UN NETWORKS
ಉಳ್ಳಾಲ: ಗಡಿಯಲ್ಲಿ ನಿತ್ಯವೂ ಸೈನಿಕರು ಸಾವನ್ನಪ್ಪುವ ಮೂಲಕ ದೇಶದ ಅಭದ್ರತೆಯಲ್ಲಿದೆ ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಆರೋಪಿಸಿದರು.
ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಆದೇಶದ ಮೇರೆಗೆ ನಗರಾಭಿವೃದ್ಧಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯ ಕರ್ತರಿಗೆ ಮಂಗಳವಾರ ಎಲಿಯಾರ್ ಪದವಿನ ಖಾಸಗಿ ರೆಸಾರ್ಟ್‍ನಲ್ಲಿ ನಡೆದ ಕಾರ್ಯಗಾರದಲ್ಲಿ ಅವರು ಸಲಹೆ ನೀಡಿದರು.ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಸ್ಥಾನವನ್ನು ಅಲಂಕರಿಸಿದರೆ ಮುಂದಿನ ದಿನಗಳಲ್ಲಿ ಚುನಾವಣೆ ಪ್ರಕ್ರಿಯೆಯೇ ಇರುವುದಿಲ್ಲ. ಯಾಕೆಂದರೆ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತ ಕೇಳುವಾಗ ನರೇಂದ್ರ ಮೋದಿ ಅವರು ಪರಾಜಯಗೊಂಡ, ಮಾತು ಪಾಲಿಸದ ನಾಯಕ. ರಾಹುಲ್ ಗಾಂಧಿ ಅವರು ಮಧ್ಯಪ್ರದೇಶ, ರಾಜಸ್ಥಾನ, ಛತ್ತ್ತೀಸ್‍ಗಡ ವಿಧಾನಸಭೆಯಲ್ಲಿ ಗೆದ್ದಾಗ ಕೇವಲ 24ಗಂಟೆಯೊಳಗಡೆ ರೈತರ ಸಾಲ ಮನ್ನಾ ಮಾಡುವ ಮೂಲಕ ಸತ್ಯಪರಿಪಾಲಕ ಎಂಬುದನ್ನು ಸಾಬೀತು ಪಡಿಸಿದರು.ಒಂದು ತಲೆ ತೆಗೆದರೆ ಹತ್ತು ತಲೆ ತೆಗೆಯುತ್ತೇನೆ ಎಂದು ಅಧಿಕಾರ ಸ್ವೀಕರಿಸಿದಾಗ ಆಡಿದ ಮಾತು ಈಗ ಮಾತು ಎಲ್ಲಿಗೆ ಹೋಯಿತು? ನವಾಝ್ ಶರೀಫ್ ಅವರ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಿರಿಯಾನಿ ಸೇವಿಸಿ ವಾಪಾಸು ಮರಳುತ್ತಿರುವಾಗ ಪಠಾಣಕೋಟ್ ದುರಂತಕ್ಕೆ ಕಾರಣರಾದರು. ಒಟ್ಟಿನಲ್ಲಿ ದೇಶ ಅಭದ್ರತೆಯಲ್ಲಿದೆ ಎಂದು ಹೇಳಿದರು.
ಉತ್ತರ ಭಾರತದಲ್ಲಿ ರೆಫ್ರಿಜರೇಟರ್ ನಲ್ಲಿ ಮಾಂಸ ಇಟ್ಟ ಆರೋಪದಿಂದ ಥಳಿತಕ್ಕೊಳಗಾದ ಗಂಭೀರತೆ ಕಾಣುವಾಗ ಅಲ್ಲಿ ಒಂದು ಕಿಲೋ ದನದ ಮಾಂಸ ಹಿಡಿದುಕೊಂಡು ಒಂದು ಕಿ. ಮೀ ನಡೆಯಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮೋದಿಯವರ ಆಡಳಿತ ವೈಫಲ್ಯ ಕಾರ್ಯಕರ್ತರು ವಿವರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೆ.ಪಿ.ಸಿ.ಸಿಯಿಂದ ನೇಮಕಗೊಂಡ ಅಬ್ದುಲ್ ಮುನೀರ್ ಬೆಂಗಳೂರು ಮತ್ತು ಶಂಭು ಶೆಟ್ಟಿ ಯವರು ಮಾಹಿತಿ ನೀಡಿದರು.ಸಚಿವ ಯು.ಟಿ. ಖಾದರ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ದ.ಕ. ಜಿಲ್ಲಾ ಚುನಾವಣಾ ಉಸ್ತುವಾರಿ ಧನಂಜಯ ಅಡ್ಪಂಗಾಯ, ಚುನಾವಣಾ ಉಸ್ತುವಾರಿ ಶಂಭು ಶೆಟ್ಟಿ, ಅಬ್ದುಲ್ ಮುನೀರ್, ಕೆಪಿಸಿಸಿ ಕಾರ್ಯದರ್ಶಿ ಮಮತಾ ಗಟ್ಟಿ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಹಾಗೂ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿ ರಹೆಮಾನ್ ಕೋಡಿಜಾಲ್ ಸ್ವಾಗತಿಸಿದರು. ಉಪಾಧ್ಯಕ್ಷ ಮಹಮ್ಮದ್ ಮುಸ್ತಾಫ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯದ ವೀರಯೋಧ ಎಚ್.ಗುರು ಅವರಿಗೆ ಕಾಂಗ್ರೆಸ್ ಮಂಗಳೂರು ವಿಧಾನ ಸಭಾ ಕ್ಷೇತ್ರದ ವತಿಯಿಂದ ಎರಡು ಲಕ್ಷ ರೂ. ಕೊಡುವುದಾಗಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಘೋಷಿಸಿದರು.


