UN NETWORKS
ಕೊಣಾಜೆ: ಅತಿಯಾದ ಚಾಕಲೇಟ್, ಬಿಸ್ಕತ್ , ಟೂತ್ ಪೇಸ್ಟ್ ಬಳಸುವುದರಿಂದ ಮಕ್ಕಳಲ್ಲಿ ಖಿನ್ನತೆ, ಅನಾರೋಗ್ಯ ಹೆಚ್ಚಾಗುತ್ತಿದೆ. ಇದರಿಂದಾಗಿ ದೇಹದಲ್ಲಿ ಆಕ್ಸಿಟಾಸಿನ್ ಪ್ರಮಾಣವೂ ಜಾಸ್ತಿಯಾಗಿ ಜೀವನದಲ್ಲಿ ದುರ್ನಡತೆಗಳೇ ಹೆಚ್ಚಾಗುತ್ತಿದೆ ಎಂದು ವೆಲೆನ್ಶಿಯಾ ತ್ರಿವೇಣಿ ಆಯುರ್ವೇದ ಆಸ್ಪತ್ರೆಯ ಬ್ರದರ್ ಎಲ್ದೋ ತ್ರಿವೇಣಿ ಎಚ್ಚರಿಕೆ ನೀಡಿದರು.
ಧಕ್ಷ ಯುವಬಳಗ ಗ್ರಾಮಚಾವಡಿ, ಮುಲಾರ ಬಜರಂಗದಳ ಪಾಂಚಜನ್ಯ ಶಾಖೆ , ರಾಮಾಂಜನೇಯ ವ್ಯಾಯಾಮ ಶಾಲೆ ಅಣ್ಣೆರೆಪಾಲು ಮತ್ತು ಮಾಧ್ಯಮ ಕೇಂದ್ರ ತೊಕ್ಕೊಟ್ಟು ಇವರ ಸಹಕಾರದೊಂದಿಗೆ ಕೊಣಾಜೆ ಪರಂಡೆಯ ಯುಬಿಎಂಸಿ ಶಾಲೆಯಲ್ಲಿ ನಡೆಯುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಆರನೇ ದಿನದಂದು ಪ್ರಗತಿಪರ ಕೃಷಿಕ ಹಾಗೂ ಸ್ಥಳೀಯ ಮುಖಂಡ ಸುದರ್ಶನ ಭಟ್ ಇವರ ಮನೆ ಆವರಣದಲ್ಲಿ ಶುಕ್ರವಾರ ನಡೆದ ವೆಲೆನ್ಶಿಯಾ ತ್ರಿವೇಣಿ ಆಯುರ್ವೇದ ಆಸ್ಪತ್ರೆ ವತಿಯಿಂದ ಪಾರಂಪರಿಕ ಔಷಧ ಆಧಾರಿತ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಶೇ.20 ಯುವ ಸಮುದಾಯದವರೇ ದೊಡ್ಡ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಹೆಣ್ಮಕ್ಕಳು 5-6 ನೇ ವಯಸ್ಸಿನಲ್ಲೇ ಪ್ರೌಢಾವಸ್ಥೆ ತಲುಪುತ್ತಿದ್ದಾರೆ. 20 ರ ಹರೆಯದಲ್ಲೇ ಯುವಕ-ಯುವತಿಯರು ಕ್ಯಾನ್ಸರ್ ರೋಗಕ್ಕೆ ಬಲಿಯಾಗುವಂತಹ ಉದಾಹರಣೆಗಳು ಕಣ್ಣ ಮುಂದಿದೆ. ಹಿಂದಿನ ದಿನಗಳಲ್ಲಿ ಹೆತ್ತವರ ಶವಯಾತ್ರೆಯನ್ನು ಮಕ್ಕಳು ಮಾಡುತ್ತಿದ್ದರು. ಆದರೆ ಇದೀಗ ಮಕ್ಕಳ ಶವಯಾತ್ರೆಯನ್ನು ಹೆತ್ತವರು ನಡೆಸುವಂತಹ ವಿಪರ್ಯಾಸ ಮುಂದಾಗಿದೆ. ಮುಂದಿನ ಐದು ವರ್ಷಗಳಲ್ಲಿ ಮಂಗಳೂರಿನಲ್ಲಿ ಯುವಸಮುದಾಯವೇ ಇಲ್ಲದಂತಾಗುವ ಸ್ಥಿತಿ ನಿರ್ಮಾಣವಾಗಲಿದೆ. ಚಾಕಲೇಟ್, ಬಿಸ್ಕತ್ , ಟೂತ್ ಪೇಸ್ಟ್ ಗಳನ್ನು ಬಳಸುತ್ತಿರುವವರಲ್ಲೇ ಹೆಚ್ಚಾಗಿ ಕಾಯಿಲೆಗಳು ಕಂಡುಬರುತ್ತಿವೆ. ಸಾಧ್ಯವಾದಷ್ಟು ಅಂತಹ ಸೊತ್ತುಗಳನ್ನು ಮಕ್ಕಳು ಬಳಸುವುದನ್ನೇ ಬಿಟ್ಟಲ್ಲಿ ಆರೋಗ್ಯವಂತರಾಗಿ, ನೆಮ್ಮದಿಯ ದಿನಗಳಲ್ಲಿ ಬಾಳಬಹುದು. ವ್ಯಾಪಾರದ ಉದ್ದೇಶದಿಂದ ಹೆಚ್ಚಿನ ಹಾರ್ಮೋನ್ ನೀಡಿ ತಿನ್ನುವಂತಹ ಆಹಾರದ ಸೊತ್ತುಗಳನ್ನು ಬೆಳೆಸಲಾಗುತ್ತಿದೆ. ಇದನ್ನು ಮಕ್ಕಳು ತಿನ್ನುವುದರಿಂದ ಬೇಗನೇ ದೊಡ್ಡವರಾಗಿ, ಮುಂದಿನ ದಿನಗಳಲ್ಲಿ ಮಕ್ಕಳಾಗದ ಸ್ಥಿತಿಯನ್ನು ತಲುಪುವುದರಲ್ಲಿ ಸಂಶಯವಿಲ್ಲ.
ಹಾವು ಕಚ್ಚಿದರೆ ?: ಹಾವು ಕಚ್ಚಿದಲ್ಲಿ ಗಟ್ಟಿಯಾಗಿ ಬಟ್ಟೆ ಕಟ್ಟುವಂತಹ ವಿಧಾನವನ್ನು ಬಿಟ್ಟು , ಕೂಡಲೇ ವಿಷವನ್ನು ವಿಷದಿಂದಲೇ ತೆಗೆಯಬೇಕಾಗಿದೆ. ಅದಕ್ಕಾಗಿ ವಿಷಕ್ಕೆ ಕಾರೆಗಿಡ, ಕಾರೆಮುಳ್ಳು ಸೇವಿಸಿ, ನಾಗರಹಾವು ಕಚ್ಚಿದಲ್ಲಿ ಇಟ್ಟೆಗಿಡದ ಚಿಗುರನ್ನು ಹಾಲಿನಲ್ಲಿ ಅರೆದು ಕುಡಿಸಿದಲ್ಲಿ ಹೆಚ್ಚಿನ ಔಷಧ ಕೊಡುವವರೆಗೆ ಕಿಡ್ನಿ, ಲಿವರ್ ಸೇರಿದಂತೆ ರಕ್ತದೊಂದಿಗೆ ವಿಷ ಬೆರೆಯುವುದನ್ನು ತಡೆಯಬಹುದು.
ಕಾಮಾಲೆಗೆ ಮದ್ದು ? ಅರ್ಧ ಎಕ್ಕದ ಎಲೆಗೆ ಅರಶಿನ ಹುಡಿ ಹಾಕಿ ಒಂದು ಬಾರಿ ಕುಡಿಸಿದಲ್ಲಿ ಕಾಮಾಲೆ ರೋಗವನ್ನು ಬಹಳಷ್ಟು ನಿಯಂತ್ರಿಸಬಹುದು. ಹಲ್ಲು ನೋವಿಗೂ ಎಕ್ಕದ ಎಲೆ ರಾಮಬಾಣ.
ಗ್ಯಾಸ್ಟ್ರಿಕ್ ಸಮಸ್ಯೆ? : ಮಾನಸಿಕ ಒತ್ತಡಗಳು, ಹೆಚ್ಚಿನ ಗರಂ ಮಸಾಲೆ ಸೇವನೆ ಮತ್ತು ಒಟ್ಟಾರೆ ಆಹಾರವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ನಿಯಂತ್ರಿಸಲು ` ಸಹದೇವಿ’ ಅನ್ನುವ ಗಿಡಮೂಲಿಕೆ ಪರಿಣಾಮಕಾರಿಯಾಗಿದೆ.
ಬಾಯಿ ಕ್ಯಾನ್ಸರ್ ?: ಬಾಯಿಯೊಳಗೆ ಆಗುವ ಕ್ಯಾನ್ಸರ್ ಗೆ ಮರದಲ್ಲಿ ಇರುವಂತಹ ಕೆಂಪು ಇರುವೆಗಳ ಮೊಟ್ಟೆಯನ್ನು ಸಂಗ್ರಹಿಸಿ, ಅದನ್ನು ಬಾಯಿಯೊಳಗೆ ಆಗಿರುವ ಹುಣ್ಣಿನ ಜಾಗಕ್ಕೆ ಇಟ್ಟಲ್ಲಿ ರೋಗವನ್ನು ಇಲ್ಲದಂತೆ ಮಾಡಬಹುದು.
ಕಾರ್ಯಕ್ರಮ ಉದ್ಘಾಟಿಸಿದ ಗೋರಿಗುಡ್ಡ ಕಿಟೆಲ್ ಮೆಮೋರಿಯಲ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ವಿಠಲ್ ಅಬುರಾ ಮಾತನಾಡಿ ಬಹುರಾಷ್ಟ್ರೀಯ ಕಂಪೆನಿಗಳ ದಾಸರಾಗುತ್ತಾ, ಆರೋಗ್ಯವನ್ನು ಹಾಳು ಮಾಡುತ್ತಿದ್ದೇವೆ. ಶಾಲಾ-ಕಾಲೇಜುಗಳ ವಠಾರದಲ್ಲಿ ಜಂಕ್ ಫುಡ್ ಮಾರಾಟವನ್ನು ನಿಷೇಧಿಸಬೇಕಿದೆ. ಪಾರಂಪರಿಕ ಆಹಾರ ಪದ್ಧತಿಗಳನ್ನು ಶಾಲಾ-ಕಾಲೇಜುಗಳಲ್ಲೇ ಆರಂಭಿಸುವ ಕಾರ್ಯ ಆಗಬೇಕಿದೆ ಎಂದರು.ತ್ರಿವೇಣಿ ಗುರುಕುಲ ಕುರಿತು ಸುನಿಲ್ ಪಿಂಟೋ ಮಾಹಿತಿ ನೀಡಿದರು.
ಮಾಧ್ಯಮ ಕೇಂದ್ರ ತೊಕ್ಕೊಟ್ಟು ಇದರ ವಸಂತ.ಎನ್.ಕೊಣಾಜೆ, ಧಕ್ಷ ಯುವ ಬಳಗದ ಅಧ್ಯಕ್ಷ ದಿನೇಶ್ ಮಾಯಿಲೋಡಿ, ಸ್ಥಳೀಯ ಮುಖಂಡ ನರ್ಸು ಗೌಡ ಅಣ್ಣೆರೆಪಾಲುಷ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ನವೀನ್ ಕೊಣಾಜೆ ಉಪಸ್ಥಿತರಿದ್ದರು.


