UN NETWORKS
ಉಳ್ಳಾಲ: ಮನೆಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಲಕ್ಷಾಂತರ ರೂ ಬೆಲೆಬಾಳುವ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ನಡೆಸಿದ ಘಟನೆ ಶುಕ್ರವಾರ ರಾತ್ರಿ ಉಳ್ಳಾಲ ಹಳೆಕೋಟೆಯಲ್ಲಿ ನಡೆದಿದೆ. ಕಳ್ಳತನ ನಡೆಸಿ ಪರಾರಿಯಾಗುತ್ತಿದ್ದ ಮೂವರಲ್ಲಿ ಒಬ್ಬಾತನನ್ನು ಸ್ಥಳೀಯರು ಹಿಡಿದಿದ್ದು, ಜೊತೆಗಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ.
ತಮಿಳುನಾಡು ಮೂಲದ ಷಣ್ಮುಗಂ(43) ಎಂಬಾತನೇ ಕಳ್ಳತನ ನಡೆಸಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಆರೋಪಿಯಾಗಿದ್ದಾನೆ.
ಉಳ್ಳಾಲದ ಹಳೆಕೋಟೆ ದಿ.ಮಹಮ್ಮದ್ ಅವರ ಜಸ್ಮಿಲ್ ಮಂಜಿಲ್‍ನಲ್ಲಿ ಶುಕ್ರವಾರ ರಾತ್ರಿ ಈ ಕಳ್ಳತನ ಕೃತ್ಯ ನಡೆದಿದೆ. ಮನೆ ಮಂದಿ ಶನಿವಾರ ಸಂಜೆ ಕೌಟುಂಬಿಕ ಕಾರ್ಯಕ್ಕೆಂದು ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭವನ್ನು ಬಳಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ಕಪಾಟಿನಲ್ಲಿದ್ದ 17 ಪವನ್ ಚಿನ್ನ ಹಾಗೂ 3.70 ಲಕ್ಷ ರೂ ನಗದನ್ನು ದೋಚಿ ಪರಾರಿಯಾಗುತ್ತಿದ್ದರು. ಇದೇ ಸಂದರ್ಭದಲ್ಲಿ ಷಣ್ಮುಗಂ ಎಂಬಾತ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು ಸ್ಥಳೀಯರು ಥಳಿಸಿದ್ದಾರೆ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಆರೋಪಿ ಷಣ್ಮುಗಂನನ್ನು ವಶಕ್ಕೆ ಪಡೆದುಕೊಂಡು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರು ಆರೋಪಿಗಳು ಕಳ್ಳತನ ನಡೆಸಿದ ಸೊತ್ತುವಿನೊಂದಿಗೆ ಪರಾರಿಯಾಗಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅವಳಿ ಸಾವಿನ ಮನೆಯಲ್ಲಿ ಕಳ್ಳತನ ಕೃತ್ಯ:
ಕಳ್ಳತನ ನಡೆದಿರುವ ಮನೆ ಜಸ್ವಿಲ್ ಮಂಜಿಲ್‍ನ ಮಹಮ್ಮದ್ ಮತ್ತು ಅವರ ಮಗಳು ಜಮೀಲ ಕಳೆದ ಒಂದುವರೇ ತಿಂಗಳ ಹಿಂದೆಯಷ್ಟೇ ಕಾಯಿಲೆಯಿಂದಾಗಿ ಒಂದೇ ದಿನ ಮೃತಪಟ್ಟಿದ್ದರು. ಇದೀಗ ಈ ಮನೆಯಲ್ಲಿ ಕಳ್ಳರು ನುಗ್ಗಿ ಕಳ್ಳತನ ನಡೆದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.


