UN NETWORKS
ಕೊಣಾಜೆ: ವಿದ್ಯಾರ್ಥಿಗಳು ತರಗತಿಯ ಪಠ್ಯ ಕಲಿಕೆಯೊಂದಿಗೆ ಕೀಡೆ, ಸಾಂಸ್ಕೃತಿಕ ಮತ್ತಿತರ ಚಟುವಟಿಕೆಗಳಲ್ಲೂ ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಿದರೆ ಮಕ್ಕಳು ಸರ್ವತೋಮುಖ ಬೆಳವಣಿಗೆ ಕಾಣುವುದರಲ್ಲಿ ಸಂಶಯವಿಲ್ಲ ಎಂದು ಮಂಗಳೂರು ಮೇಯರ್ ಭಾಸ್ಕರ್ ಕೆ. ಅಭಿಪ್ರಾಯಪಟ್ಟಿದ್ದಾರೆ.
ಕೊಣಾಜೆ ಮಂಗಳಗಂಗೋತ್ರಿಯ ವಿಶ್ವಮಂಗಳ ಎಜುಕೇಶನ್ ಸೊಸೈಟಿ ವತಿಯಿಂದ ವಿಶ್ವಮಂಗಳ ಶಾಲೆಯ ಆವರಣದಲ್ಲಿ ನಡೆದ ಸಂಸ್ಥೆಯ ಪೂರ್ವಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿ.ಯು.ಕಾಲೇಜಿನ ಸಂಯುಕ್ತ ವಾರ್ಷಿಕೋತ್ಸವ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.ಮಂಗಳೂರು ವಿ.ವಿ.ಯ ಪ್ರಭಾರ ಕುಲಪತಿ ಪ್ರೊ.ಈಶ್ವರ ಪಿ. ಮಾತನಾಡಿ, ದೇಶದ ಜನಸಂಖ್ಯೆಯ ಪೈಕಿ ಸುಮಾರು 30 ಕೋಟಿಯಷ್ಟು ಮಂದಿ ಯುವಜನತೆಯೇ ಇದೆ. ಈ ಮೂಲಕ ದೇಶದಲ್ಲಿ ಉತ್ತಮ ಸಂಖ್ಯೆಯ ಯುವ ಮಾನವ ಸಂಪನ್ಮೂಲ ಇದ್ದು, ಶಿಕ್ಷಕರು ಇವರ ಸಾಮಥ್ರ್ಯವನ್ನು ಬೆಳಕಿಗೆ ತರುವ ಕೆಲಸ ಮಾಡಬೇಕು. ಮಕ್ಕಳ ಕೌಶಲ್ಯ ಬೆಳವಣಿಗೆ ಜೊತೆಗೆ ಅವರ ಗುಣನಡತೆ, ಮಾನವೀಯ ಅಂಶಗಳನ್ನೂ ಬೆಳೆಸಿಕೊಳ್ಳಬೇಕು. ಅವರಲ್ಲಿರುವ ಅನ್ವೇಷಣಾ ಪ್ರವೃತ್ತಿಗೆ ನೀರೆರೆಯಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ವಿಶ್ವಮಂಗಳ ಎಜುಕೇಶನ್ ಸೊಸೈಟಿ ಅಧ್ಯಕ್ಷ ಪ್ರೊ.ವಿಶ್ವನಾಥ ಕೆ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ನಡುವೆ ಯಾವುದೇ ರೀತಿಯ ತಾರತಮ್ಯ ತೋರದೆ ಶಿಕ್ಷಣ ಧಾರೆ ಎರೆಯಬೇಕು. ಸಂಸ್ಥೆಯನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಶಿಕ್ಷಕ ವರ್ಗಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.ಪೂರ್ವಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಅಂತು ಡಿಸೋಜ, ಪ್ರಾಥಮಿಕ ವಿಭಾಗ ಮುಖ್ಯ ಶಿಕ್ಷಕಿ ಶೋಭಾವತಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಪ್ರಿಯಾ ಎನ್. ಪಿ.ಯು.ವಿಭಾಗದ ಪ್ರಾಂಶುಪಾಲರಾದ ಪೂರ್ಣಿಮಾ ಶೆಟ್ಟಿ ವರದಿ ವಾಚಿಸಿದರು.
ಸಂಸ್ಥೆಯ ಕಾರ್ಯದರ್ಶಿ ಡಾ.ವಿನಯ್ ರಜತ್ ಸ್ವಾಗತಿಸಿದರು. ಕೋಶಾಧಿಕಾರಿ ಡಾ.ಪರಮೇಶ್ವರ ವಂದಿಸಿದರು. ಶೈಕ್ಷಣಿಕ, ಕ್ರೀಡೆ ಮತ್ತು ವಿವಿಧ ಸ್ಪರ್ಧೆಗಳ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಿತು.


