UN NETWORKS
ಉಳ್ಳಾಲ: ದಿನನಿತ್ಯ ಸವಾಲುಗಳನ್ನು ಎದುರಿಸುವ ಪ್ರಾಂಶುಪಾಲರು ಕಾರ್ಯಗಾರದಲ್ಲಿ ಭಾಗವಹಿಸುವ ಮೂಲಕ ಆಧುನಿಕ ಶಿಕ್ಷಣ ವ್ಯವಸ್ಥೆಯ ಕುರಿತು ತಿಳುವಳಿಕೆಯನ್ನು ಪಡೆದು ಆತ್ಮವಿಶ್ವಾಸ ಹೆಚ್ಚಿಸಲು ಸಾಧ್ಯ ಎಂದು ಮಂಗಳೂರು ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕಿ ಎಲ್ವೀರಾ ಫಿಲೊಮಿನಾ ಅಭಿಪ್ರಾಯಪಟ್ಟರು.

ಅವರು ಕ್ಷೇಮ ಆಸ್ಪತ್ರೆ ಚಿಂತನ ಸಭಾಂಗಣದಲ್ಲಿ ಗುರುವಾರ ನಡೆದ ` ಶಿಕ್ಷಣದಲ್ಲಿ ಸವಾಲುಗಳು ಮತ್ತು ಅವಕಾಶಗಳು’ ವಿಚಾರದ ಕುರಿತು ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ಪ್ರಾಂಶುಪಾಲರಿಗಾಗಿ ನಿಟ್ಟೆ ವಿ.ವಿ ಹಮ್ಮಿಕೊಂಡ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳು ನಡೆಯುತ್ತಲೇ ಬಂದಿದೆ. ಪ್ರಾಂಶುಪಾಲರೇ ಎಲ್ಲಾ ವಿಚಾರಗಳಲ್ಲಿಯೂ ಜವಾಬ್ದಾರರಾಗಿರುತ್ತಾರೆ. ಶಿಕ್ಷಣ ವ್ಯವಸ್ಥೆಯ ಪ್ರತಿವಿಚಾರದಲ್ಲೂ ಜ್ಞಾನ ಅಗತ್ಯ. ಪ್ರಸ್ತುತ ವರ್ಷದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಅನ್ನುವ ನೀತಿ ಸರಕಾರದಿಂದ ಜಾರಿಯಾಗಿದೆ. ಜಿಲ್ಲೆಯ ಮುತ್ತೂರು, ಪುಂಜಾಲಕಟ್ಟೆ, ಕೈಯ್ಯೂರು, ಕನ್ಯಾನ, ಬೆಳ್ಳಾರೆ ಕಾಲೇಜುಗಳಿಗೆ ಜಾರಿಯಾಗಿದೆ. ಪ್ರಾಂಶುಪಾಲರ ಕರ್ತವ್ಯ ಸಂಧಿಗ್ದ ಸ್ಥಿತಿಯಲ್ಲಿ ಬಂದು ನಿಂತಿದೆ. ವಿದ್ಯಾರ್ಥಿಗಳಿಗೆ ಹೊಡೆದು-ಬಡಿದು ಬುದ್ಧಿ ಕಲಿಸುವಂತಿಲ್ಲ. ಆದರೂ ಅವರನ್ನು ಸರಿದಾರಿಗೆ ತರುವಂತಹ ಪ್ರಯತ್ನದ ಅರಿವು ಕಾರ್ಯಗಾರದಿಂದ ಆಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯ ಕುಲಸಚಿವೆ ಡಾ.ಅಲ್ಕಾ ಕುಲಕರ್ಣಿ ` ಕೂಡು ಕುಟುಂಬ ಪದ್ಧತಿ ಬದಲಾವಣೆಗಳಿಂದ ವಿದ್ಯಾರ್ಥಿಗಳ ಮೇಲೆ ಅಪಾರ ಪರಿಣಾಮ ಬೀರಿದೆ. ನೀತಿಪಾಠವನ್ನು ಅರಿಯುವುದರಲ್ಲಿ ನಿರುತ್ಸಾಹ ತೋರುವ ಮಕ್ಕಳು, ವೈಫಲ್ಯಗಳನ್ನು ಸ್ವೀಕರಿಸುತ್ತಿಲ್ಲ, ಮಾನವೀಯತೆಯನ್ನು ಮರೆತು ಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹಿಡಿದು, ಇಲೆಕ್ಟ್ರಾನಿಕ್ ವಸ್ತುಗಳ ಮೋಹ, ಆಧುನಿಕ ಶೈಲಿಯ ಜೀವನ ಪದ್ಧತಿಯಿಂದಾಗಿ ನೈತಿಕತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ನಡುವೆ ತಮ್ಮ ಜೀವನದ ಸ್ವಾತಂತ್ರ್ಯಗಳನ್ನು ಬಿಟ್ಟು ವಿದ್ಯಾರ್ಥಿಗಳಿಗಾಗಿ ಜೀವನ ತ್ಯಾಗ ನಡೆಸುವ ಶಿಕ್ಷಕರು-ಪ್ರಾಂಶುಪಾಲರು ನೈತಿಕ ಶಿಕ್ಷಣವನ್ನು ಬೋಧಿಸಬೇಕಿದೆ ಎಂದರು.
ಈ ಸಂದರ್ಭ ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಯೂಸುಫ್ ಉಪಸ್ಥಿತರಿದ್ದರು. ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಫ್ಲೈ.ಲೆ. ಡಾ.ಎಂ.ಬಾಲಸುಬ್ರಹ್ಮಣ್ಯ- ಸಮಾಜದಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ , ಪ್ರೊ.ಶಾಲಿನಿ ಕೆ.ಶರ್ಮಾ- ಮಕ್ಕಳ ಮತ್ತು ಹೆತ್ತವರ ಜೊತೆಗಿನ ಒಡನಾಟ ಹಾಗೂ ಬೆಂಗಳೂರು ಪದವಿಪೂರ್ವ ಕಾಲೇಜು ಶಿಕ್ಷಣ ವಿಭಾಗದ ಅಧಿಕಾರಿ ಶಶಿಕಲಾ ಎ.ಎಲ್ ಇವರು ಇ-ಗವರ್ನೆನ್ಸ್ ವಿಚಾರದ ಕುರಿತು ಕಾರ್ಯಗಾರ ನಡೆಸಿಕೊಟ್ಟರು. ನಿಟ್ಟೆ ವಿಶ್ವವಿದ್ಯಾಲಯ ಆಡಳಿತ ವಿಭಾಗದ ಉಪನಿರ್ದೇಶಕಿ ಪ್ರಸನ್ನಾ ಹೆಗ್ಡೆ ಸ್ವಾಗತಿಸಿದರು.
ದೀಪ್ತಾ ರೆಬೆಲ್ಲೋ ಕಾರ್ಯಕ್ರಮ ನಿರೂಪಿಸಿದರು. ನಿಟ್ಟೆ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಶಂಕರ್ ನಾರಾಯಣ್ ಭಟ್ ವಂದಿಸಿದರು.


