UN NETWORKS
ಕುರ್ನಾಡು : ಬಂಟ್ವಾಳ ತಾಲೂಕಿನ ಕುರ್ನಾಡು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಇನ್ನೋವೇಟಿವ್ ಗ್ರೂಪ್ನ ಸಹಭಾಗಿತ್ವದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ನಡೆದ ವಿಶ್ವ ಯುವ ದಿನಾಚರಣೆಯು ಸ್ವಚ್ಛ ಮನೆ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಸಂಕಲ್ಪ ಹಾಗೂ ಸ್ವಚ್ಛ ಗ್ರಾಮದೆಡೆಗೆ ವಿದ್ಯಾರ್ಥಿಗಳ ನಡಿಗೆ ಜಾಗೃತಿ ಜಾಥದೊಂದಿಗೆ ವಿಶಿಷ್ಟವಾಗಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಗಿರಿಧರ್ರಾವ್ ನೇತೃತ್ವದಲ್ಲಿ ನಡೆದ ಜಾಗೃತಿ ಜಾಥಕ್ಕೆ ಜಿಲ್ಲಾ ಸ್ವಚ್ಛತಾ ರಾಯಭಾರಿ ಎನ್. ಶೀನ ಶೆಟ್ಟಿ ವಿದ್ಯಾರ್ಥಿನಿಯರೇ ತಯಾರಿಸಿದ ಬಟ್ಟೆ ಚೀಲಗಳನ್ನು ಬಿಡುಗಡೆಗೊಳಿಸಿ ಸ್ವಚ್ಛ ಗ್ರಾಮದೆಡೆಗೆ ವಿದ್ಯಾರ್ಥಿಗಳ ನಡಿಗೆ ಜಾಥಕ್ಕೆ ಚಾಲನೆ ನೀಡಿ ದೇಶದ ಶಕ್ತಿಯಾಗಿರುವ ಯುವ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಂಡು ಸ್ವಯಂ ಪರಿವರ್ತನೆಯೊಂದಿಗೆ ಗ್ರಾಮದ ಸ್ವಚ್ಛತೆ ಹಾಗೂ ಸಮಾಜದ ಪರಿವರ್ತನೆ ಕಾರ್ಯದಲ್ಲಿ ಕ್ರಿಯಾಶೀಲವಾಗಿ ಪಾಲುದಾರರಾಗಿ ಸಾಧಕರಾಗಲು ರಾಷ್ಟ್ರೀಯ ಸೇವಾ ಯೋಜನೆ ಇನ್ನೋವೇಟಿವ್ ಗ್ರೂಪ್ ಚಟುವಟಿಕೆಗಳು ಪೂರಕವಾಗಿದೆ ಎಂದರು.
ಜನ ಶಿಕ್ಷಣ ಟ್ರಸ್ಟ್ನ ನಿರ್ದೇಶಕರು ಕೃಷ್ಣ ಮೂಲ್ಯ ಸಂಪೂರ್ಣ ಸ್ವಚ್ಛತೆಯ ಗುರಿ ಸಾಧನೆಗೆ ಮಾತಿಗಿಂತಲೂ ಕೃತಿ ಮೇಲು ಆದುದರಿಂದ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಸಕ್ರೀಯವಾಗಿ ಪಾಲುದಾರರಾಗಬೇಕು ಎಂದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಶೋಭಾಮಣಿ ಕಾರ್ಯಕ್ರಮ ಸಂಯೋಜಿಸಿದರು.ಪ್ರಾಧ್ಯಾಪಕರುಗಳಾದ ಮೀನಾಕ್ಷಿ ಆಚಾರ್ಯ, ಅಜಯ್ ಸಹಕರಿಸಿದರು. ವಿದ್ಯಾರ್ಥಿನಿಯರಾದ ಯಶಸ್ವಿನಿ, ತೇಜಸ್ವಿನಿ, ದಿವ್ಯಾಶ್ರಿ, ಕಾವ್ಯ, ನವ್ಯಶ್ರೀ, ಸುಶ್ಮಿತಾ, ಹರ್ಷಿತಾ ಅವರು ಮನೆಯಲ್ಲಿ ತಯಾರಿಸಿದ ಬಟ್ಟೆ ಚೀಲಗಳನ್ನು ಉಚಿತವಾಗಿ ವಿತರಿಸಿದರು.ಜಾಗೃತಿ ಜಾಥವು ಕಾಲೇಜಿನಿಂದ ಆರಂಭವಾಗಿ ಮುಡಿಪು ಜಂಕ್ಷನ್ ಮೂಲಕ ಚೆಕ್ಪೋಸ್ಟ್ ಸಾಗಿ ಘನ ತ್ಯಾಜ್ಯ ಘಟಕದ ವೀಕ್ಷಣೆಯೊಂದಿಗೆ ಮತ್ತೆ ಕಾಲೇಜು ತನಕ ಸಾಗಿತು.


