UN NETWORKS
ಕುತ್ತಾರು: ಕುತ್ತಾರು ಎಂಬುದು ಪುಣ್ಯಭೂಮಿ. ರಕ್ತೇಶ್ವರೀ ಕಾರಣಿಕ ಶಕ್ತಿಯಾಗಿದ್ದು ಪ್ರಶ್ನೆ ಚಿಂತನೆಯಲ್ಲಿ ಕಂಡುಬಂದಂತೆ ಕುತ್ತಾರು ಕನ್ನಡಿಕೆರೆ ಋಷಿಮುನಿಗಳೇ ತಪಸ್ಸು ಮಾಡುತ್ತಿದ್ದ ಅತಿ ಪವಿತ್ರವಾದ ತಪೋ ಭೂಮಿ. ಹಾಗಾಗಿ ಇಲ್ಲಿ ಕ್ಷೇತ್ರ ನಿರ್ಮಾಣ ಅತಿ ಶೀಘ್ರದಲ್ಲಿ ನಡೆಯುವುದರಿಂದ ಸಮಾಜದ ಎಲ್ಲರಿಗೂ ಒಳಿತಾಗಲಿದೆ ಎಂದು ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಆಶೀರ್ವಚನದ ಮಾತುಗಳನ್ನಾಡಿದರು.
ಕುತ್ತಾರು ಕನ್ನಡಿಕೆರೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಕನ್ನಡಿಕೆರೆ ಆದಿಸ್ಥಳ ಶ್ರೀ ರಕ್ತೇಶ್ವರೀ ಎಳ್ವೆರ್ ಸಿರಿಗಳು ಕೊರಗಜ್ಜ ಕ್ಷೇತ್ರಕ್ಕೆ ಭಾನುವಾರ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಉಳ್ಳಾಲ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕರ ಕಿಣಿ ಮಾತನಾಡಿ ಇಂದಿನ ಪೀಳಿಗೆಯ ಭಾಗ್ಯ ಎಂಬಂತೆ ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಕ್ಷೇತ್ರಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆಯುವುದನ್ನು ಕಾಣುವುದೇ ನಮ್ಮ ಪುಣ್ಯ, ನಮ್ಮ ಭಾಗ್ಯ ಎಂದು ನುಡಿದರು.ಧಾರ್ಮಿಕ ಕಾರ್ಯಗಳನ್ನು ದೇವರು ಅವರಿಗೆ ಬೇಕಾದಾಗ ನಮ್ಮಿಂದ ಮಾಡಿಸುತ್ತಾರೆ. ಅದಕ್ಕೆ ಸಂಶಯವೇ ಬೇಡ. ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಅತಿ ಮುಖ್ಯ. ಗಂಗೆ ಯಮನೆ ಸರಸ್ವತಿಯತ್ತ ನಾವೇ ಹೋಗಿ ಮಿಂದು ಪಾಪ ಕಳೆದು ಬರಬೇಕು ಹೊರತು ಗಂಗೆ ಯಮುನೆ ಸರಸ್ವತಿ ನಮ್ಮ ಬಳಿಗೆ ಬರುವುದಿಲ್ಲ. ಹಾಗಾಗಿ ನಮ್ಮ ಊರಿನ ಉದ್ಧಾರಕ್ಕೆ ಅಗತ್ಯವಿರುವ ಕ್ಷೇತ್ರ ನಿರ್ಮಾಣ ದೇವ ಕಾರ್ಯಕ್ಕೆ ಎಲ್ಲರು ಒಂದೇ ಮನಸ್ಸಿನಿಂದ ಕೈಜೋಡಿಸಬೇಕು ಎಂದು ನುಡಿದರು.
ಶಿಲಾನ್ಯಾಸಗೈದ ಪುರೋಹಿತ ಮವಂತೂರು ರಾಜಾರಾಂ ಭಟ್ ಮಾತನಾಡಿ ಶಿಲಾನ್ಯಾಸ ಅಂದರೆ ಕಲ್ಲನ್ನು ತೆಗೆದು ಇಡುವುದು. ನ್ಯಾಸ ನ್ಯಾಸಭೂತವಾಗಿದ್ದುಕೊಂಡೇ ಮನಸ್ಸಿನ ಸಂಕಲ್ಪಗಳು ಸಿದ್ಧಿಯಾಗುವವರೆಗೂ ಧನಾತ್ಮಕವಾಗಿ ಮುಂದುವರಿದರೆ ಮಾತ್ರ ಶಿಲಾನ್ಯಾಸ ಕಾರ್ಯಕ್ರಮ ಅರ್ಥಪೂರ್ಣ ಎಂದು ಹೇಳಿದರು.ಕ್ಷೇತ್ರದ ವಾಸ್ತು ಶಿಲ್ಪಿ ರಮೇಶ್ ಕಾರಂತ ಬೆದ್ರಡ್ಕ, ಉಳ್ಳಾಲ ಶ್ರೀ ಚೀರುಂಭ ಭಗವತಿ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಹಾಗೂ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮರ್ ರೈ ಬೋಳಿಯಾರ್, ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಕೆ.ಟಿ.ಸುವರ್ಣ, ಸೋಮನಾಥ ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಗಟ್ಟಿ ವಗ್ಗ, ಉದ್ಯಮಿ ಭಾಸ್ಕರ್ ದೇವಸ್ಯ , ಕುತ್ತಾರು ಶ್ರೀ ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ಗೌರವಾಧ್ಯಕ್ಷ ರಾಮಕೃಷ್ಣ ಕಾಯಂಗಳ, ಉದ್ಯಮಿ ಮೋಹನ್ ಮೆಂಡನ್, ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಅಡ್ಯಂತಾಯ, ಉದ್ಯಮಿ ಪ್ರಸಾದ್ ರೈ ಕಲ್ಲಿಮಾರು, ಸಂಜೀವ ಉಳಿಯ, ಜಾಗದ ಮಾಲೀಕ ನಳಿನಿ ಕಿಣಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಪಿಲಾರು ಶ್ರೀ ಮಹಾವಿಷ್ಣು ದೇವಸ್ಥಾನದ ಅಧ್ಯಕ್ಷ ನಾಗೇಶ್ ಗಟ್ಟಿ, ರಕ್ತೇಶ್ವರಿ ದೈವಸ್ಥಾನದ ಅಧ್ಯಕ್ಷ ರಾಮ್‍ದಾಸ್, ಕುಂಪಲ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಆದ್ಯಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಮೋನಪ್ಪ ಸಫಲಿಗ, ಉದ್ಯಮಿ ಕೇಶವದಾಸ್ ಬಗಂಬಿಲ, ಕೊಲ್ಲೂರು ದೇವಸ್ಥಾನದ ಟ್ರಸ್ಟಿ ಅಭಿಲಾಷ್, ಪ್ರಶಾಂತ್ ಕಾಪಿಕಾಡ್, ಹರಿಯಪ್ಪ ಸಾಲ್ಯಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರ ನಿರ್ಮಾಣ ಸಮಿತಿ ಮುಖ್ಯಸ್ಥ ಹರೀಶ್ ಕುತ್ತಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಜಯರಾಂ ಚೆಂಬುಗುಡ್ಡೆ ಸ್ವಾಗತಿಸಿದರು. ಮಧುಸೂಧನ್ ವಿಜ್ಞಾಪನಾ ಪತ್ರ ವಾಚಿಸಿದರು.




