UN NETWORKS
ಉಳ್ಳಾಲ: ಆರೋಗ್ಯ ಸಂಬಂಧ ಮಾಹಿತಿ ದಾಖಲೀಕರಣ ತಂತ್ರಜ್ಞಾನ, ವೈದ್ಯರಿಂದ ರೋಗಗಳ ಕುರಿತು ವೈಯಕ್ತಿಕ ಮಾರ್ಗದರ್ಶನ ಪಡೆಯುವಲ್ಲಿ ಮೊಬೈಲ್ ಆ್ಯಪ್ ಗಳ ಸೇವೆ ದೇಶದೆಲ್ಲೆಡೆ ಆರಂಭವಾಗಬೇಕಿದೆ ಎಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಯನ್ ಚಿಪ್ಲುಂಕರ್ ಹೇಳಿದರು.
ಅವರು ನಿಟ್ಟೆ ಗುಲಾಬಿ ಶೆಟ್ಟಿ ಸ್ಮಾರಕ ಫಾರ್ಮಸಿ ಕಾಲೇಜು ವತಿಯಿಂದ ಪಾನೀರು ಕ್ಯಾಂಪಸ್ ನ ಆಡಿಟೋರಿಯಂ ನಲ್ಲಿ ಶನಿವಾರ ಜರಗಿದ ‘ ಪರ್ಸ್‍ಪೆಕ್ಟಿವ್ಸ್ ಆಫ್ ಕ್ವಾಲಿಟಿ ಇನ್ ಫಾರ್ಮಸಿಟಿಕಲ್ ಇಂಡಸ್ಟ್ರಿ ‘ ವಿಚಾರದ ಕುರಿತು ಒಂದು ದಿನದ ರಾಷ್ಟ್ರ ಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟ ಕಾಪಾಡುವ ಸಲುವಾಗಿ ಆಧುನಿಕ ತಂತ್ರಜ್ಞಾನದ ಮೂಲಕ ರೋಗಿಗಳ ಆರೋಗ್ಯ ಕುರಿತ ಮಾಹಿತಿ ದಾಖಲೀಕರಣ ಅಗತ್ಯವಿದೆ. ಈ ಮೂಲಕ ದೇಶದಾದ್ಯಂತ ಗುಣಮಟ್ಟದ ಆರೋಗ್ಯ ಸೇವೆ ಎಲ್ಲಾ ವರ್ಗದ ಜನರಿಗೂ ಒದಗಲು ಸಾಧ್ಯ. ಆರೋಗ್ಯ ಕ್ಷೇತ್ರದ ಉದ್ಯಮದಲ್ಲಿ ಹಲವು ಅಡೆಚಣೆಗಳಿವೆ. ಸರಕಾರದ ಹಲವು ನೀತಿಗಳಿಂದ ಕ್ಷೇತ್ರದ ಉದ್ಯಮಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆಯನ್ನು ಆರೋಗ್ಯಕ್ಷೇತ್ರದ ಉದ್ಯಮದವರು ನಡೆಸಬೇಕಾಗಿದೆ. ಖಾಸಗಿಯವರ ಇಂತಹ ಪಾಡಾದರೆ ಸರಕಾರಿ ಆಸ್ಪತ್ರೆಗಳ ಕಟ್ಟಡಗಳು ನಿರ್ಮಾಣವಾದರೂ ಖಾಯಂ ವೈದ್ಯರ ಕೊರತೆ ಇರುತ್ತದೆ. ಅಲ್ಲದೆ ರೋಗಪತ್ತೆಗೆ ಕೈಗೊಳ್ಳುವ ಸಲಕರಣೆಗಳು ಸರಕಾರಿ ಆಸ್ಪತ್ರೆಗಳಲ್ಲಿ ಇರದೇ ದೊಡ್ಡ ಆಸ್ಪತ್ರೆಗಳತ್ತ ಬಡವರು ಪರೀಕ್ಷೆಗೆ ಮೊರೆ ಹೋಗುವಂತಹ ಸ್ಥಿತಿಯಿದೆ. ಬಡ ವರ್ಗದವರಿಗೆ ಸರಕಾರ ರಚಿಸಿದ ಇಎಸ್ ಐ ನೀತಿ ಉತ್ತಮ ಕಾರ್ಯವಾಗಿದ್ದರೂ, ಅದಕ್ಕಾಗಿ ಅಲೆದಾಡುವ ಸ್ಥಿತಿ ಈಗಲೂ ಇದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗ ನಿರ್ದೇಶಕಿ ಡಾ.ಇಂದ್ರಾಣಿ ಕರುಣಾಸಾಗರ್ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲಿ ಗುಣಮಟ್ಟ ಕಾಯ್ದಿರಿಸುವಿಕೆ ಅತಿಮುಖ್ಯ. ಫಾರ್ಮಸಿ ತರಬೇತಿ ಪಡೆದವರು ಕೇವಲ ವೈದ್ಯಕೀಯ ಕ್ಷೇತ್ರವನ್ನು ಮಾತ್ರ ಆರಿಸದೆ ಕಾಸ್ಮೆಟಿಕ್ಸ್, ಆಹಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳಬಹುದು ಎಂದರು.
ನಿಟ್ಟೆ ಗುಲಾಬಿ ಶೆಟ್ಟಿ ಫಾರ್ಮಸಿ ಕಾಲೇಜು ಪ್ರಾಂಶುಪಾಲ ಡಾ| ಸಿ.ಯಸ್ ಶಾಸ್ತ್ರಿ ಉಪಸ್ಥಿತರಿದ್ದರು.ಬೆಂಗಳೂರು ಬೈಕುಂಜೆ ಕನ್ಸಲ್ಟೆನ್ಸಿಯ ಡಾ.ಉಮೇಶ್ ಬೈಕುಂಜೆ, ಬೆಂಗಳೂರು ಐಕ್ಯೂವಿಐಎ ಇದರ ಸೀನಿಯರ್ ಎಕ್ಸಿಕ್ಯೂಟಿವ್ ಡೇಟಾ ಮ್ಯಾನೇಜ್ ಮೆಂಟ್ ಸೌಮ್ಯಾ ತೆಟ್ಟಲಿಕ್ಕಲ್, ಸ್ಟೀರ್ ಇಂಜಿನಿಯರಿಂಗ್ ಮತ್ತು ಫಾರ್ಮಸಿಟಿಕಲ್ಸ್ ಇದರ ಸೀನಿಯರ್ ರಿಸ ಅಸೋಸಿಯೇಟ್ ರಕ್ಷಿತ್ ಶೆಟ್ಟಿ, ರಣದೀಪ್ ರಾಜೇಂದ್ರನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಡೇವಿನ್ ಮೆಂಡೋನ್ಸಾ , ರೆಲ್ಮಾ ಫುಟಾರ್ಡೊ ಕಾರ್ಯಕ್ರಮ ನಿರೂಪಿಸಿದರು. ಫಿಸಿಯೋಥೆರಪಿ ಕಾಲೇಜು ಉಪಪ್ರಾಂಶುಪಾಲ ಡಾ. ಆರ್. ನಾರಾಯಣ ಆಚಾರ್ಯುಲು ಸ್ವಾಗತಿಸಿದರು. ಡಾ. ಮರೀನಾ ಕೋಲಾಂಡ್ ವಂದಿಸಿದರು.


