UN NETWORKS
ತೊಕ್ಕೊಟ್ಟು : ಲಾರಿಯೊಂದು ಟ್ರಾಫಿಕ್ ಪೊಲೀಸರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಚರಂಡಿ ಮೇಲೆ ನಿಲ್ಲಿಸುತ್ತಿದ್ದಂತೆ, ಚರಂಡಿ ಮುಚ್ಚಿದ್ದ ಕಾಂಕ್ರೀಟ್ ಸ್ಲಾಬ್ ತುಂಡಾಗಿ ಲಾರಿ ಮಗುಚಿ ಅದರಡಿಗೆ ಕ್ಲೀನರ್ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಿಂದ ಉದ್ರಿಕ್ತ ಗುಂಪು ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ ಮತ್ತು ಟ್ರಾಫಿಕ್ ಪೊಲೀಸರನ್ನುಅಮಾನತುಗೊಳಿಸುವಂತೆ ಆಗ್ರಹಿಸಿ ಒಂದು ಗಂಟೆಯ ಕಾಲ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದ್ದಾರೆ.
ಶಿವಮೊಗ್ಗ ಶಿಕಾರಿಪುರ ನಿವಾಸಿ ವಸಂತ ಕುಮಾರ್ (25) ಮೃತಪಟ್ಟವರು. ಕಾರ್ಕಳ ಕಡೆಯಿಂದ ಉಳ್ಳಾಲದ ಮೀನಿನ ತೈಲ ತೆಗೆಯುವ ಕಾರ್ಖಾನೆಗೆ ಕಟ್ಟಿಗೆ ಸಾಗಾಟ ನಡೆಸುತ್ತಿದ್ದ ಲಾರಿ ಅಪಘಾತ ಸಂಭವಿಸಿದೆ. ತೊಕ್ಕೊಟ್ಟು ಜಂಕ್ಷನ್ನಲ್ಲಿ ಸಂಚಾರಿ ಪೊಲೀಸರು ಉಳ್ಳಾಲ ಕಡೆಗೆ ಬರುತ್ತಿದ್ದ ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಲಾರಿ ಚಾಲಕ ಸೂಚಿಸಿದ ಸ್ಥಳದಿಂದ ಅರ್ಧ ಕಿ.ಮೀ ಎದುರು ಬಂದು ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಗೆ ಹಾಸಲಾದ ಕಾಂಕ್ರೀಟ್ ಮೇಲೆ ಲಾರಿಯನ್ನು ನಿಲ್ಲಿಸಲು ಮುಂದಾಗಿದ್ದರು. ಕಾಂಕ್ರೀಟ್ ಸ್ಲ್ಯಾಬ್ ತುಂಡಾಗಿ ಲಾರಿ ಹಿಂಬದಿ ಚಕ್ರ ಚರಂಡಿಯೊಳಕ್ಕೆ ಬೀಳುತ್ತಿದ್ದಂತೆ ಲಾರಿ ಪಲ್ಟಿಯಾಗಿದೆ. ಇದೇ ವೇಳೆ ಗಾಬರಿಯಿಂದ ಲಾರಿಯೊಳಗಡೆ ಕುಳಿತಿದ್ದ ವಸಂತ ಕುಮಾರ್ ಅವರು ಹಾರಿ ಪಾರಾಗಲು ಯತ್ನಿಸಿದ್ದರು. ಆದರೆ ಲಾರಿಯೇ ಅವರ ಮೇಲೆ ಬಿದ್ದಿದೆ. ಸುಮಾರು 10 ನಿಮಿಷಗಳ ಕಾಲ ಲಾರಿಯಡಿ ಸಿಲುಕಿದ್ದ ಅವರನ್ನು ಸ್ಥಳೀಯರು ಹತ್ತಿರದಲ್ಲಿ ಕಾಮಗಾರಿ ನಡೆಸುತ್ತಿದ್ದ ಹಿಟಾಚಿ ಮೂಲಕ ಲಾರಿಯನ್ನು ಮೇಲಕ್ಕೆತ್ತಿ ಗಂಭೀರವಾಗಿ ಗಾಯಗೊಂಡವರನ್ನು ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ವಸಂತ ಕುಮಾರ್ ಸಾವನ್ನಪ್ಪಿದ್ದಾರೆ.
ರಸ್ತೆ ತಡೆ ಪ್ರತಿಭಟನೆ
ಘಟನೆಯನ್ನು ಖಂಡಿಸಿ ಸುಮಾರು 500 ಕ್ಕೂ ಹೆಚ್ಚು ಮಂದಿ ಸ್ಥಳೀಯರು ಹಾಗೂ ವಾಹನ ಸವಾರರರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಸಂಚಾರಿ ಪೊಲೀಸರ ಬೇಜವಾಬ್ದಾರಿ ಖಂಡಿಸಿ, ಅಪಘಾತದಲ್ಲಿ ಸಾವನ್ನಪ್ಪಿದ ಯುವಕನ ಕುಟುಂಬಕ್ಕೆ ಶೀಘ್ರ ಪರಿಹಾರ, ಹಿಂದಿನ ನಾಲ್ಕು ಅಪಘಾತಗಳ ತನಿಖೆ ಮತ್ತು ಅವರ ಮನೆಮಂದಿಗೂ ಶೀಘ್ರ ಪರಿಹಾರಕ್ಕೆ ಒತ್ತಾಯಿಸಿ, ರಸ್ತೆ ಕಾಮಗಾರಿ ಮುಗಿಯುವವರೆಗೆ ಟೋಲ್ ಸಂಗ್ರಹ ನಿಲ್ಲಿಸುವಂತೆ ಹಾಗೂ ಸ್ಥಳಕ್ಕೆ ಪೊಲೀಸ್ ಕಮೀಷನರ್ ಮತ್ತು ಜಿಲ್ಲಾಧಿಕಾರಿ ಭೇಟಿ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಒಂದು ಗಂಟೆಯ ಕಾಲ ನಡೆದ ರಸ್ತೆ ತಡೆಯಿಂದಾಗಿ ಹಲವು ಕಿ.ಮೀವರೆಗೆ ವಾಹನಗಳು ಸರತಿ ಸಾಲಿನಲ್ಲಿ ನಿಂತಿತ್ತು. ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್.ಐ ಹಾಗೂ ಇಬ್ಬರು ಸಂಚಾರಿ ಪೊಲೀಸರು ಸೂಚಿಸಿದ ಹಿನ್ನೆಲೆಯಲ್ಲಿ ಲಾರಿಯನ್ನು ನಿಲ್ಲಿಸಲಾಗಿದೆ. ಜನ, ವಾಹನದಟ್ಟಣೆಯಿರುವ ತೊಕ್ಕೊಟ್ಟು ಜಂಕ್ಷನ್ನಿನಲ್ಲೇ ಪೊಲೀಸರು ವಾಹನ ಸವಾರರನ್ನು ನಿಲ್ಲಿಸಿ ಪ್ರಕರಣ ದಾಖಲಿಸುತ್ತಾ ಬಂದಿದ್ದಾರೆ. ಫ್ಲೈಓವರ್ ಕಾಮಗಾರಿಯೂ ವಿಳಂಬವಾಗಿ ಜಂಕ್ಷನ್ ನಲ್ಲಿ ಇಕ್ಕಟ್ಟಿನ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಪೊಲೀಸರು ವಾಹನ ಸವಾರರನ್ನು ತಡೆಹಿಡಿದು ಇನ್ನಷ್ಟು ಅವ್ಯವಸ್ಥೆಯನ್ನು ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಥಳಕ್ಕೆ ಪೊಲೀಸ್ ಕಮೀಷನರ್ ಅವರು ಬಂದು ಅಹವಾಲು ಸ್ವೀಕರಿಸಬೇಕು ಅನ್ನುವ ಪ್ರತಿಭಟನಾಕಾರರ ಒತ್ತಾಯದಂತೆ ಸ್ಥಳಕ್ಕೆ ಅಪರಾಧ ಮತ್ತು ಸಂಚಾರಿ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಸಂಚಾರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ ಶೆಟ್ಟಿ, ಅಪರಾಧ ವಿಭಾಗದ ರಾಮ ರಾವ್, ಸಂಚಾರಿ ಠಾಣಾಧಿಕಾರಿ ಗುರುದತ್ ಕಾಮತ್, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ನೇತೃತ್ವದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಿಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಕೆಎಸ್ ಆರ್ ಪಿ ಪೊಲೀಸರನ್ನು ನಿಯೋಜಿಸಲಾಗಿತ್ತು.


