UN NETWORKS
ಉಳ್ಳಾಲ: ಡ್ರೈವಿಂಗ್ ಶಾಲೆಯೊಂದರ ಶಿಕ್ಷಕ ದಂಪತಿ ಮೇಲೆ 50 ಮಂದಿಯ ತಂಡವೊಂದು ದಾಳಿ ನಡೆಸಿ ಕಾರು ಪುಡಿಗೈದು ನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆ ನಾಟೆಕಲ್ ಕಣಚೂರು ಆಸ್ಪತ್ರೆ ಎದುರುಗಡೆ ಸೋಮವಾರ ಸಂಜೆ ವೇಳೆ ಸಂಭವಿಸಿದೆ. ಪ್ರಕರಣ ಸಂಬಂಧ ನಾಲ್ವರನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುಡಿಪು ಸ್ಮಾರ್ಟ್ ಮೋಟಾರ್ ಡ್ರೈವಿಂಗ್ ಶಾಲೆಯ ಥೋಮಸ್(45) ಎಂಬವರಿಗೆ ಗಂಭೀರ ಹಲ್ಲೆ ನಡೆಸಲಾಗಿದೆ.
ಘಟನೆ ವಿವರ: ಥೋಮಸ್ ಮತ್ತು ಅವರ ಪತ್ನಿ ಕಾರನ್ನು ಚಲಾಯಿಸುತ್ತಿದ್ದ ಸಂದರ್ಭ, ಅದೇ ಕಾರಿನಲ್ಲಿ ಕಾರು ಕಲಿಯಲು ಬಂದಿದ್ದ ಮುಸ್ಲಿಂ ಮಹಿಳೆಯೊಬ್ಬರಿದ್ದರು. ಇದರ ಬಗ್ಗೆ ಕೆಂಗಣ್ಣು ಬೀರಿದ ನೈತಿಕ ಪೊಲೀಸರ ತಂಡವೊಂದು ಕಾರನ್ನು ನಾಟೆಕಲ್ ಕಣಚೂರು ಆಸ್ಪತ್ರೆ ಎದುರುಗಡೆ ತಡೆದಿದ್ದಾರೆ. ಬಳಿಕ ಕಲ್ಲಿನಿಂದ ಕಾರಿನ ಗಾಜು ಪುಡಿಗೈದು ಹಾನಿಗೊಳಿಸಿದ್ದಾರೆ. ಕಾರು ಚಲಾಯಿಸುತ್ತಿದ್ದ ಥೋಮಸ್ ಅವರಿಗೆ ಗಂಭೀರ ಹಲ್ಲೆ ನಡೆಸಿ ಪತ್ನಿಗೂ ದಾಳಿ ನಡೆಸಿದ್ದಾರೆ. ಸುಮಾರು 50 ಮಂದಿಯ ತಂಡ ಕೃತ್ಯದಲ್ಲಿ ಭಾಗಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರಿನಲ್ಲಿ ಮುಸ್ಲಿಂ ಮಹಿಳೆ ಇದ್ದುದರಿಂದಲೇ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಕಾರಿನಲ್ಲಿದ್ದ ಮಹಿಳೆ ಪಂಚಾಯಿತಿ ಸದಸ್ಯರೊಬ್ಬರ ಪುತ್ರಿಯಾಗಿದ್ದಾರೆ.
ಉದ್ರಿಕ್ತ ವಾತಾವರಣ : ಘಟನೆಯಿಂದ ಸ್ಥಳದಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿದೆ. ಕೊಣಾಜೆ ಪೊಲೀಸರು ದಾಳಿಯಲ್ಲಿ ಭಾಗಿಯಾದರೆನ್ನಲಾದ ನಾಲ್ವರನ್ನು ವಶಕ್ಕೆ ಪಡೆಯುತ್ತಿದ್ದಂತೆ, ಸ್ಥಳೀಯರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಇದೀಗ ಕೊಣಾಜೆ ಪೊಲೀಸ್ ಠಾಣೆಯೆದುರು ಜಮಾಯಿಸಿದ್ದಾರೆ. ಸ್ತಳಕ್ಕೆ ಎಸಿಪಿ ರಾಮರಾವ್, ಕೊಣಾಜೆ ಠಾಣಾಧಿಕಾರಿ ರವೀಶ ನಾಯಕ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.


