UN NETWORKS
ಉಳ್ಳಾಲ: ಕೇಂದ್ರ ಸರಕಾರ ಯುವ ಜನತೆಗಾಗಿ ಕೇಂದ್ರ ಸರಕಾರದ ದೀನ್ ದಯಾಳ್ ಕೌಶಲ ಯೋಜನೆ ಸೇರಿದಂತೆ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಆ ಎಲ್ಲ ಯೋಜನೆಗಳನ್ನು ಯುವಜನತೆ ಸದುಪಯೋಗಪಡಿಸಿಕೊಳ್ಳಬೇಕು. ಅದೇ ರೀತಿ ದೀನ್ ದಯಾಳ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅಭಿಪ್ರಾಯಪಟ್ಟರು.
ಭಾರತ ಸರಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಸಂತ ಅಲೋಶಿಯಸ್ ಕಾಲೇಜಿನ ದೀನ್ ದಯಾಳ್ ಉಪಾಧ್ಯಾಯ ಕೌಶಲ ಕೇಂದ್ರ ಹಾಗೂ ತಾಲೂಕು ಯುವಜನ ಒಕ್ಕೂಟ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ನಾಯಕತ್ವ ಹಾಗೂ ಸಮುದಾಯ ತರಬೇತಿ ಶಿಬಿರದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾತನಾಡಿ ಯುವ ಜನತೆ ಈ ದೇಶದ ಅಡಿಪಾಯವಿದ್ದಂತೆ. ಹಾಗಾಗಿ ಸಮಾಜದ ಅಭಿವೃದ್ಧಿಯಲ್ಲಿ ಯುವಜನತೆ ಪಾತ್ರ ಮಹತ್ವದಾಗಿದ್ದು ದೇಶದ ಅಭಿವೃದ್ಧಿಯಲ್ಲಿ ತಮ್ಮ ಕೊಡುಗೆ ನೀಡಬೇಕು ಎಂದು ತಿಳಿಸಿದರು.ಶಿಬಿರ ಉದ್ಘಾಟಿಸಿದ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ರೆ. ಫಾ. ಪ್ರದೀಪ್ ಅಂತೋನಿ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳುವ ಬಗೆ ಹಾಗೂ ಮಹತ್ವ ಶಿಬಿರಾರ್ಥಿಗಳಿಗೆ ವಿವರಿಸಿದರು.
ದೀನ್ ದಯಾಳ್ ಕೌಶಲ ಕೇಂದ್ರದ ನಿರ್ದೇಶಕ ರಿಚರ್ಡ್ ಗೊಂಸಾಲ್ವಿಸ್ ಮತದಾನದ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ನೆಹರೂ ಯುವ ಕೇಂದ್ರದ ಲೆಕ್ಕ ಪರಿಶೋಧಕ ಅಧಿಕಾರಿ ವಿಷ್ಣಮೂರ್ತಿ ಸ್ವಾಗತಿಸಿದರು. ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ರಘುವೀರ್ ಸೂಟರ್‍ಪೇಟೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೀರ್ತಿರಾಜ್ ಕಾರ್ಯಕ್ರಮ ನಿರೂಪಿಸಿದರು. ಶರತ್ ಶೆಟ್ಟಿ ವಂದಿಸಿದರು.


