UN NETWORKS
ಉಳ್ಳಾಲ: ಬೃಹತ್ ಅಂತರಾಜ್ಯ ವಾಹನ ಕಳವು ಜಾಲವನ್ನು ಪತ್ತೆಹಚ್ಚಿರುವ ಉಳ್ಳಾಲ ಪೊಲೀಸರು 15 ಪ್ರಕರಣಗಳನ್ನು ಬೇಧಿಸಿ ಮೂವರು ಆರೋಪಿಗಳು ಹಾಗೂ 20 ಲಕ್ಷ ರೂ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಜೇಶ್ವರ ಬಪ್ಪಾಯಿ ತೊಟ್ಟಿ ನಿವಾಸಿ ಶಾಹಿರ್ (23), ಉಪ್ಪಳದ ಮೊಹಮ್ಮದ್ ಆದೀಲ್ (26) ಮತ್ತು ಕಾಸರಗೋಡು ಚೆಂಗಳದ ಅಬ್ದುಲ್ ಮುನಾವರ್ ಯಾನೆ ಮುನ್ನ (21) ಬಂಧಿತರು. ಉಳ್ಳಾಲ ಠಾಣಾ ವ್ಯಾಪ್ತಿಯ 4 ಪ್ರಕರಣಗಳ ಒಟ್ಟು ನಾಲ್ಕು ಬುಲೆಟ್ ಮೋಟಾರ್ ಬೈಕ್, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಒಂದು ಬುಲೆಟ್ ಮತ್ತು 1 ಬೈಕ್, ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಎರಡು ಬೈಕ್, ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ 1 ಪ್ರಕರಣದಲ್ಲಿ ಒಂದು ಬೈಕ್ ಸೇರಿದಂತೆ ಕಳವು ನಡೆಸಿದ ಒಟ್ಟು 15 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಷೋಕಿ ಜೀವನಕ್ಕಾಗಿ ಕಳವು : ಮೂವರು ಅಂತರಾಜ್ಯ ಕುಖ್ಯಾತಿ ಹೊಂದಿರುವ ದ್ವಿಚಕ್ರ ವಾಹನ ಕಳ್ಳರಾಗಿದ್ದಾರೆ. ಆರೋಪಿಗಳ ಪೈಕಿ ಅಬ್ದುಲ್ ಮುನಾವರ್ ನಗರದ ಕಾಲೇಜೊಂದರ ಬಿಬಿಎಂ ವಿದ್ಯಾರ್ಥಿ. ಈತನನ್ನು ಬಳಸಿಕೊಳ್ಳುವ ತಂಡ ಕಾಲೇಜು ಹೊರಗಡೆ ನಿಲ್ಲಿಸಲಾಗುವ ಬುಲೆಟ್ ಬೈಕುಗಳನ್ನೇ ಕಳವು ನಡೆಸುತ್ತಿದ್ದರು. ಕಳವು ನಡೆಸಿದ ವಾಹನಗಳಿಗೆ ಮಂಗಳೂರು ಸಾರಿಗೆ ಇಲಾಖೆಯ ನೋಂದಣಿ ಸಂಖ್ಯೆ ತೆಗೆದು ಕಾಸರಗೋಡು ಪ್ರಾದೇಶಿಕ ಸಾರಿಗೆ ಕಚೇರಿಯ ನಕಲಿ ನೋಂದಣಿ ನಂಬರ್ ಪ್ಲೇಟ್ ಗಳನ್ನು ಅಳವಡಿಸಿಕೊಂಡು ಅದರಲ್ಲೇ ತಿರುಗಾಟ ನಡೆಸಿ ಮಾರಾಟ ಮಾಡಿದ್ದರು. ಈ ಜಾಲದ ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಕೆ.ಆರ್ ನೇತೃತ್ವದ ಪೊಲೀಸರ ತಂಡ ಅಂತರಾಜ್ಯ ದ್ವಿಚಕ್ರ ಕಳವು ಜಾಲವನ್ನು ಬೇಧಿಸಿದ್ದಾರೆ.
ಸ್ಟಿಕ್ಕರ್ ನಿಂದ ಪತ್ತೆ: ವಾಹನ ಕಳ್ಳರು ಕಳವು ನಡೆಸಿದ ವಾಹನಗಳ ನೋಂದಣಿ ಸಂಖ್ಯೆಯನ್ನು ಮಾತ್ರ ಬದಲಿಸುತ್ತಿದ್ದರು. ಆದರೆ ಅದರಲ್ಲಿ ಮಾಲೀಕರು ಅಳವಡಿಸಿದ್ದ ಸ್ಟಿಕ್ಕರ್ ಗಳನ್ನು ತೆಗೆಯುತ್ತಿರಲಿಲ್ಲ. ಅದರಂತೆ ಬುಲೆಟ್ ಬೈಕೊಂದರಲ್ಲಿ ಹಾಕಲಾಗಿದ್ದ ಸ್ಟಿಕ್ಕರ್ ಒಂದು ಹಾಗೆಯೇ ಉಳಿದಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ತಲಪಾಡಿ ಸಮೀಪ ತಪಾಸಣೆ ನಡೆಸಿದ ಸಂದರ್ಭ ದಾಖಲೆಗಳಿಲ್ಲದ ಕಾಸರಗೋಡು ನಕಲಿ ನೋಂದಾಯಿತ ಬುಲೆಟ್ ಪತ್ತೆಯಾಗಿತ್ತು. ಬುಲೆಟ್ ಚಲಾಯಿಸುತ್ತಿದ್ದವನ ವಿಚಾರಣೆಗೆ ತೆಗೆದುಕೊಂಡ ಪೊಲೀಸರಿಗೆ ವಾಹನ ಚೋರರ ಬಂಡವಾಳ ಬಯಲಾಗಿತ್ತು.
ದಂಧೆಗೆ ಕೇರಳ-ಕೊಡಗು ಸಂತ್ರಸ್ತರ ಹೆಸರು ಬಳಕೆ : ವಿದ್ಯಾರ್ಥಿ ಮುನಾವರ್ ಮತ್ತು ಶಾಹಿರ್ ಇಬ್ಬರೂ ವಾಹನಗಳನ್ನು ಕಳವು ನಡೆಸುವವರಾಗಿದ್ದಾರೆ. ಆದೀಲ್ ಕಳವು ನಡೆಸಿದ ವಾಹನಗಳನ್ನು ಮಾರಾಟ ನಡೆಸುವ ಮಧ್ಯವರ್ತಿಯಾಗಿದ್ದನು. ಕಾಸರಗೋಡು, ಉಪ್ಪಳ, ಮಂಜೇಶ್ವರ, ಕುಂಬಳೆ ವ್ಯಾಪ್ತಿಯಲ್ಲಿ ಕಳವು ನಡೆಸಿದ ವಾಹನಗಳನ್ನು ಮಾರಾಟ ನಡೆಸಿರುವ ಈತ, ಕೇವಲ ರೂ.30,000, 40,000 ದಂತೆ ಮಾರಾಟ ನಡೆಸಿದ್ದ. ಖರೀದಿದಾರರು ಕಡಿಮೆ ದರದ ಬಗ್ಗೆ ಪ್ರಶ್ನಿಸಿದಾಗ ವಾಹನಗಳು ಕೇರಳ ಮತ್ತು ಕೊಡಗು ಭಾಗದ ನೆರೆಪೀಡಿತ ಪ್ರದೇಶದವರಿಗೆ ಸೇರಿರುವುದಾಗಿ ಸುಳ್ಳು ಹೇಳಿ. ನೆರೆ ಬಂದಾಗ ದಾಖಲೆಗಳೆಲ್ಲವೂ ಕಳೆದುಹೋಗಿವೆ. ಆ ಕಾರಣಕ್ಕಾಗಿ ಅಲ್ಲಿಂದ ತಂದು ಕಡಿಮೆ ಹಣಕ್ಕಾಗಿ ಮಾರಾಟ ನಡೆಸುತ್ತಿರುವುದಾಗಿ ಹೇಳುತ್ತಾ ವ್ಯಾಪಾರ ಕುದುರಿಸುತ್ತಿದ್ದರೆಂದು ವಿಚಾರಣೆ ವೇಳೆ ಕಳ್ಳರು ಬಾಯ್ಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಠಾಣಾ ಪಿಎಸ್ ಐ ಗಳಾದ ವಿನಾಯಕ ತೋರಗಲ್ ಮತ್ತು ಗುರುವಪ್ಪ ಕಾಂತಿ ಹಾಗೂ ಎಎಸ್ ಐಗಳಾದ ವಿಜಯರಾಜ್, ಮೋಹನ್ ಕೆ.ವಿ, ರಾಧಾಕೃಷ್ಣ ವಳಾಲ್, ವಿಶ್ವನಾಥ ರೈ ಹಾಗೂ ಸಿಬ್ಬಂದಿಗಳಾದ ದಿನೇಸ್, ಸುರೇಶ್, ಜಯಪ್ರಕಾಶ್ , ಪ್ರವೀಣ್ , ಶಾಂತಪ್ಪ, ಪ್ರಶಾಂತ್, ವಾಸುದೇವ, ರಂಜಿತ್, ಲಿಂಗರಾಜ್, ಚಿದಾನಂದ, ಅಕ್ಬರ್, ಸುರೇಶ್ ಭಾಗವಹಿಸಿದ್ದರು.


