UN NETWORKS
ಕುಲಶೇಖರ: ಸದಾ ಮೊಬೈಲ್, ವೀಡಿಯೋ ಗೇಮ್ ಗಳಲ್ಲಿ ತೊಡಗುವ ನಗರದ ವಿದ್ಯಾರ್ಥಿಗಳು ಗೋಲಿ ಆಟ, ಲಗೋರಿ, ಕಣ್ಣಾಮುಚ್ಚಾಲೆ ಗ್ರಾಮೀಣ ಆಟಗಳಲ್ಲಿ ಭಾಗವಹಿಸುವ ಮೂಲಕ ಕುಲಶೇಖರ ಚರ್ಚ್‍ನ ಸಂತ ರೀತಾ ವಾಳೆಯ ಮಕಾಳೆಯಲ್ಲಿ ಜರಗಿದ ವಿಶಿಷ್ಟವಾದ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗವಹಿಸಿದರು.





ಮಾಂಡ್ ಸೊಭಾಣ್ ಹಾಗೂ ತ್ರಿವೇಣಿ ಆಯುರ್ವೇದದ ವತಿಯಿಂದ ಕ್ರಿಸ್ಮಸ್ ಸಂಭ್ರಮವು ಮಕಾಳೆಯಲ್ಲಿ ರವಿವಾರ ನಡೆಯಿತು. ಕ್ರಿಸ್ಮಸ್ ಮರದ ದೀಪಗಳನ್ನು ಪ್ರಜ್ವಲಿಸಿ ಮಾತನಾಡಿದ ಮಾಜಿ ಮೇಯರ್ ಅಬ್ದುಲ್ ಅಝೀಝ್ ಇಂದಿನ ಕಾಲದಲ್ಲಿ ಸರ್ವ ಧರ್ಮೀಯರನ್ನೂ ಒಗ್ಗೂಡಿಸಿ ನಡೆಸುವ ಇಂತಹ ಸಂಭ್ರಮಗಳ ಅಗತ್ಯವಿದೆ. ಇದರಿಂದ ಸೌಹಾರ್ದ ಬೆಳೆಯಲಿದೆ ಎಂದರು.ಕುಸ್ವಾರ್ ತಿಂಡಿಗಳನ್ನು ತೆರೆದು ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಿದ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಯೇಸು ಬಡವರಿಗೋಸ್ಕರ, ನ್ಯಾಯ ವಂಚಿತರಿಗೋಸ್ಕರ ಶ್ರಮಿಸಿದರು. ಕ್ರಿಸ್ಮಸ್ ಹಬ್ಬದ ನೈಜ ಸಂದೇಶವನ್ನು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಸೌಹಾರ್ದ ಆಚರಣೆ : ವೇದಿಕೆಯಲ್ಲಿ ನಡೆದ ಕ್ರಿಸ್ ಮಸ್ ಕ್ಯಾರಲ್ಸ್ , ಕೊಂಕಣಿ ನಾಟಕ, ನೃತ್ಯ ಮತ್ತು ಕೇರಳದ ಐಕ್ಯ ಕೇರಳ ಕಳರಿ ಸಂಘಂ ವತಿಯಿಂದ ತೈಯಂ ಹಾಗೂ ಕಳರಿಪಯಟ್ಟು ಪ್ರದರ್ಶನ ಕ್ರಿಸ್ ಮಸ್ ಸೌಹಾರ್ದತೆಯನ್ನು ಪ್ರದರ್ಶಿಸಿತು. ಸ್ಥಳೀಯ ಎಲ್ಲಾ ಧರ್ಮದವರು ಭಾಗವಹಿಸುವ ಮೂಲಕ ಕಾರ್ಯಕ್ರಮ ವಿಶೇಷ ಮೆರುಗು ಪಡೆಯಿತು. ಕೊಂಕಣಿ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಇವರ ಹುಟ್ಟಿದ ಪರಿಸರದ ಜಾಗದಲ್ಲೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರದೇಶದಲ್ಲಿ ತ್ರಿವೇಣಿ ಆಯುರ್ವೇದದ ಡಾ.ಎಲ್ಡೋ ಇವರ ನೇತೃತ್ವದಲ್ಲಿ ಶಿಘ್ರವೇ ಭಾರತೀಯ ಸಂಸ್ಕøತಿ, ಪರಂಪರೆಯನ್ನು ಪಾಲಿಸುವ ಮತ್ತು ಉಳಿಸುವ ಉದ್ದೇಶದಿಂದಲೇ ಗುರುಕುಲ ಪದ್ಧತಿಯಲ್ಲಿ ಶಿಕ್ಷಣ ಪದ್ಧತಿ ಶೀಘ್ರದಲ್ಲೇ ಆರಂಭವಾಗಲಿದೆ. ಪಾರಂಪರ್ಯ ಔಷಧೀಯ ಪದ್ಧತಿ, ಕಳರಿಪಯಟ್ಟು , ವಿವಿಧ ಕಲೆಗಳ ತರಬೇತಿ ಇದೇ ಗುರುಕುಲದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಪಾರಂಪರ್ಯ ವೈದ್ಯ ಬ್ರದರ್ ಎಲ್ಡೋ ಹೇಳಿದ್ದಾರೆ.
ಸಾವಯವ ಆಹಾರ : ಕ್ರಿಸ್ ಮಸ್ ಸಂಭ್ರಮದಲ್ಲಿ ವಿಶಿಷ್ಟವಾದ ಊಟೋಪಚಾರವನ್ನು ನೀಡಲಾಯಿತು. ಯಾವುದೇ ರಾಸಾಯನಿಕಗಳನ್ನು ಬಳಸದೆ ಸಂಪೂರ್ಣವಾಗಿ ದೇಸೀ ಪದ್ಧತಿಯಲ್ಲಿ ಗೆಣಸು, ಕೋಳಿ, ಮೀನಿನ ಪದಾರ್ಥ ವಿವಿಧ ಆಹಾರ ಖಾದ್ಯಗಳನ್ನು ಉಣಬಡಿಸಲಾಯಿತು. ಬ್ರದರ್ ಎಲ್ಡೋ ಇವರ ನೇತೃತ್ವದ ತಂಡದಿಂದ ಸಂಪೂರ್ಣ ದೇಸೀ ಪದ್ಧತಿಯ ಆಹಾರಗಳನ್ನು ಉಣಬಡಿಸಲಾಗಿತ್ತು. ಈ ಸಂದರ್ಭ ಸ್ಥಳೀಯ ಪರಿಸರದ ಲೈನ್‍ಮ್ಯಾನ್ ನರೇಶ, ಪೋಸ್ಟ್ ಮ್ಯಾನ್ ಯತೀಶ, ಟೆಲಿಫೋನ್‍ನ ಕುಂಞಕಣ್ಣ, ಬೀಟ್ ಪೋಲಿಸ್ ಮದನ್ ಹಾಗೂ ಆ್ಯಂಟನಿ ವೇಸ್ಟ್ ಪರವಾಗಿ ಭೂಷಣ್ ಮತ್ತು ವಾಳೆಯ ಹಿರಿಯ ವ್ಯಕ್ತಿ ಹಿಲ್ಡಾ ಕ್ಯಾಸ್ತೆಲಿನೊ ಅವರನ್ನು ಗೌರಸಲಾಯಿತು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ, ತ್ರಿವೇಣಿ ಆಯುರ್ವೇದದ ಡಾ. ಎಲ್ಡೊ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಮೇಳ ತಂಡದಿಂದ ಕ್ರಿಸ್ಮಸ್ ಕ್ಯಾರಲ್ಸ್, ಕಲಾಕುಲ್ ತಂಡದಿಂದ ಆಮ್ಚೆಂ ನತಾಲ್ ಕಿರು ಪ್ರಹಸನ, ನಾಚ್ ಸೊಭಾಣ್ ಹಾಗೂ ವಾಳೆಯ ಮಕ್ಕಳಿಂದ ನೃತ್ಯಗಳು ಪ್ರಸ್ತುತವಾದವು. ಐಕ್ಯ ಕೇರಳ ಕಳರಿ ಸಂಘಂ ವತಿಯಿಂದ ತೈಯಂ ಹಾಗೂ ಕಳರಿಪಯಟ್ಟು ಮತ್ತು ಸ್ವರೂಪ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.ವಾಳೆಯ ಗುರಿಕಾರ ವಿನ್ನಿ ಡಿಸೋಜ ಸ್ವಾಗತಿಸಿದರು. ರೊಯ್ ಕ್ಯಾಸ್ತೆಲಿನೊ ಪ್ರಾಸ್ತಾವಿಸಿದರು. ಸುನೀಲ್ ಮೊಂತೇರೊ ವಂದಿಸಿದರು. ವಿಕ್ಟರ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು.


