ಉಳ್ಳಾಲ್ ನ್ಯೂಸ್ ಡೆಸ್ಕ್
ಉಳ್ಳಾಲ: ಸೋಮೇಶ್ವರ ಸಮುದ್ರ ತೀರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನೋರ್ವನನ್ನು ಪಣಂಬೂರು ಬೀಚ್ ಅಭಿವೃದ್ಧಿ ಯೋಜನೆಯ ನಾಲ್ವರು ಸದಸ್ಯರು ರಕ್ಷಿಸಿದ್ದಾರೆ.
ಗುಲಬರ್ಗಾ ಶಿವಪುರದ ನಿವಾಸಿ ಶಿವುಕುಮಾರ್ (೨೧) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಭಾನುವಾರ ಸಂಜೆ ೭.೩೦ರ ಸುಮಾರಿಗೆ ಸಮುದ್ರ ಕಿನಾರೆಗೆ ಬಂದಿದ್ದ ಶಿವುಕುಮಾರ್ ದೇವಸ್ಥಾನ ಸಮೀಪದ ಸಮುದ್ರ ತೀರದಿಂದ ತುಸು ದೂರ ನಡೆದುಕೊಂಡು ಹೋಗಿ ಬ್ಯಾಗನ್ನು ಎಸೆದು ಬಳಿಕ ಹಾರಿದ್ದನು. ಇದನ್ನು ಗಮನಿಸಿದ ಬೀಚ್ ಅಭಿವೃದ್ಧಿ ಯೋಜನೆಯ ಸದಸ್ಯರಾದ ಅಶೋಕ್ ಸೋಮೇಶ್ವರ, ಮೋಹನ್‌ಚಂದ್ರ ಸೋಮೇಶ್ವರ, ಕಿರಣ್ ಒಂಭತ್ತುಕೆರೆ, ವೆಂಕಟೇಶ್ ಸೋಮೇಶ್ವರ ಸಮುದ್ರಕ್ಕೆ ಹಾರಿ ೧೫ ನಿಮಿಷಗಳ ಕಾಲ ಕಾರ್‍ಯಾಚರಣೆ ನಡೆಸಿ ಶಿವುಕುಮಾರನನ್ನು ರಕ್ಷಿಸಿದ್ದಾರೆ. ಶಿವುಕುಮಾರ್ ಬೆಂಗಳೂರಿನ ಸರಕಾರಿ ಇಲಾಖೆಯೊಂದರಲ್ಲಿ ಕಾರ್‍ಯ ನಿರ್ವಹಿಸುತ್ತಿದ್ದಾರೆ. ಕೌಟುಂಬಿಕ ಕಲಹಕ್ಕೆ ನೊಂದು ಶಿವುಕುಮಾರ್ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ.


