UN NETWORKS
ಉಳ್ಳಾಲ: ಮಸೀದಿಯಲ್ಲಿ ಪ್ರಾರ್ಥನೆ ನಡೆಯುವ ಸಂದರ್ಭ ತಂಡವೊಂದು ಬೈಕಿನಲ್ಲಿ ಹಾರ್ನ್ ಹಾಕುತ್ತಾ, ಬೊಬ್ಬೆ ಹಾಕುತ್ತಿರುವುದನ್ನು ಖಂಡಿಸಿದ ಸ್ಥಳೀಯರ ಹಾಗೂ ತಂಡದ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸಂತೋಷನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮದಕ ನಿವಾಸಿ ತಂಡ ಮಿಲಾದ್ ರ್ಯಾಲಿಯಲ್ಲಿ ಭಾಗವಹಿಸಿತ್ತು. ಮದಕದಿಂದ ಉಳ್ಳಾಲ ಕಡೆಗೆ ಮಿಲಾದ್ ರ್ಯಾಲಿಯಲ್ಲಿ ಭಾಗವಹಿಸುವ ಸಂದರ್ಭ ಬೈಕಿನಲ್ಲಿ ಹಾರ್ನ್, ಘೋಷಣೆಗಳನ್ನು ಕೂಗುತ್ತಾ ಯುವಕರ ತಂಡ ಸಾಗುತಿತ್ತು. ಇದೇ ಸಂದರ್ಭ ಸಂತೋಷನಗರದ ಮಸೀದಿಯಲ್ಲಿ ಮಧ್ಯಾಹ್ನದ ಪ್ರಾರ್ಥನೆ ನಡೆಯುತಿತ್ತು. ಕರ್ಕಶ ಶಬ್ದದಿಂದಾಗಿ ಮಸೀದಿಯಲ್ಲಿದ್ದವರು ಮತ್ತು ಸ್ಥಳೀಯರು ಹೊರಬಂದು ಯುವಕರ ನಡೆಯನ್ನು ಆಕ್ಷೇಪಿಸಿದ್ದರು. ಇದರಿಂದ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಘಟನೆ ಹೊಡೆದಾಟದ ಹಂತ ತಲುಪುತ್ತಿದ್ದಂತೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಇದೇ ವೇಳೆ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.


