UN NETWORKS
ತಲಪಾಡಿ : ಬಡತನದಲ್ಲಿರುವ ಮಹಿಳೆಯೊಬ್ಬರಿಗೆ ಮಾತ್ರ ಹಕ್ಕು ಪತ್ರ ನೀಡಿಲ್ಲ. ಉಳಿದ ಮನೆಗಳಿಗೆ ನೀಡಲಾಗಿದೆ. ನೊಂದ ಮಹಿಳೆ ಆತ್ಮಹತ್ಯೆಗೂ ಮುಂದಾಗಿದ್ದರು ಎಂದು ತಲಪಾಡಿ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಗ್ರಾಮ ಸಭೆಯಲ್ಲಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಕೇಳಿದ ಪ್ರಶ್ನೆಗೆ ಪಂಚಾಯಿತಿ ಸದಸ್ಯರು ಮಾತ್ರವಲ್ಲದೆ ಗ್ರಾಮಸ್ಥರೂ ಧ್ವನಿಗೂಡಿಸಿದರು.

ತಲಪಾಡಿಯಲ್ಲಿ ಎಷ್ಟು ಮನೆಗಳಿಗೆ ಹಕ್ಕುಪತ್ರ ನೀಡಲಾಗಿದೆ, ಹಣ ಕಟ್ಟದೆ ಬಾಕಿಯಿರುವ ಮನೆಗಳೆಷ್ಟು? ಎನ್ನುವ ಮಾಹಿತಿ ಕಂದಾಯ ಇಲಾಖೆ ನೀಡಬೇಕು. ನಾಲ್ಕು ಮನೆಗಳ ಪೈಕಿ ಮೂರು ಮನೆಗಳಿಗೆ ಹಕ್ಕುಪತ್ರ ನೀಡಿದ್ದರೂ ಅರ್ಹ ಫಲಾನುಭವಿ ಸುಮಯ್ಯ ಎಂಬವರ ಮನೆಗೇಕೆ ನೀಡಿಲ್ಲ? ಇದರಿಂದ ಮಹಿಳೆ ಸಾಕಷ್ಟು ನೊಂದಿದ್ದಾರೆ ಎಂದು ಕಂದಾಯ ಇಲಾಖೆ ವಿರುದ್ಧ ಹರಿಹಾಯ್ದರು.
ಇದಕ್ಕೆ ಧ್ವನಿಗೂಡಿಸಿದ ಪಂಚಾಯಿತಿ ಸದಸ್ಯ ಇಬ್ರಾಹಿಂ ತಲಪಾಡಿ, ಹಕ್ಕುಪತ್ರ ಎಂದರೆ ಅಕ್ರಮ ಮನೆಗಳನ್ನು ಸಕ್ರಮಗೊಳಿಸುವುದಾಗಿದೆ. ಇದಕ್ಕೂ ಮನೆ ನಂಬ್ರ ಬೇಕು ಎಂದರೆ ಅಕ್ರಮ ಮನೆಗಳಿಗೆ ನಂಬ್ರ ಇರ್ತದಾ? ಗ್ರಾಮಕರಣಿಕರು ಇಲಾಖೆಗೆ ಸರಿಯಾದ ಮಾಹಿತಿಯನ್ನೇಕೆ ನೀಡಿಲ್ಲ ಎಂದು ಪ್ರಶ್ನಿಸಿದರು. ದ್ವನಿಗೂಡಿಸಿದ ಸಿದ್ದೀಕ್ ತಲಪಾಡಿ, ಬಾಡಿಗೆ ಮನೆಗಳಿಗೆ, ಹೆಂಡತಿ, ಮಕ್ಕಳ ಹೆಸರಲ್ಲಿ ಹಕ್ಕುಪತ್ರ ಮಂಜೂರು ಮಾಡಲಾಗಿದೆ. ಹಕ್ಕುಪತ್ರ ಪಡೆದ ಬಹುತೇಕ ಮನೆಗಳು ಸರ್ಕಾರಿ ಜಮೀನು ಖರೀದಿಸಿ ಮನೆ ಕಟ್ಟಿದ್ದಾಗಿದೆ. ಹಣ ಕೊಟ್ಟವರಿಗೆ ಹಕ್ಕುಪತ್ರ ಸಿಕ್ಕಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಇದನ್ನು ನಿಲ್ಲಿಸಿ. ವೇತನಕ್ಕೆ ಕೆಲಸ ಮಾಡದೆ ಮಾನವೀಯತೆಯಿಂದ ಕೆಲಸ ಮಾಡಿ. ಇಂತಹ ಪ್ರಕರಣ ಮರುಕಳಿಸಿದರೆ ನಿಮ್ಮ ಕಚೇರಿಗೆ ನುಗ್ಗಿ ದಾಂಧಲೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ಆರೋಪಗಳಿಗೆ ಉತ್ತರಿಸಿದ ಗ್ರಾಮಕರಣಿಕೆ ನಯನ, ನಾವು ಬಂದ ಅರ್ಜಿಗಳನ್ನು ತಾಲೂಕು ಕಚೇರಿಗೆ ಕಳುಹಿಸುತ್ತೇವೆ. ಹಕ್ಕುಪತ್ರ ನೀಡುವ ಜವಾಬ್ದಾರಿ ತಹಸೀಲ್ದಾರರದ್ದಾಗಿದೆ. ತಲಪಾಡಿಯಲ್ಲಿ ಇನ್ನು 35 ಅರ್ಜಿಗಳು ಮಾತ್ರ ಬಾಕಿ ಇದೆ ಎಂದರು.
ಈ ವಿಚಾರದಲ್ಲಿ ವಾದ-ಪ್ರತಿವಾದ ತಾರಕಕ್ಕೇರುವ ಹಂತ ತಲುಪಿತು. ಈ ಸಂದರ್ಭ ಮಧ್ಯ ಪ್ರವೇಶಿಸಿದ ನೋಡೆಲ್ ಅಧಿಕಾರಿ ಶ್ಯಾಮಲಾ, ಸುಮಯ್ಯ ಅವರ ಮನೆಗೆ ಹೋಗಿ ಪರಿಶೀಲನೆ ನಡೆಸಿ ಹಕ್ಕುಪತ್ರ ನೀಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಗ್ರಾಮಕರಣಿಕರಿಗೆ ಸೂಚಿಸುವ ಮೂಲಕ ಚರ್ಚೆಗೆ ತೆರೆ ಎಳೆದರು. ತಲಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಚಿಕಿತ್ಸೆಯಲ್ಲಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಆದರೆ ಅವರು ಯಾವ ಸಮಯದಲ್ಲಿ ಇರುತ್ತಾರೆ ಎನ್ನುವ ಬಗ್ಗೆ ಫಲಕ ಅಳವಡಿಸಬೇಕು ಎಂದು ಸಂಶುದ್ದೀನ್ ಉಚ್ಚಿಲ್ ಮನವಿ ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಪಕ್ಕ ವಸತಿಗಳಿದ್ದರೂ ವಾಹನ ಚಾಲಕರು ತ್ಯಾಜ್ಯ ಎಸೆಯುವುದು, ಅಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ದುರ್ವಾಸನೆ ಬರುತ್ತಿದ್ದು ವಾಸವೇ ಕಷ್ಟ ಎನಿಸಿದೆ ಎಂದು ಅಳಲು ತೋಡಿಕೊಂಡರು.
ಈ ಸಂದರ್ಭ ಮಾತನಾಡಿದ ತಾಲೂಕು ಪಂಚಾಯಿತಿ ಸದಸ್ಯ ಸಿದ್ದೀಕ್ ಕೊಳಂಗೆರೆ, ಕೇರಳ, ತಮಿಳ್ನಾಡಿಗೆ ಮಣ್ಣು ಸಾಗಿಸುವ ಲಾರಿಗಳಲ್ಲಿ ಮಣ್ಣು ಹೆಚ್ಚಿದ್ದರೆ ರಸ್ತೆಬದಿಯೇ ಸುರಿಯುತ್ತಾರೆ. ಅಲ್ಲದೆ ಗಲೀಜು ಮಾಡುವವರು ಹೊರ ರಾಜ್ಯದವರಾಗಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು. ಈ ಬಗ್ಗೆ ಮಾತನಾಡಿದ ಪಿಡಿಓ ಕೇಶವ ಪೂಜಾರಿ, ತಲಪಾಡಿಯಲ್ಲಿ ನೀರು ಮತ್ತು ತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿದೆ. ನೀರನ್ನಾದರೂ ಟ್ಯಾಂಕರ್ ಮೂಲಕ ತರಿಸಬಹುದು. ಸ.ನಂ.195/3ರಲ್ಲಿ ಘಟಕ ನಿರ್ಮಾಣಕ್ಕೆ 50 ಸೆಂಟ್ಸ್ ಜಮೀನು ಮೀಸಲಿಡುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ. ಆದರೆ ಅಲ್ಲಿಗೆ ಹೋಗುವ ರಸ್ತೆ ಖಾಸಗಿಯವರಿಗೆ ಸೇರಿದ್ದು ಸಮಸ್ಯೆಯಾಗಿದೆ. ಮಳೆನೀರು ಹರಿಯಲು ಗ್ರಾಮದಲ್ಲಿ ತೆರೆದ ಚರಂಡಿಗಳನ್ನು ನಿರ್ಮಿಸಲಾಗಿದೆ. ಆದರೆ ಮನೆಯ ತ್ಯಾಜ್ಯ ನೀರು ಬಿಡಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯಡಿ ತ್ಯಾಜ್ಯ ನೀರಿಗೆ ಇಂಗು ಗುಂಡಿ ನಿರ್ಮಾಣಕ್ಕೆ 14ಸಾವಿರ ರೂಪಾಯಿ ಸಿಗುತ್ತದೆ. ಗ್ರಾಮಸ್ಥರು ಅದರ ಪ್ರಯೋಜನ ಪಡೆಯಬೇಕು ಎಂದರು.
ಮೆಸ್ಕಾಂ ಎ.ಇ. ದಯಾನಂದ್, ಪಶು ಚಿಕಿತ್ಸಾಲಯದ ವೈದ್ಯಾಧಿಕಾರಿ ಸೆಲ್ವಿನಾ, ಆರಣ್ಯ ಇಲಾಖೆಯ ಸೌಮ್ಯ, ಹಿಂದುಳಿದ ವರ್ಗಗಳ ಇಲಾಖೆಯ ಪುಷ್ಪಲತಾ, ಪಂಚಾಯತ್‍ರಾಜ್ ಇಂಜಿನಿಯರ್ ನಿತೇಶ್, ಶಿಕ್ಷಣ ಇಲಾಖೆಯ ಗೀತಾ ಶ್ಯಾನುಭಾಗ್ ಇನ್ನಿತರ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹೆಣ್ಮಕ್ಕಳ ರಕ್ಷಣೆ ಬಗ್ಗೆ ಪ್ರತಿಜ್ಞೆ ಸ್ವೀಕರಿಸಲಾಯಿತು.


