UN NETWORKS
ಕೈರಂಗಳ: “ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ’ ಕನ್ನಡ ಸಿನಿಮಾ ಚಿತ್ರೀಕರಣಗೊಂಡ ಕೈರಂಗಳ ಶಾಲೆಯ ಗ್ರಹಣ ಸ್ವಲ್ಪ ಮಟ್ಟಿಗೆ ಬಿಡುವ ಲಕ್ಷಣ ಕಾಣಿಸುತ್ತಿದೆ. ಚಿತ್ರ ಅಭೂತಪೂರ್ವ ಯಶಸ್ಸು ದಾಖಲಿಸಿದ ಖುಷಿಯಲ್ಲಿ ನಿರ್ಮಾಪಕ ರಿಷಬ್ ಶೆಟ್ಟಿ ಹಾಗೂ ತಂಡ ಕಳೆದ ಅಕ್ಟೋಬರ್ನಲ್ಲಿ ಕೈರಂಗಳ ಶಾಲೆಯಲ್ಲಿ ನಡೆದ ನಾಡಹಬ್ಬದಲ್ಲಿ ಪಾಲ್ಗೊಂಡು, ಮುಚ್ಚುವ ಭೀತಿಯಲ್ಲಿದ್ದ ಶಾಲೆಯ ಅಭಿವೃದ್ಧಿಗೆ ಸಹಕರಿಸುವುದಾಗಿ ಭರವಸೆ ನೀಡಿದ್ದರು. ಕೆಲವರು ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ದರಾದರೂ ಇನ್ನು ಕೆಲವು ಮಂದಿ ಪಾಪ, ರಿಷಬ್ ಶೆಟ್ಟಿಗೆ ಇದು ಇದು ಖಾಸಗಿ ಶಾಲೆ ಎಂಬ ಅರಿವು ಇಲ್ಲ, ಸರಕಾರಿ ಶಾಲೆ ಎಂದು ಭರವಸೆ ಕೊಟ್ಟಿರಬಹುದು, ಮುಂದಕ್ಕೆ ಕಷ್ಟ ಇದೆ. ಆಡಳಿತ ಮಂಡಳಿ ಸಹಕರಿದರೆ ಪುಣ್ಯ ಎಂಬ ಮಾತು ಕೇಳಿ ಬಂದಿತ್ತು.
ಅದೇನೆ ಇರಲಿ, ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಮುನ್ನೂರಕ್ಕೂ ಅಧಿಕ ಪೋಷಕರು ಮನಸ್ಸಿಲ್ಲದೆಯೇ ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸುತ್ತಿದ್ದರೂ ತಾವು ಕಲಿತ ಶಾಲೆ ಮುಂದಿನ ದಿನಗಳಲ್ಲಾದರೂ ಗತವೈಭವ ಮೆರೆಯಬಹುದು ಎಂಬ ಸಣ್ಣ ಆಸೆ ಮೊಳಕೆ ಒಡೆದಿತ್ತು. ಶಿಕ್ಷಣ ಪ್ರೇಮಿಗಳು, ಹಳೆ ವಿದ್ಯಾರ್ಥಿಗಳಿಗೆ ರಿಷಬ್ ನೀಡಿದ ಭರವಸೆಯ ಮಾತು ತುಂಬ ಖುಷಿ ಕೊಟ್ಟಿತ್ತು.ಚಿತ್ರೀಕರಣದ ಬ್ಯುಸಿ ಇದ್ದುದರಿಂದಲೋ ರಿಷಬ್ ಅವರಿಗೆ ಕಳೆದ ಮೂರು ತಿಂಗಳಿನಿಂದ ಕೈರಂಗಳ ಶಾಲೆಯ ಕಡೆಗೆ ಬರಲಾಗಲಿಲ್ಲ. ಆದರೆ ಚಿತ್ರೀಕರಣ ನಡೆಸುವ ಹಂತದಲ್ಲಿ ಇಲ್ಲಿನ ಸ್ಥಳೀಯರಲ್ಲಿ ಕೆಲವರನ್ನು ಬಹಳ ಹಚ್ಚಿಕೊಂಡಿದ್ದರು. ಅವರ ಮೂಲಕ ಮಾಹಿತಿ ಪಡೆಯುತ್ತಿದ್ದರು. ಹಾಗಿದ್ದರೂ ಕಳೆದ ಒಂದು ವಾರದಿಂದ ಶಾಲೆಯ ಮಾಡಿನ ಹೆಂಚು ತೆಗೆದು ಹೊಸ ರೀಪು ಹಾಗೂ ಅಡ್ಡ ಹಲಗೆ ಜೋಡಿಸುವ ಕಾರ್ಯ ನಡೆಯುತ್ತಿದ್ದು ಸ್ಥಳೀಯರಲ್ಲಿ ಸ್ವಲ್ಪ ಆಶಾಭಾವನೆ ಮೂಡಿಸಿದೆ. ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆಯಾದರೂ ಕೆಲಸಗಾರರು ರಿಷಬ್ ಶೆಟ್ಟಿ ಅವರೇ ಕೆಲಸ ಮಾಡಿಸುತ್ತಿದ್ದಾರೆ ಎಂಬ ಮಾತುಗಳನ್ನು ಆಡಿರುವುದು ಇನ್ನಷ್ಟು ಉಲ್ಲಾಸ ತಂದಿದೆ.
2018ರ ಶಾಲಾ ರಜೆಯ ಅವಧಿಯಲ್ಲಿ ಕೈರಂಗಳ ಶಾಲೆಯನ್ನು ಚಿತ್ರೀಕರಣಕ್ಕೆ ಬಳಸಲಾಗಿತ್ತು. ತಾಂತ್ರಿಕ ಕಾರಣದಿಂದ ಕಾಸರಗೋಡು ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಚಿತ್ರೀಕರಣಕ್ಕೆ ಕಾಸರಗೋಡಿನಲ್ಲಿ ಅವಕಾಶ ಸಿಗದಿರುವುದರಿಂದ ಕೈರಂಗಳ ಶಾಲೆಯ ಪರಿಸರ ಅಂತದ್ದೇ ಇದ್ದುದರಿಂದ ಈ ಶಾಲೆ ಆಯ್ಕೆ ಮಾಡಿದ್ದರು. ನಾಡಹಬ್ಬಕ್ಕೆ ಬಂದಿದ್ದ ರಿಷಬ್ ಶೆಟ್ಟಿ ಅವರನ್ನು ವಿಜಯ ಕರ್ನಾಟಕ ಪ್ರತಿನಿಧಿ ಮಾತನಾಡಿಸಿದ್ದಾಗ ಶಾಲೆಯ ಅಭಿವೃದ್ಧಿಗೆ ನನ್ನಿಂದಾದ ಸಹಾಯ ಖಂಡಿತ ಮಾಡುತ್ತೇನೆ. ನನ್ನಂತೆಯೇ ಕನ್ನಡಕ್ಕಾಗಿಯೇ ದುಡಿಯುವ ನನ್ನ ಮಿತ್ರರು ಇದ್ದಾರೆ. ಆ ತಂಡದ ಮೂಲಕ ಕೈರಂಗಳ ಶಾಲೆಗೆ ಮರುಜೀವ ಕೊಡಿಸುವ ಕೆಲಸ ಮಾಡಿಸುತ್ತೇನೆ. ಖಂಡಿತಾ ಗತ ವೈಭವ ಕಾಣಲು ಸಾಧ್ಯ. ಆದರೆ ಶಾಲಾ ಆಡಳಿತ ಮಂಡಳಿ ಪೂರ್ಣ ಪ್ರಮಾಣದಲ್ಲಿ ಸಹಕರಿಸಿದರೆ ಮಾತ್ರ ಎಂಬ ಮಾತನ್ನು ಉಲ್ಲೇಖಿಸಿದ್ದರು.
ಅಷ್ಟಕ್ಕೂ ಶತಮಾನಗಳ ಇತಿಹಾಸ ಇರುವ ಕೈರಂಗಳ ಶಾಲೆ ಉಳಿಯಬೇಕಾದರೆ ಕಟ್ಟಡ ದುರಸ್ತಿಯಾದರೆ ಸಾಲದು. ಸುಣ್ಣ ಬಣ್ಣ ಬಳಿದು ಗೋಡೆ ಅಲಂಕಾರಗೊಂಡರೆ ಸಾಲದು. ಇಲ್ಲಿಗೆ ಅವಶ್ಯವಿರುವುದು ಮಕ್ಕಳ ಸಂಖ್ಯೆ. ನಲ್ವತ್ತು ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಎಂಬ ಸರಕಾರಿ ನಿಯಮ ಇದ್ದರೂ ಇಲ್ಲಿ ಒಬ್ಬರು ಶಿಕ್ಷಕರಿದ್ದು ಈಗ ಇರುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ 25. ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕಿಯೊಬ್ಬರನ್ನು ಸೇರಿಸಲಾಗಿದ್ದು ಅವರು ಗಣಿತ, ವಿಜ್ಞಾನದ ಜೊತೆಗೆ ಇತರ ಪಠ್ಯವನ್ನು ಕಲಿಸುತ್ತಿದ್ದಾರೆ. ಮುಖ್ಯ ಶಿಕ್ಷಕರು ಶಾಲೆಗೆ ಸಂಬಂಧಪಟ್ಟ ಕಚೇರಿ ಕೆಲಸ ಎಂದು ಕೆಲವೊಮ್ಮೆ ಬಿ.ಸಿ.ರೋಡು, ಬಂಟ್ವಾಳಕ್ಕೆ ಬೆಳಗ್ಗೆ ಹೊರಟರೆ ಮತ್ತೆ ಎಲ್ಲ ಕಾರ್ಯ ಮುಗಿಸಿ ಬರುವಾಗ ಸಂಜೆಯಾಗುತ್ತದೆ. ಬುಧವಾರದಂದು ಕೂಡ ಮುಖ್ಯ ಶಿಕ್ಷಕರು ಕಚೇರಿ ಕೆಲಸಕ್ಕೆಂದು ತೆರಳಿದ್ದರು. ವಿದ್ಯಾರ್ಥಿಗಳು ಅವರ ಪಾಠ ಮಿಸ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ.
ಏಳನೆಯ ತರಗತಿಯಲ್ಲಿ ಇರುವ ಎಂಟು ವಿದ್ಯಾರ್ಥಿಗಳು ತೇರ್ಗಡೆ ಆಗಿ ಬೇರೆ ಶಾಲೆಗೆ ಹೋಗಲಿದ್ದು ಮತ್ತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಕೆಲಸ ಆಗಬೇಕಿದೆ. ಅದಕ್ಕಾಗಿ ಶಾಕಲೆಯ ವೈಶಿಷ್ಠ್ಯತೆ ಸಾರುವ ಭಿನ್ನ ಪ್ರಚಾರದ ಅಗತ್ಯ ಇದೆ. ಅಷ್ಟಕ್ಕೂ ಕೈರಂಗಳ ಶಾಲೆ ಮತ್ತೆ ಗತವಯಭವ ಸಾರಬೇಕಾದರೆ ರಿಷಬ್ ಶೆಟ್ಟಿ ಹೇಳಿದಂತೆ ಸುತ್ತಮುತ್ತಲಿನ ಪರಿಸರದಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಸಂಸ್ಥೆಗಳು ಹೆಚ್ಚು ಇರುವುದರಿಂದಾಗಿ ಈ ಶಾಲೆಯನ್ನು ಕನ್ನಡ ಮಾಧ್ಯಮ ಶಾಲೆಯಾಗಿಯೇ ಇಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೂ ಅವಕಶ ಕೊಡಬೇಕು. ಭವಿಷ್ಯದ ಜೀವನಕ್ಕಾಗಿ ವಿದ್ಯಾರ್ಥಿಗಳಿಗೆ ಎಲ್ಕೆಜಿ ಯುಕೆಜಿಯ ಅಗತ್ಯತೆಯನ್ನೂ ಸಾರಿದ್ದರು. ಅದಕ್ಕಾಗಿ ಆಡಳಿತ ಮಂಡಳಿ, ಪೋಷಕರು, ಶಿಕ್ಷಣ ಪ್ರೇಮಿಗಳು ಸಾಥ್ ನೀಡಬೇಕು. ಮನೆಮನೆಗೆ ತೆರಳಬೇಕು, ಅಂಗನವಾಡಿಗೆ ತೆರಳಿ ಆ ಮಕ್ಕಳನ್ನು ಇದೇ ಶಾಲೆಗೆ ಸೇರಿಸಲು ಪೋಷಕರ ಮನವೊಲಿಸುವ ಕಾರ್ಯ ನಡೆಸಬೇಕು. ಆಂಗ್ಲ ಶಿಕ್ಷಣವನ್ನು ಗುಣಮಟ್ಟದ ಶಿಕ್ಷಣ ಕೊಡಬೇಕು ಎಂದು ಹೇಳಿ ತಿಂಗಳು ನಾಲ್ಕು ಕಳೆದಿದೆ. ಆದರೆ ಸ್ಥಳೀಯರಲ್ಲಿ ವಿಚಾರಿಸಿದರೆ ಆಡಳಿತ ಮಂಡಳಿಯರು ಯಾರನ್ನು ಕರೆದಿದ್ದಾರೆ ಎಂದು ಅವರನ್ನೇ ಕೇಳಿ ಎಂದು ನಮ್ಮನ್ನು ಪ್ರಶ್ನಿಸಿದ್ದಾರೆ. ಅದೇನಿದ್ದರೂ ರಿಷಬ್ ಶೆಟ್ಟಿ ಅವರು ನಿಧಾನಗತಿಯಲ್ಲಾದರೂ ಶಾಲೆಗೆ ಜೀವ ಕೊಡುವ ಕೆಲಸ ಮಾಡುತ್ತಿದ್ದು ಕೈರಂಗಳ ಶಾಲೆಯ ಬಗ್ಗೆ ಧನಾತ್ಮಕ ಚಿಂತನೆ ನಡೆಸುವ ಮೂಲಕ ವಿದ್ಯಾರ್ಥಿಗಳ ಸೇರ್ಪಡೆಗೆ ಪೋಷಕರು ಆಸಕ್ತಿ ವಹಿಸಬೇಕಿದೆ. ಆ ಮೂಲಕ ವಿದ್ಯಾಸಂಸ್ಥೆ ಉಳಿಯುವ ಪ್ರಯತ್ನ ನಡೆಸಬೇಕು. ಯಾಕೆಂದರೆ ಒಂದರಿಂದ ಏಳನೆಯ ತರಗತಿ ತನಕ ಕಲಿಸಲಾಗುತ್ತಿದೆಯಾದರೂ ಇಲ್ಲಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ
1ರಲ್ಲಿ 2, 2ರಲ್ಲಿ 0, 3-6, 4-3, 5-5, 6-1, 7-8ವಿದ್ಯಾರ್ಥಿಗಳಿದ್ದಾರೆ. ಆರನೆಯ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಇದ್ದು ಆ ಹುಡುಗನ್ನು ಏಳನೆಯ ತರಗತಿಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಐಎಎಸ್ ಅಧಿಕಾರಿ, ತಜ್ಞ ವೈದ್ಯರು, ಎಂಜಿನಿಯರ್ಗಳು, ನ್ಯಾಯಾಧೀಶರು, ಪಿಎಚ್ಡಿ ಪದವೀಧರರು, ಐಐಟಿ ಶಿಕ್ಷಣ ಪಡೆದವರು, ವಿಜ್ಞಾನಿಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಕ್ರೀಡಾಪಟುಗಳು, ರಾಷ್ಟ್ರಮಟ್ಟದಲ್ಲಿ ಮಿಂಚಿದ ಯಕ್ಷಗಾನ ಭಾಗವತರು, ಕಲಾವಿದರು ಹಾಗೂ ನಾಟಕ ಕಲಾವಿದರು, ಜನಪದ ವಿದ್ವಾಂಸರನ್ನು ನೀಡಿದ ಕೈರಂಗಳ ಶಾಲೆಯ ದುರಂತವೆಂದರೆ ಸ್ಥಳೀಯರ ಪ್ರಕಾರ ಈ ಶಾಲೆಯನ್ನು ಮುನ್ನೆಲೆಗೆ ಕೊಂಡೊಯ್ಯಲು ಆಡಳಿತ ಮಂಡಳಿಗೆ ಇಚ್ಛಾಶಕ್ತಿಯ ಕೊರತೆ ಇದೆ ಎಂಬ ಆರೋಪ ಕಳೆದ ಒಂದು ದಶಕದಿಂದ ಕೇಳಿ ಬರುತ್ತಿದೆ. ಇಲ್ಲಿ ಮುಖ್ಯ ಶಿಕ್ಷಕ ದೇವದಾಸ ಅವರು ಮುಂದಿನ ವರ್ಷ ನಿವೃತ್ತಿಯಾಗಲಿದ್ದು ಅವರು ತಾನು ಅಸಹಾಯಕ. ಆಡಳಿತ ಮಮಡಳಿ ನಿರ್ಧಾರ ಯಾವುದಿದ್ದರೂ ಅದಕ್ಕೆ ನಾನು ಬದ್ಧನಾಗಿರಲೇಬೇಕು. ಹಾಗಿದ್ದರೂ ನಿವೃತ್ತಿಯಾಗುವ ತನಕ ಶಾಲೆ ಮುಚ್ಚದಿರಲಿ ಪ್ರಾರ್ಥಿಸುತ್ತೇನೆ ಎಂದು ಮಾಧ್ಯಮದ ಮುಂದೆಯೇ ಹೇಳಿಕೊಂಡಿದ್ದಾರೆ.ಮುವತ್ತೈದು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಮುಖ್ಯ ಶಿಕ್ಷಕರನ್ನು ನಿವೃತ್ತಿ ಹಂತದಲ್ಲಿ ಗೌರವಿಸುವ ಸನ್ಮಾನಿಸುವುದಕ್ಕೂ ಆಡಳಿತ ಮಂಡಳಿ ಮನಸ್ಸು ಮಾಡಿಲ್ಲಎಂಬ ಆರೋಪ ಇಲ್ಲಿನ ಹಿರಿಯ ವಿದ್ಯಾರ್ಥಿಗಳದ್ದು. ಕನಿಷ್ಠ ಹಳೆ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸುವ ಪ್ರಯತ್ನವನ್ನು ಮಾಡಿಲ್ಲ. ಅದ್ಯಾವುದರ ಅರಿವು ಇಲ್ಲದೆಯೋ ಇದ್ದೋ ರಿಷಬ್ ಶೆಟ್ಟಿ ಶಾಲೆಯನ್ನು ಮತ್ತೆ ಬೆಳಗಿಸುವ ಪ್ರಯತ್ನದಲ್ಲಿದ್ದು ಆಡಳಿತ ಮಂಡಳಿ ಆ ಬಗ್ಗೆ ಉತ್ಸುಕರಾಗಬೇಕಿದೆ.
ಪ್ರಸ್ತುತ ಕಾಲಘಟ್ಟದಲ್ಲಿಈ ಶಾಲೆಗೆ ಎಲ್ಕೆಜಿ ಯುಕೆಜಿ ಆಂಗ್ಲ ಮಾಧ್ಯಮ ಶಿಕ್ಷಣದ ಅಗತ್ಯ ಇದೆ. ಶಾಲೆಯ ಪ್ರಚಾರದ ಅಗತ್ಯ ಇದೆ. ಹಾಗೆ ಮಾಡಿದರೆ ಮಾತ್ರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಬಹುದು. ರಿಷಬ್ ಶೆಟ್ಟಿ ಅವರ ದೂರದೃಷ್ಟಿಗೆ ಆಡಳಿತ ಮಂಡಳಿ ಸಂಪೂರ್ಣ ಸಹಕರಿಸದರೆ ಮಾತ್ರ ಕಾರ್ಯಗತವಾಗಲು ಸಾಧ್ಯ.
ಹೈದರ್ ಕೈರಂಗಳ
ಶಾಲಾ ಹಳೆ ವಿದ್ಯಾರ್ಥಿ
ತಾಲೂಕು ಪಂಚಾಯಿತಿ ಸದಸ್ಯರು
ಬಂಟ್ವಾಳ


