UN NETWORKS
ಮುಡಿಪು : ಮುಸ್ಲಿಂ ಸಮಾಜದಲ್ಲಿ ಧಾರ್ಮಿಕ ಶಿಕ್ಷಣದ ಕೊರತೆ ಎದುರಾದಾಗ ಅವರಲ್ಲಿ ದುಷ್ಟಮನೋಭಾವನೆ ಬೇರೂರುತ್ತದೆ. ಸಮಾಜಘಾತುಕ ಕೃತ್ಯಗಳನ್ನು ನಡೆಸಲು ಮುಂದಾಗುತ್ತಾರೆ. ದೇಶದ ಜನತೆಗೆ ಬೇಡವಾದ ಕೃತ್ಯ ನಡೆಸುವ ಮುಸ್ಲಿಂ ಸಮಾಜದ ಯಾರೇ ಆದರೂ ಅವರನ್ನು ನೈಜ ಇಸ್ಲಾಂ ಎಂದಿಗೂ ಒಪ್ಪದು ಎಂದು ಧಾರ್ಮಿಕ ಮುಖಂಡ ಸಿಟಿಎಂ ಮುಹಮ್ಮದ್ ಸಲೀಂ ಅಸ್ಸಖಾಫ್ ತಂಙಳ್ ಹೇಳಿದರು.
ಮುಡಿಪು ಸಾಂಬಾರ್‍ತೋಟದಲ್ಲಿ ಅಲ್ ಅಬ್‍ರಾರ್ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ಶನಿವಾರ ನಡೆದ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸೌಮ್ಯ ಸ್ವಭಾವದ ಮುಸ್ಲಿಂ ಸಮಾಜ ಜಗತ್ತಿನೆಲ್ಲಡೆ ಬಹಳ ಸಂಕಷ್ಟದಲ್ಲಿ ಬದುಕುವಂತಹ ವಾತಾವರಣ ಸೃಷ್ಟಿಯಾಗಿದೆ. ಮುಸ್ಲಿಂರನ್ನು ತೀವ್ರವಾದಿಗಳು, ಭಯೋತ್ಪಾದಕರು ಎಂಬ ದೃಷ್ಟಿಯಲ್ಲಿ ನೋಡುವಂತಹ ಸ್ಥಿತಿ ಬಂದೊದಗಿದೆ. ಮುಸ್ಲಿಂರಾದರೂ ತಾವು ಹುಟ್ಟಿದ ಮಣ್ಣನ್ನು ಪ್ರೀತಿಸುವವರೇ ಆಗಿದ್ದಾರೆ. ಭಾರತದಲ್ಲಿ ಹುಟ್ಟಿದ ಮುಸ್ಲಿಂರು ಭಾರತ ಪ್ರೇಮಿಗಳೇ ಆಗಿದ್ದಾರೆ ಎಂದು ನುಡಿದರು.ಮುಸ್ಲಿಂ ಮಕ್ಕಳು ಮಸೀದಿಯಲ್ಲಿ ಐದು ಹೊತ್ತು ನಮಾಜ್ ಮಾಡುವ, ಭಾರತದ ಕಾನೂನಿಗೆ ವಿರುದ್ಧವಾಗಿ ನಡೆಯದಂತೆ, ಇಸ್ಲಾಂ ನಿಯಮ ಪಾಲಿಸುತ್ತಾ, ಭಾರತೀಯ ಸಂವಿಧಾನದ ಆಶಯಕ್ಕೆ ಬದ್ಧವಾಗಿ ಬದುಕಬೇಕು ಎಂದೇ ಶಿಕ್ಷಣ ಕೊಡಲಾಗುತ್ತದೆ. ದೇಶ ಕಾಯುವ ಯೋಧರನ್ನು ಕೊಂದ ದುಷ್ಟ ಯಾವತ್ತೂ ಮುಸ್ಲಿಂನಾಗಲಾರ. ಮುಸ್ಲಿಂ ಧರ್ಮದಲ್ಲಿ ಹುಟ್ಟಿದ ಒಬ್ಬ ವ್ಯಕ್ತಿ ಮಾಡುವ ಹೀನ ಕೃತ್ಯ ಸಮಾಜಕ್ಕೆ ಕೆಟ್ಟ ಹೆಸರು ತರುತ್ತದೆ. ದೇಶದ್ರೋಹ ಕೃತ್ಯ ನಡೆಸುವವರಿಗೆ, ಭಯೋತ್ಪಾದನೆ, ಉಗ್ರ ಚಟುವಟಿಕೆಗಳಿಗೆ ಇಸ್ಲಾಂ ಯಾವತ್ತೂ ಆಸ್ಪದ ನೀಡುವುದಿಲ್ಲ ಎಂದರು.
ಆಶಿಖ್‍ರ್ರಸೂಲ್ ಅಬ್ದುಲ್ ಖಾದರ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಸಈದ್ ಸಅದಿ ಕಾವುಂಬಡಿ ಕಾರ್ಯಕ್ರಮ ಉದ್ಘಾಟಿಸಿದರು.
ಹಂಝ ಮಿಸ್ಬಾಯಿ ಓಟಪಡವು ಮುಖ್ಯ ಭಾಷಣ ಮಾಡಿದರು. ಪಿ.ಕೆ. ಮದನಿ, ಆಸಿಫ್ ಸಖಾಫಿ ಅಲ್ ಅಝ್‍ಅರಿ, ಹೈದರ್ ಪರ್ತಿಪ್ಪಾಡಿ, ಹಸನ್ ಹಾಜಿ ಸಾಂಬಾರ್‍ತೋಟ, ಇಬ್ರಾಹಿಂ ಕೋಡಿಜಾಲ್, ಉಮರ್ ಪಜೀರ್, ಪುತ್ತುಬಾವ ಹಾಜಿ ಸಾಂಬಾರ್‍ತೋಟ, ಏಷ್ಯನ್ ಹಾಜಿ ಸಾಂಬರ್‍ತೋಟ, ಅಬ್ದುಲ್ ಮಜೀದ್ ಕಾಮಿಲ್ ಸಖಾಫಿ, ಎ.ಪಿ. ಸಿದ್ದೀಕ್ ಪಜೀರ್, ಇಬ್ರಾಹಿಂ ದಾರಿಮಿ, ಇಬ್ರಾಹಿಂ ಹಾಜಿ ತೋಟಾಲ್ ಕೆ.ಇ. ಅಬ್ದುಲ್ ಖಾದರ್ ರಝ್ವಿ, ಅಬ್ದುಲ್ಲಹಾಜಿ, ಮೂಸಕುಂಞ, ಪಿ.ಎಸ್. ಬಾವ ಸಾಂಬಾರ್‍ತೋಟ, ಎಸ್. ಮಹಮ್ಮದ್ ಸಾಂಬಾರ್ ತೋಟ ಉಪಸ್ಥಿತರಿದ್ದರು. ಮುಹಮ್ಮದ್ ಸಾಧಿಕ್ ಸಖಾಫಿ ಸ್ವಾಗತಿಸಿದರು.


