UN NETWORKS
ಉಳ್ಳಾಲ: ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಹಾಗೂ ಯುವ ಹೋರಾಟಗಾರ ಎಂ. ಸಿರಾಜ್ ಅಡ್ಕರೆಗೆ “ಟೈಮ್ಸ್ ಆಫ್ ಕುಡ್ಲ ತುಳುನಾಡ ಬಲಿಪೆ (ತುಳುನಾಡ ಹುಲಿ) ಬಿರುದು” ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ. ಭಂಡಾರಿಯವರು ಪ್ರಶಸ್ತಿ ಪ್ರಧಾನಗೈದರು. ತುರವೇ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪತ್ರಿಕೆಯ ಸಂಪಾದಕರಾದ ಶಶಿ ಬಂಡಿಮಾರ್, ಸಾಹಿತಿ ಮಹೇಂದ್ರನಾಥ ಸಾಲೆತ್ತೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಡ್ಕರೆ ಪಡ್ಪು ಕೆ.ಬಿ ಹುಸೈನ್ ಹಾಗೂ ರುಖಿಯಾ ದಂಪತಿಯ ದ್ವಿತೀಯ ಪುತ್ರರಾದ ಇವರು ತನ್ನ ಪಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಗ್ರೀನ್ ವೀವ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪೂರೈಸಿ, ನಂತರ ಪಿ.ಯು.ಸಿ ಹಾಗೂ ಬಿ.ಬಿ.ಎಮ್ ಪದವಿಯನ್ನು ಟಿಪ್ಪು ಸುಲ್ತಾನ್ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜ್ನಲ್ಲಿ ವ್ಯಾಸಾಂಗ ಮಾಡಿರುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಸಮಾಜ ಸೇವೆಯ ಗುರಿಯನ್ನು ಇಟ್ಟುಕೊಂಡು ತುಳುನಾಡ ರಕ್ಷಣಾ ವೇದಿಕೆಯ ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು, ವಿವಿಧ ವಿದ್ಯಾರ್ಥಿ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿರುತ್ತಾರೆ. ರಾಜಕೀಯದಲ್ಲಿ ಗುರುತಿಸಿಕೊಂಡ ಇವರು ವಿದ್ಯಾರ್ಥಿ ಜನತಾದಳದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ಪ್ರಸ್ತುತ ತುಳುನಾಡ ರಕ್ಷಣಾ ವೇದಿಕೆಯ ಕೇಂದ್ರೀಯ ಮಂಡಳಿಯ ಸದಸ್ಯರಾಗಿ, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ವಿವಿಧ ಪ್ರಗತಿಪರ ಸಂಘಟನೆಗಳಲ್ಲಿ ಗುರುತಿಸಿಕೊಂಡು ಯುವ ಹೋರಾಟಗಾರರಾಗಿ, ಯುವ ವಾಗ್ಮಿಯಾಗಿ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡು ಉದಯೋನ್ಮುಖರಾಗಿ ಬೆಳೆಯುತ್ತಿದ್ದಾರೆ. ತುಳುನಾಡಿನ ಅಭಿವೃದ್ದಿಯ ಪರ ನಡೆಸಿರುವ ಅವಿರತ ಹೋರಾಟಗಳನ್ನು ಗುರುತಿಸಿ ಇವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಪತ್ರಿಕೆಯ ಮೂಲಗಳು ತಿಳಿಸಿವೆ.


