UN NETWORKS
ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಳ್ಳಲು , ಇರುವ ಮನೆ ವಿಸ್ತರಿಸಲು ಬಯಸುವ , ವಾರ್ಷಿಕ 3 ಲಕ್ಷ ಆದಾಯ ಹೊಂದಿರುವ ಕುಟುಂಬಗಳಿಗೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಝ್ ಯೋಜನೆಯಡಿ ತಲಾ ಒಂದು ಕುಟುಂಬಕ್ಕೆ ರೂ.1.50 ಲಕ್ಷ ಸಹಾಯಧನ ಅತ್ಯಂತ ಸರಳ ವಿಧಾನದಲ್ಲಿ ಒದಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತೆ ವಾಣಿ.ವಿ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ವರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಅವಾಝ್ ಯೋಜನೆಯನ್ನು ಜೂನ್ 2015ರಲ್ಲಿ ಜಾರಿಗೊಳಿಸಲಾಗಿದೆ. ಇದೀಗ ಉಳ್ಳಾಲ ನಗರಸಭೆ ವ್ಯಾಪ್ತಿಗೆ ಬಂದಿದೆ. ಹೊಸದಾಗಿ ಮನೆ ನಿರ್ಮಿಸಿಕೊಳ್ಳುವುದಾದಲ್ಲಿ ಅಂತಹ ಕುಟುಂಬವು ಸ್ವಂತ ಹೆಸರಿನಲ್ಲಿ ನಿವೇಶನ ಹೊಂದಿರಬೇಕು ಅಥವಾ ಕಚ್ಚಾ ಮನೆ ಹೊಂದಿರಬೇಕು.
ಫಲಾನುಭವಿಯು ಫೋಟೋ, ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಖಾತೆಯ ವಿವರಗಳು ಹಾಗೂ ತನ್ನ ಹೆಸರಿನಲ್ಲಿ ಈಗಾಗಲೇ ಪಕ್ಕಾ ಮನೆ ಇಲ್ಲವೆಂದು ಅಫಿದವಿತ್ಗಳನ್ನು ಉಳ್ಳಾಲ ನಗರಸಭೆಗೆ ಸಲ್ಲಿಸಬೇಕಾಗಿದೆ. ಒಂದು ಕುಟುಂಬದಲ್ಲಿ ವಿವಾಹಿತ / ಅವಿವಾಹಿತ ವಯಸ್ಕ ಸದಸ್ಯರಿದ್ದಲ್ಲಿ ಅವರು ಕೂಡ ಮನೆಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಉಳ್ಳಾಲ ನಗರಸಭಾ ವ್ಯಾಪ್ತಿಯ ವಸತಿ ರಹಿತ ಕುಟುಂಬಗಳು ಕೂಡ ಈ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಬಹುದಾಗಿದೆ. ಎಷ್ಟೇ ಸಂಖ್ಯೆಯಲ್ಲಿ ಕೂಡ ಅನುಮೋದನೆ ನೀಡಲಾಗುವುದು. ಯಾವುದೇ ಗರಿಷ್ಠ ಮಿತಿ ಇಲ್ಲ. ಜೂನ್ 2015ರ ನಂತರ ಪ್ರಾರಂಭಗೊಂಡು ಅಪೂರ್ಣಗೊಂಡಿರುವ ಮನೆಗಳನ್ನು ಕೂಡ ಈ ಯೋಜನೆಯಡಿ ಪರಿಗಣಿಸಬಹುದಾಗಿದೆ. ಈಗಾಗಲೇ 21 ಚ.ಮೀ ಕಾರ್ಪೆಟ್ ವಿಸ್ತೀರ್ಣದ ಚಿಕ್ಕ ಮನೆ ಆದರೆ ಪಕ್ಕಾ ಮನೆ ಹೊಂದಿದ್ದಲ್ಲಿ ಅಂತಹ ಕುಟುಂಬಗಳು ಕನಿಷ್ಟ 9 ಚ.ಮೀ. ವಿಸ್ತೀರ್ಣದ ಹೆಚ್ಚುವರಿ ಕೊಠಡಿಯನ್ನು ನಿರ್ಮಿಸಿಕೊಳ್ಳಲು ಪ್ರಸ್ತಾವನೆ ಸಲ್ಲಿಸಬಹುದು. ಫಲಾನುಭವಿಗಳ ಪಟ್ಟಿಗೆ ಯಾವುದೇ ಸಮಿತಿಯ ಅನುಮೋದನೆಯ ಅಗತ್ಯವಿಲ್ಲ. ನಗರ ಪ್ರದೇಶದ ಆಸಕ್ತ ಕುಟುಂಬವು ಉಳ್ಳಾಲ ನಗರಸಭೆಗೆ ಅರ್ಜಿಯನ್ನು ಸಲ್ಲಿಸಬೇಕು. ಫಲಾನುಭವಿಗಳು ನಿರ್ಮಿಸುವ ಮನೆಯ ಜಿಪಿಎಸ್ ಫೋಟೋ ಆಧರಿಸಿ ರಾಜೀವ್ ಗಾಂಧೀ ಗ್ರಾಮೀಣ ವಸತಿ ನಿಗಮವು ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ 4 ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡುವುದು. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


