UN NETWORKS
ಉಳ್ಳಾಲ: `ಹೆಳವನಾಗಿ, ಕುರುಡನಾಗಿಯಾದರೂ ಬದುಕಬಹುದು. ಆದರೆ ಅನಾಥನಾಗಿ ಬಾಳುವ ಸಂಕಷ್ಟ ಯಾರಿಗೂ ಬರಬಾರದು. ಇಂತಹ ದುರ್ವಿಧಿ ಕರ್ಣನ ಬದುಕಿನೊಂದಿಗೇ ಕೊನೆಯಾಗಲಿ…’ ಹೀಗೆಂದು ಬಳ್ಕೂರು ಕೃಷ್ಣಯಾಜಿ ಅವರು ಕರ್ಣನಾಗಿ ಪರಕಾಯ ಪ್ರವೇಶವೆಂಬಂತೆ ತೋರಿದ ಪ್ರದರ್ಶನದಲ್ಲಿ ಕರ್ಣಾವಸಾನದ ಅಂತಿಮ ಹಂತದಲ್ಲಿ ಹೇಳಿದ ಸಂಭಾಷಣೆಗೆ ಅಕ್ಷರಶಃ ಕಿಕ್ಕಿರಿದ ಸಭೆ ಕಣ್ಣೀರಾಗಿತ್ತು.
ಸ್ಥಳ-ತಲಪಾಡಿ ಟೋಲ್ ಗೇಟ್ ಹತ್ತಿರದ ಫಿಜಾ ಮೈದಾನ. ಸಂದರ್ಭ-ತಲಪಾಡಿ ಯಕ್ಷಮಿತ್ರ ಸೇವಾ ಬಳಗದವರು ಶನಿವಾರ ರಾತ್ರಿ, ನಿರಂತರವಾಗಿ ಐದನೇ ವರ್ಷ ಆಯೋಜಿಸಿದ್ದ ರಾತ್ರಿ ಪೂರ್ತಿಯ `ತಲಪಾಡಿ ಯಕ್ಷೋತ್ಸವದ’ ಕರ್ಣ ಪರ್ವ ಬಯಲಾಟ ಪ್ರಸಂಗ. ಒಟ್ಟು ಮೂರು ಪ್ರಸಂಗಗಳ ಪೈಕಿ ಆರಂಭದ ಎರಡೂ ಪ್ರಸಂಗಗಳು ತೆಂಕು ಮತ್ತು ಬಡಗು ತಿಟ್ಟುಗಳ ಶೈಲಿಯ ಜುಗಲ್ ಬಂಧಿಗೆ ಸಾಕ್ಷಿಯಾಗಿದ್ದು, ಉಭಯ ತಿಟ್ಟುಗಳ ಕಲಾರಸಿಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ರಂಗದ ಮೇಲೆ ಜೊತೆ ಜೊತೆಯಾಗಿ ಉಭಯ ತಿಟ್ಟುಗಳ ಹಿಮ್ಮೇಳ ಪ್ರದರ್ಶನಕ್ಕೆ ಹೊಸ ಕಳೆ ತಂದುಕೊಟ್ಟಿತು.
ರವಿಚಂದ್ರ ಕನ್ನಡಿಕಟ್ಟೆ ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರು ಭಾಗವತಿಕೆಯಲ್ಲಿ `ಕೀಚಕ ವಧೆ’, ಬಳಿಕ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹಾಗೂ ರಾಘವೇಂದ್ರ ಆಚಾರ್ ಜನ್ಸಾಲೆ ಭಾಗವತಿಕೆಯಲ್ಲಿ `ಕರ್ಣ ಪರ್ವ’ ಹಾಗೂ ಬೆಳಗ್ಗಿನ ಜಾವ ಹೊಸಮೂಲೆ ಗಣೇಶ ಭಟ್, ಪ್ರಸಾದ ಬಲಿಪ, ದೇವಿ ಪ್ರಸಾದ್ ಆಳ್ವ ತಲಪಾಡಿ, ಸತೀಶ್ ಶೆಟ್ಟಿ ಬೋಂದೆಲ್ ಭಾಗವತಿಕೆಯಲ್ಲಿ `ಕುಮಾರ ವಿಜಯ’ ಪ್ರಸಂಗಗಳ ಪ್ರದರ್ಶನ ಬೆಳಗ್ಗಿನ ವರೆಗೆ ನಡೆಯಿತು. ಮೊದಲನೇ ಪ್ರಸಂಗದಲ್ಲಿ ಕೀಚಕನಾಗಿ ಬಡಗಿನ ಪ್ರಸನ್ನ ಶೆಟ್ಟಿಗಾರ್, ವಲಲನಾಗಿ ತೆಂಕಿನ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸೈರಂಧ್ರಿಯಾಗಿ ಶಶಿಕಾಂತ ಶೆಟ್ಟಿ ಕಾರ್ಕಳ (ಉಭಯ ಶೈಲಿ), ಸುದೇಷ್ಣೆಯಾಗಿ ಬಡಗಿನ ನೀಲ್ಕೋಡು ಶಂಕರ ಹೆಗಡೆ ಅತ್ಯುತ್ತಮ ಅಭಿನಯ ನೀಡಿದರು.
ಕರ್ಣಪರ್ವದಲ್ಲಿ ಬಡಗಿನ ದಿಗ್ಗಜ ಕಲಾವಿದರಾದ ಬಳ್ಕೂರು ಕೃಷ್ಣ ಯಾಜಿ ಕರ್ಣನಾಗಿ, ಕೊಂಡದಕುಳಿ ರಾಮಚಂದ್ರ ಹೆಗಡೆ ಶಲ್ಯನಾಗಿ, ತೋಟಿಮನೆ ಗಣಪತಿ ಹೆಗಡೆ ಕೃಷ್ಣನಾಗಿ ಹಾಗೂ ತೆಂಕಿನ ಸುಬ್ರಾಯ ಹೊಳ್ಳ ಕಾಸರಗೋಡು ಅರ್ಜುನನಾಗಿ ಪೈಪೋಟಿಯ ಪ್ರದರ್ಶನ ನೀಡಿದರು. ತೆಂಕಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ದ್ವಂದ್ವ ಭಾಗವತಿಕೆಗಳಲ್ಲಿ `ಕುಮಾರ ವಿಜಯ’ ಪ್ರದರ್ಶನ ಕಂಡಿತು.
ಸನ್ಮಾನ: ಬಯಲಾಟಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಅವರನ್ನು ಸನ್ಮಾನಿಸಲಾಯಿತು. ತಾರಾನಾಥ ಬಲ್ಯಾಯ ಅಭಿನಂದನಾ ಮಾತುಗಳನ್ನಾಡಿದರು. ಕಟೀಲು ದೇವಳದ ಆನುವಂಶಿಕ ಅರ್ಚಕ ವೇ.ಮೂ. ವಾಸುದೇವ ಆಸ್ರಣ್ಣ, ವೇ.ಮೂ.ಟಿ.ಬಾಲಕೃಷ್ಣ ಭಟ್ ಪಂಜಾಳ, ಜಯರಾಮ ಯಾನೆ ಅಂತ ಪೂಜಾರಿ, ಸರ್ವಾಣಿ ಟಿ.ನಾಯ್ಕ್ ತಲಪಾಡಿ ಅತಿಥಿಗಳಾಗಿದ್ದರು. ಗುರುರಾಜ ಹೊಳ್ಳ ಬಾಯಾರು ನಿರ್ವಹಿಸಿದರು. ಸೇವಾ ಬಳಗದ ಪ್ರಮುಖ ಸಂತೋಷ್ ಅಲಂಕಾರ ಗುಡ್ಡೆ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಊಟೋಪಚಾರವನ್ನೂ ಕಲ್ಪಿಸಲಾಗಿತ್ತು.


