UN NETWORKS
ಉಳ್ಳಾಲ: ಸೂಚನಾ ಫಲಕದಲ್ಲಿ ಹಾಕಿರುವ ಸೂಚನೆಯಂತೆ ವಾಹನ ಸವಾರರು ಹೋದಲ್ಲಿ ಆಸ್ಪತ್ರೆ ಸೇರುವುದು ಖಚಿತ. ಕಳೆದ ಮೂರು ವರ್ಷಗಳಿಂದ ವಾಹನ ಸವಾರರು ಇಂತಹ ಇಕ್ಕಟ್ಟಿಗೆ ಸಿಲುಕುತ್ತಲೇ ಬಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿಯಿಂದಾಗಿ ಯುನಿಟಿ ಸಭಾಂಗಣದ ಎದುರುಗಡೆಯ ರಸ್ತೆಯಲ್ಲಿ ಹಾಕಿರುವ ಮಣ್ಣಿನ ರಾಶಿಯಿಂದಾಗಿ ನಿತ್ಯ ನಿರಂತರ ಅಪಘಾತಗಳು ಸಂಭವಿಸುತ್ತಲೇ ಇದ್ದರೂ ಜಿಲ್ಲಾಡಳಿತವಾಗಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ ಇತ್ತ ಗಮನಹರಿಸದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮವಾರ ತಡರಾತ್ರಿ ಕೇರಳ ಕಡೆಗೆ ತೆರಳುತ್ತಿದ್ದ ಕಾರು ಯುನಿಟಿ ಸಭಾಂಗಣದ ಎದುರುಗಡೆ ರಾ.ಹೆ.ಯಲ್ಲಿ ಹಾಕಲಾಗಿರುವ ಮಣ್ಣಿನ ರಾಶಿಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗಳಾಗಿರುವ ಕುರಿತು ಯಾವುದೇ ವರದಿಯಿಲ್ಲ. ಇಂತಹ ಅಪಘಾತಗಳು ನಿರಂತರವಾಗಿ ನಡೆಯುತ್ತಲೇ ಬಂದಿರುವ ವಿರುದ್ಧ ಇದೀಗ ಸ್ಥಳೀಯರು ಜನಪ್ರತಿನಿಧಿಗಳು ಹಾಗೂ ಗುತ್ತಿಗೆ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಎಂಟು ವರ್ಷಗಳಿಂದ ನಡೆಯುತ್ತಲೇ ಇದೆ. ಕಾಮಗಾರಿ ಸಂದರ್ಭ ವಾಹನ ಸವಾರರಿಗೆ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡಬೇಕಾದ ಗುತ್ತಿಗೆ ಕಂಪೆನಿ ಅದರಲ್ಲಿ ಸಂಪೂರ್ಣ ವಿಫಲವಾಗಿದೆ ಅನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಕಲ್ಲಾಪು ಯುನಿಟಿ ಸಭಾಂಗಣದ ಎದುರುಗಡೆ ಫ್ಲೈಓವರ್ ಕಾಮಗಾರಿ ಹಿನ್ನೆಲೆಯಲ್ಲಿ ಹೆದ್ದಾರಿ ರಸ್ತೆಯಲ್ಲೇ ಮಣ್ಣಿನ ರಾಶಿ ಹಾಕಲಾಗಿದೆ. ಮಣ್ಣು ಹಾಕಿರುವ ಸ್ಥಳದಿಂದ ಸ್ವಲ್ಪ ಎದುರಲ್ಲಿ ಕೇರಳದ ಕಣ್ಣೂರು ಹೋಗಲು ನೇರ ಮತ್ತು ದೇರಳಕಟ್ಟೆ ಹೋಗಲು ಎಡಭಾಗಕ್ಕೆ ಸೂಚಿಸಿರುವ ನಾಮಫಲಕವಿದೆ. ಇದರಿಂದ ದೂರದ ವಾಹನ ಸವಾರರು ನೇರ ಬಂದು ಮಣ್ಣಿಗೆ ಢಿಕ್ಕಿ ಹೊಡೆಯುತ್ತಿರುವ ಘಟನೆಗಳು ನಡೆಯುತ್ತಿದೆ. ಹೆಚ್ಚಾಗಿ ಕೇರಳ ಭಾಗದ ವಾಹನ ಸವಾರರೇ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಆದರೆ ಪೊಲೀಸ್ ಪ್ರಕರಣ ದಾಖಲಿಸದೇ ಬಳಿಕ ತಾವೇ ಹಾನಿಗೀಡಾದ ವಾಹನಗಳನ್ನು ಕೊಂಡೊಯ್ಯುತ್ತಿರುವ ಉದಾಹರಣೆಗಳು ನಡೆದಿದೆ.
10 ದಿನಗಳ ಹಿಂದಷ್ಟೇ ಕೊಚ್ಚಿನ್ ಮೂಲದ ಇನೋವಾ ಕಾರು ಮಣ್ಣಿನ ದಿಬ್ಬಕ್ಕೆ ಢಿಕ್ಕಿ ಹೊಡೆದಿತ್ತು, ಅದರಲ್ಲಿ ಮಹಿಳೆಯರು, ಮಕ್ಕಳು ಸಹಿತ ಪ್ರಯಾಣಿಕರಿದ್ದರು. ಪವಾಡಸದೃಶವಾಗಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಎಲ್ಲರನ್ನು ಕಾರಿನಿಂದ ಆಸ್ಪತ್ರೆಗೆ ಕರೆದೊಯ್ಡು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿದ್ದೇವೆ. ಇದಕ್ಕೂ ಮುನ್ನ ತಡರಾತ್ರಿ ಚಾಲಕರಿಗೆ ಹೆದ್ದಾರಿಯಲ್ಲಿ ಹಾಕಿರುವ ಮಣ್ಣಿನ ರಾಶಿಯ ಅರಿವಿಲ್ಲದೆ ಅಪಘಾತಗಳು ನಡೆಯುತ್ತಲೇ ಇತ್ತು.
ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ತುರ್ತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ, ಪೊಲೀಸ್ ಕಮೀಷನರ್, ಸಚಿವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಎಲ್ಲರಿಗೂ ದೂರು ನೀಡಲಾಗಿದೆ. ಆದರೂ ಈವರೆಗೂ ಸೂಕ್ತ ಕ್ರಮಕೈಗೊಂಡಿಲ್ಲ. ರಾ.ಹೆ.ಗಳಲ್ಲಿ ಅರ್ಧ ಕಿ.ಮೀ ದೂರದಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಕಾನೂನಿದೆ. ಆದರೆ ತೊಕ್ಕೊಟ್ಟು ಭಾಗದಲ್ಲಿ ಯಾವುದೂ ಪಾಲನೆಯಾಗುತ್ತಿಲ್ಲ. ಹೆದ್ದಾರಿ ಅವ್ಯವಸ್ಥೆಗೆ ಪ್ರಾಣ ಹಾನಿ ಸಂಭವಿಸುತ್ತಲೇ ಬಂದಿದೆ. ತೀವ್ರ ಹೋರಾಟಗಳು, ಪ್ರತಿಭಟನೆಗಳು ನಡೆದರೂ ಯಾವುದಕ್ಕೂ ಬೆಲೆಯೇ ಇಲ್ಲದಂತಹ ಸ್ಥಿತಿಯಿದೆ. ತಡರಾತ್ರಿಯಲ್ಲೇ ಹೆಚ್ಚಾಗಿ ಅಪಘಾತಗಳು ನಡೆಯುತ್ತಿರುವುದರಿಂದ ಒಂದು ರಿಫ್ಲೆಕ್ಟರ್ ಅಥವಾ ಎಚ್ಚರಿಕೆಯ ಸೂಚನಾ ಫಲಕವನ್ನು ಅಳವಡಿಸಲೇಬೇಕಿದೆ. ಇಲ್ಲದೇ ಹೋದಲ್ಲಿ ಮತ್ತೆ ಪಕ್ಷಾತೀತವಾಗಿ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸುವುದು ಖಚಿತ ಎಂದು ಸಮಾಜಸೇವಕ ರಾಝಿಕ್ ಉಳ್ಳಾಲ್ ಎಚ್ಚರಿಸಿದ್ದಾರೆ.






