UN NETWORKS
ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದ ಮೂರು ಗ್ರಾಮಗಳನ್ನು ಹೊರತು ಪಡಿಸಿ ಮಂಗಳೂರು ತಾಲೂಕು ಮತ್ತು ಬಂಟ್ವಾಳ ತಾಲೂಕಿನ ಗ್ರಾಮಗಳನ್ನು ಒಳಗೊಂಡ ನೂತನ ತಾಲೂಕು ಉಳ್ಳಾಲಕ್ಕೆ ರಾಜ್ಯ ಸರಕಾರ ಹಸಿರು ನಿಶಾನೆ ನೀಡಿದೆ.
ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಂಗಳೂರು ತಾಲೂಕು ವ್ಯಾಪ್ತಿಯ ಉಳ್ಳಾಲ ನಗರಸಭೆ, ಕೋಟೆಕಾರು ಪಟ್ಟಣ ಪಂಚಾಯತ್, ತಲಪಾಡಿ, ಸೋಮೇಶ್ವರ, ಕಿನ್ಯ, ಬೆಳ್ಮ, ಮುನ್ನೂರು, ಅಂಬ್ಲಮೊಗರು, ಹರೇಕಳ, ಪಾವೂರು, ಮಂಜನಾಡಿ, ಕೊಣಾಜೆ, ಬೋಳಿಯಾರು ಗ್ರಾಮಗಳು ಮತ್ತು ಬಂಟ್ವಾಳ ತಾಲೂಕು ವ್ಯಾಪ್ತಿಯ ನರಿಂಗಾನ, ಬಾಳೆಪುಣಿ- ಕೈರಂಗಳ, ಕುರ್ನಾಡು, ಸಜಿಪ ಪಡು, ಸಜಿಪ ನಡು, ಇರಾ, ಪಜೀರು ಗ್ರಾಮಗಳು ಸೇರ್ಪಡೆಯಾಗಲಿದ್ದು, ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿರುವ ಬಂಟ್ವಾಳ ತಾಲೂಕು ವ್ಯಾಪ್ತಿಯ ಮೇರೆಮಜಲು -ಕೊಡ್ಮಾಣ್, ಪುದು, ತುಂಬೆ ಗ್ರಾಮಗಳು ಉಳ್ಳಾಲ ತಾಲೂಕಿನಿಂದ ಹೊರಗುಳಿಯಲಿದೆ.
ನೂತನ ತಾಲೂಕು ರಚನೆಯಿಂದ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯಲಿದ್ದು, ತಾಲೂಕು ಕೇಂದ್ರದಿಂದ ವಂಚಿತವಾಗಿದ್ದ ಮೂಲಭೂತ ಸೌಕರ್ಯವಾಗಿದ್ದ ಅಗ್ನಿಶಾಮಕ ಠಾಣೆ, ಕ್ರೀಡಾಂಗಣ ನಿರ್ಮಾಣಕ್ಕೆ ಸಹಕಾರಿಯಾಗಲಿದ್ದು, ಯಾವುದೇ ಅಡೆತಡೆಯಿಲ್ಲದೆ ನೂತನ ತಾಲೂಕು ರಚನೆಯಾಗಿರುವುದು ಇತಿಹಾಸವಾಗಿದೆ ಎಂದು ಮಂಗಳೂರು ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.
ಶೀಘ್ರವೇ ಸವಲತ್ತುಗಳು ದೊರೆಯಲಿ :
ಸರಕಾರಿ ಕೆಲಸಗಳಿಗೆ ಮಂಗಳೂರಿಗೆ ಅಲೆದಾಡುವುದು ಉಳ್ಳಾಲದ ಜನತೆಗೆ ತಪ್ಪಲಿದೆ. ತಾಲೂಕು ಘೋಷಣೆಯಾದರೆ ಸಾಲದು, ಅಧಿಕಾರಿಗಳು, ಕಚೇರಿಯೂ ಶೀಘ್ರವೇ ಆಗಬೇಕಿದೆ. ಮಂಗಳೂರು ತಾಲೂಕು ಇದ್ದರೂ ಬಡವರಿಗೆ ಸಿಗುವ ಸವಲತ್ತುಗಳು ಸರಿಯಾಗಿ ಸಮಯಕ್ಕೆ ಸಿಗುವುದರಲ್ಲಿ ತೊಂದರೆಯಾಗುತ್ತಿದೆ. ಆದುದರಿಂದ ಶೀಘ್ರವೇ ಸಚಿವರು ತಾಲೂಕಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸುವಲ್ಲಿ ಪ್ರಯತ್ನಿಸಬೇಕಿದೆ.
ಮಹಮ್ಮದ್ ಮೋನು ಮುಕ್ಕಚ್ಚೇರಿ
ಹಿರಿಯ ನಗರಸಭೆ ಸದಸ್ಯರು


