಯಲಿದೆ. ಈ ಪ್ರದೇಶ ಸಹಜವಾಗಿಯೇ ಇಲ್ಲಿ ಅಭಿವೃದ್ಧಿ ಆಗಲಿದೆ ಎಂದರು.
ಈ ಕ್ರೀಡಾಂಗಣ ಸಂಪೂರ್ಣ ಅಭಿವೃದ್ಧಿ ಪಡಿಸಲು ಜಿಲ್ಲಾ ಪಂಚಾಯಿತಿ ಸದಸ್ಯರು, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರ ಜೊತೆಗೆ ಸೇರಿ ಸಂಬಂಧಪಟ್ಟ ಇಲಾಖೆಯ ಜೊತೆಗೂ ಚರ್ಚೆ ನಡೆದಿದೆ. ಎಲ್ಲರ ಬೇಡಿಕೆಯಂತೆ ಇದನ್ನು ತಾಲೂಕು ಮಟ್ಟದ ಕ್ರೀಡಾಂಗಣವನ್ನಾಗಿ ಪರಿವರ್ತಿಸುವ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಹಾಗೆಯೇ ಅದಕ್ಕಾಗಿ ವಿಶೇಷ ಅನುದಾನ ಕೊಡುವ ಪ್ರಯತ್ನ ನಾನು ಖಂಡಿತಾ ಮಾಡುತ್ತೇನೆ. ತಾತ್ಕಾಲಿಕ ಕಾಮಗಾರಿಯಾದರೂ ಮುಂದಿನ ದಿನಗಳಲ್ಲಿ ಎಲ್ಲ ರೀತಿಯಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿಯಾಗಲು ನಾಂದಿ ಹಾಡಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಸದಸ್ಯ ಹೈದರ್ ಕೈರಂಗಳ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ವನಿತಾ ರೈ, ಸದಸ್ಯರುಗಳಾದ ನಾಸಿರ್ ನಡುಪದವು, ಹನೀಫ್, ಬಶೀರ್, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಪಜೀರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಪಜೀರು, ಅರುಣ್ ಡಿಸೋಜ ಮುಡಿಪು ಹಾಗೂ ಎನ್. ಪದ್ಮನಾಭ ನರಿಂಗಾನ ಉಪಸ್ಥಿತರಿದ್ದರು.


