UN NETWORKS
ಉಳ್ಳಾಲ : ಸರ್ಕಾರಕ್ಕೆ ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದರೂ ಕೆಲಸ ವಿಳಂಬವಾಗುತ್ತಿರುವ ಸಂದರ್ಭದಲ್ಲೂ ಸಾರ್ವಜನಿಕರ ಮುಂದಿನ ಬೇಡಿಕೆ ಬಗ್ಗೆ ಮುಂದಾಲೋಚನೆಯಿಂದ ಮುಖ್ಯಮಂತ್ರಿಗಳ ಮನವೊಲಿಸಿ ಉಳ್ಳಾಲ ತಾಲೂಕು ಘೋಷಿಸಿರುವ ಸಚಿವ ಯು.ಟಿ.ಖಾದರ್ ಅವರ ಕಾರ್ಯ ಶ್ಲಾಘನೀಯ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.
ಕೇಂದ್ರ ಜುಮ್ಮಾ ಮಸೀದಿ ಹಾಗೂ ದರ್ಗಾ ಸಮಿತಿಯ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಸಯ್ಯಿದ್ ಮದನಿ ದರ್ಗಾ ಮೂಲಕ ಇತಿಹಾಸದ ಪುಟದಲ್ಲಿರುವ ಉಳ್ಳಾಲದ ಸಮುದ್ರ ಕಿನಾರೆಗಳು ಪ್ರವಾಸೋದ್ಯಮದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ತಹಸೀಲ್ದಾರ್, ಕಂದಾಯಾಧಿಕಾರಿ ಹಾಗೂ ಸರ್ಕಾರಿ ಮಟ್ಟದ ಅಧಿಕಾರಿಗಳ ಭೇಟಿ ಕಾಲಬುಡದಲ್ಲೇ ಸಿಗಲಿದ್ದು ಮುಖ್ಯಮಂತ್ರಿ, ಸಚಿವರಿಗೆ ಅಭಿನಂದನೆ ಸಲ್ಲಿಸಲಾಗುವುದು. ಅದೇ ರೀತಿ ಕುಡಿಯುವ ನೀರಿನ ಸಮಸ್ಯೆ ಪರಿಹಾರ, ಒಳಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ದರ್ಗಾ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ತ್ವಾಹ, ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಬಾವ ಮುಹಮ್ಮದ್, ಕೋಶಾಧಿಕಾರಿ ಯು.ಕೆ.ಇಲ್ಯಾಸ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಜತೆ ಕಾರ್ಯದರ್ಶಿಗಳಾದ ನೌಷಾದ್ ಮೇಲಂಗಡಿ, ಆಝಾದ್ ಇಸ್ಮಾಯಿಲ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


