UN NETWORKS
ಪಾವೂರು: ಉಳಿಯ -ಅಡ್ಯಾರ್ ಸಂಪರ್ಕಿಸುವ ತೂಗುಸೇತುವೆಯನ್ನು ಹಾನಿಗೈದ ಕೃತ್ಯವನ್ನು ಡಿವೈಎಫ್‍ಐ ಖಂಡಿಸಿದ್ದು, ಆರೋಪಿಗಳ ಬಂಧನ ಹಿನ್ನೆಲೆಯಲ್ಲಿ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ಡಿವೈಎಫ್‍ಐ ಜಿಲ್ಲಾ ಸಮಿತಿಯ ನಿಯೋಗ ಸೇತುವೆ ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಡಿವೈಎಫ್‍ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ದ್ವೀಪ ನಿವಾಸಿಗಳು ಸೇರಿಕೊಂಡು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ ಸೇತುವೆ ನಾಶಗೊಳಿಸಿದ ದುಷ್ಕರ್ಮಿಗಳು ಮತ್ತು ಅವರಿಗೆ ಬೆನ್ನೆಲುಬಾಗಿ ನಿಂತ ವ್ಯಕ್ತಿಗಳನ್ನು ಬಂಧಿಸದಿದ್ದರೆ ಉಳಿಯ ಪ್ರದೇಶದ ನಾಗರಿಕರ ಹೋರಾಟಕ್ಕೆ ಡಿವೈಎಫ್‍ಐ ಸಂಪೂರ್ಣ ಬೆಂಬಲ ನೀಡಲಿದೆ. ಒಂದು ವಾರದೊಳಗೆ ಆರೋಪಿಗಳ ಬಂಧನವಾಗದಿದ್ದರೆ ನಾಗರಿಕರ ಜೊತೆ ಸೇರಿ ಮುಂದಿನ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು. ನಿಯೋಗದಲ್ಲಿ ರಫೀಕ್ ಹರೇಕಳ ಹಾಗೂ ಅಶ್ರಫ್ ಕೆ.ಸಿ.ರೋಡ್ ಉಪಸ್ಥಿತರಿದ್ದರು.
ಜೆಡಿಎಸ್‍ನಿಂದ ಮಾಹಿತಿ ಸಂಗ್ರಹ
ಮಂಗಳೂರು ಕ್ಷೇತ್ರ ಜಾತ್ಯಾತೀತ ಜನತಾದಳದ ನಿಯೋಗ ಸೋಮವಾರ ಉಳಿಯಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದೆ.
ಸೇತುವೆಗೆ ಹಾನಿಮಾಡಿದ ದುಷ್ಕರ್ಮಿಗಳನ್ನ ಪತ್ತೆಹಚ್ಚಿ ಶಿಕ್ಷಿಸಬೇಕು.ಈ ಪ್ರದೇಶ ಮತ್ತು ಜನರ ಸುರಕ್ಷತೆಗಾಗಿ ತಡೆಗೋಡೆಗಳನ್ನು ರಚಿಸಬೇಕು. ಪ್ರವಾಸೋಧ್ಯಮ ದೃಷ್ಟಿಯಿಂದ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಸ್ಥಳೀಯರಿಗೆ ಭರವಸೆ ನೀಡಲಾಯಿತು.
ರಾಜ್ಯ ಜನತಾದಳ ನಾಯಕರುಗಳಾದ ಅಬೂಬಕ್ಕರ್ ನಾಟೆಕಲ್, ನಝೀರ್ ಉಳ್ಳಾಲ್, ಕ್ಷೇತ್ರ ಕಾರ್ಯದರ್ಶಿ ಯು.ಎಚ್.ಫಾರೂಕ್, ಜಿಲ್ಲಾ ಉಪಾಧ್ಯಕ್ಷ, ಸಾಲಿಹ್ ಹರೇಕಳ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಲ್ಫ್ರೆಡ್ ಡಿಸೋಜ ಪಾವೂರು ಪಂಚಾಯಿತಿ ಮಾಜಿ ಉಪಾಧ್ಯಕ್ಷ ವಲೇರಿಯನ್ ಡಿಸೋಜ ಹಾಗೂ ಬಾಲಕೃಷ್ಣ ಜೊತೆಗಿದ್ದರು.ಸ್ಥಳೀಯ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ, ಬೆನ್ನ ಡಿಸೋಜ, ಡೇನಿಯಲ್ ಡಿಸೋಜ, ಸಂತೋಷ ಡಿಸೋಜ ಹಾಗೂ ಹಿಲೆರಿ ಡಿಸೋಜ ಮಾಹಿತಿ ನೀಡಿದರು.


