UN NETWORKS
ಉಳ್ಳಾಲ: ರಾಜ್ಯದಲ್ಲೇ ಆಕರ್ಷಣೀಯ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಸೋಮನಾಥೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು, ಆರ್ಥಿಕತೆ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಪೂರೈಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು.
ಅವರು ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಭಾನುವಾರ ನಡೆದ ಸ್ವಚ್ಛ ಪರಿಸರ ಸ್ವಚ್ಛ ಮಂದಿರ ಕಲ್ಪನೆಯಡಿ ವಿದ್ಯಾರ್ಥಿಗಳ ಸಮೂಹ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಡಲತಡಿಯಲ್ಲಿರುವ ಶ್ರೀ ಕ್ಷೇತ್ರದ ರಾಜ್ಯದಲ್ಲೇ ಪ್ರೇಕ್ಷಣೀಯ ಸ್ಥಳ ಅನಿಸಿಕೊಂಡಿದೆ. ಆರ್ಥಿಕತೆಯ ಹಿನ್ನೆಡೆಯಿಂದಾಗಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ ಅನ್ನುವುದು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಗೊತ್ತಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸಿಗುವ ಎಲ್ಲಾ ರೀತಿಯ ಸಹಕಾರವನ್ನು ಪೂರೈಸಲು ಬದ್ಧ. ರಾಜ್ಯದಲ್ಲಿ ಜಿಲ್ಲೆಯ ಸ್ಕೌಟ್ಸ್ ಆಂಡ್ ಗೈಡ್ಸ್ ಮೊದಲ ಸ್ಥಾನದಲ್ಲಿವೆ. ಅದರ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿರುವುದು ಶ್ಲಾಘನೀಯ ಎಂದರು. ಈ ಸಂದರ್ಭ ಜಿಲ್ಲಾಧಿಕಾರಿಗಳನ್ನು ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಸೆಲ್ವ ಮಣಿ.ಆರ್ ಅವರನ್ನು ಶ್ರೀ ಸೋಮನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಅವರು ಸನ್ಮಾನಿಸಿದರು.
ಈ ಸಂದರ್ಭ ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೃಷ್ಣ ಗಟ್ಟಿ ಕೋಟೆಕಾರು, ಟ್ರಸ್ಟಿ ರಾಘವ್. ಆರ್ ಉಚ್ಚಿಲ್ ಹಾಗೂ ಮುಖಂಡರುಗಳಾದ ರುಕ್ಮಯ್ಯ ಬಂಗೇರ, ರಮೇಶ್ ಕೊಲ್ಯ, ಸುಧಾಕರ್ ಭಂಡಾರಿ, ಸೋಮೇಶ್ವರ ಗ್ರಾ.ಪಂ ಸದಸ್ಯರಾದ ದೀಪಕ್ ಪಿಲಾರ್, ಯೋಗೀಶ್ ಸೋಮೇಶ್ವರ, ಆನಂದಾಶ್ರಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗುರುಮೂರ್ತಿ, ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆ ದೈಹಿಕ ಶಿಕ್ಷಕ ತ್ಯಾಗಂ ಹರೇಕಳ, ಜೀವರಕ್ಷಕ ಅಶೋಕ್ ಸೋಮೇಶ್ವರ ಉಪಸ್ಥಿತರಿದ್ದರು.
ಸೋಮನಾಥ ಭಜನಾ ಮಂಡಳಿ, ಶಿವಭಕ್ತ ವೃಂದ ಇಲ್ಲಿನ ಸದಸ್ಯರು ಹಾಗೂ ಸೋಮೇಶ್ವರದ ಆನಂದಾಶ್ರಮ ಪ್ರೌಢಶಾಲೆ, ಉಳ್ಳಾಲದ ಭಾರತ್ ಪ್ರೌಢಶಾಲೆ, ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆ ವಿದ್ಯಾರ್ಥಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು.


