UN NETWORKS
ಕೊಣಾಜೆ: ಮಂಗಳೂರು ವಿವಿಯ ಪ್ರಭಾರ ಕುಲಪತಿಯಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಡೀನ್ ಆಗಿರುವ ಪ್ರೊ.ಈಶ್ವರ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ಪ್ರಭಾರ ಕುಲಪತಿಯಾಗಿದ್ದ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು ನೂತನ ಪ್ರಭಾರ ಕುಲಪತಿಯವರಿಗೆ ಅಧಿಕಾರ ಹಸ್ತಾಂತರಿಸಿದರು.
ಮಂಗಳೂರು ವಿವಿ ಕುಲಪತಿಯಾಗಿದ್ದ ಪ್ರೊ.ಕೆ.ಭೈರಪ್ಪ ಅವರ ಅಧಿಕಾರ ಅವಧಿ ಜೂ.5ಕ್ಕೆ ಮುಗಿದ ಬಳಿಕ ಸೀನಿಯರ್ ಡೀನ್ ಆಧಾರದಲ್ಲಿ ಡಾ.ಕಿಶೋರ್ ಕುಮಾರ್ ಸಿ.ಕೆ. ಅವರು ಪ್ರಭಾರ ಕುಲಪತಿಯಾಗಿ ನೇಮಕಗೊಂಡಿದ್ದರು. ಅವರ ಸೀನಿಯರ್ ಡೀನ್ ಅವಧಿಯು ಇದೀಗ ಪೂರ್ಣಗೊಂಡಿರುವುದರಿಂದ ಇದೀಗ ಪ್ರಭಾರ ಕುಲಪತಿಯಾಗಿ ಪ್ರೊ.ಈಶ್ವರ್ ಪಿ. ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಎಂ.ಖಾನ್, ಪರೀಕ್ಷಾಂಗ ಕುಲಸಚಿವ ಪ್ರೊ.ರವೀಂದ್ರ ಆಚಾರ್ಯ, ಮಂಗಳೂರು ವಿ.ವಿ.ವಿಶೇಷಾಧಿಕಾರಿ ಡಾ.ನಾಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.


