UN NETWORKS
ಹೊಸಂಗಡಿ: ವಿಶ್ವ ಕ್ಯಾನ್ಸರ್ ತಿಳುವಳಿಕಾ ದಿನ ಅಂಗವಾಗಿ ಅಂಗವಾಗಿ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಉಚಿತ ಬಾಯಿ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರ ಸೋಮವಾರ ನಡೆಯಿತು.
ಶಿಬಿರ ಉದ್ಘಾಟಿಸಿದ ಕಾಸರಗೋಡು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷದ್ ವರ್ಕಾಡಿ ಬಾಯಿ ಕ್ಯಾನ್ಸರ್ ಎನ್ನುವುದು ಹೆಚ್ಚಾಗಿ ಎಲೆ ಅಡಿಕೆ, ಹೊಗೆ ಸೊಪ್ಪು, ಗುಟ್ಕಾ, ಪಾನ್ ಪರಾಗ್, ಬೀಡಿ ಸಿಗರೇಟ್ ಮುಂತಾದ ತಂಬಾಕು ಉತ್ಪನ್ನಗಳ ಸೇವನೆಯಿಂದ ಬರುತ್ತದೆ. ಮತ್ತು ಈ ಚಟಗಳಿಂದ ದೂರವಾದರೆ ಬಹಳ ಸುಲಭವಾಗಿ ಬಾಯಿ ಕ್ಯಾನ್ಸರ್‍ನ್ನು ತಡೆಗಟ್ಟಬಹುದು ಎಂದು ನುಡಿದರು.ಸುರಕ್ಷ ದಂತ ಚಿಕಿತ್ಸಾಲಯದ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ ಫೆ. 4ರಿಂದ 28ರ ವರೆಗೆ ಶಿಬಿರ ನಡೆಯಲಿದ್ದು ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಬೇಕು. ಈಗಾಗಲೇ ತಂಬಾಕು ಉತ್ಪನ್ನ ಸೇವಿಸಿ ಬಾಯಿ ಹುಣ್ಣು, ಬಾಯಿ ಉರಿತ, ಬಾಯಿ ತೆರೆಯಾಲಾಗದಂತಹಾ ಸ್ಥಿತಿ ಅಥವಾ ಬಾಯಿಯಲ್ಲಿ ಬಿಳಿ ಅಥವಾ ಕೆಂಪು ಕಲೆಗಳು ಇದ್ದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ. ಆರಂಭಿಕ ಹಂತದಲ್ಲಿಯೇ ಬಾಯಿ ಕ್ಯಾನ್ಸರ್‍ನ್ನು ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ನುಡಿದರು.
ಸುರಕ್ಷಾ ದಂತ ಚಿಕಿತ್ಸಾಲಯದ ಡಾ. ರಾಜಶ್ರೀ ಮೋಹನ್, ಡಾ. ಶಮ್ನಾ ಹಾಗೂ ಡಾ. ನಿಶಿತಾ, ಹೊಸಂಗಡಿಯ ಹಿರಿಯ ಯು.ಕೆ ಅಹ್ಮದ್, ನಾರಾಯಣ, ಚಿಕಿತ್ಸಾಲಯದ ರಮ್ಯ, ಪ್ರಿಯ, ವಿಜೇತ, ಸೌಮ್ಯ, ವಾಣಿ ಉಪಸ್ಥಿತರಿದ್ದರು. ಸುರಕ್ಷಾ ದಂತ ಚಿಕಿತ್ಸಾಲಯ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಜಂಟಿ ಆಶ್ರಯದಲ್ಲಿ ಶಿಬಿರ ನಡೆಯುತ್ತಿದೆ. 20 ಮಂದಿ ರೋಗಿಗಳು ಉಚಿತ ಸಲಹೆ ಮತ್ತು ಮಾರ್ಗದರ್ಶನ ಪಡೆದರು.


