UN NETWORKS
ಉಳ್ಳಾಲ: ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇರಳಕಟ್ಟೆ ಜಂಕ್ಷನ್ ಸಮೀಪದ ಕಾನಕೆರೆಯ ನಾಲ್ಕು ಬಾವಿಗಳ ನೀರು ಪೆಟ್ರೋಲ್ ವಾಸನೆ ಬರುತ್ತಿರುವ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತ್ತೆಯೇ ಐಒಸಿಎಲ್ ಹಾಗೂ ಅಗ್ನಶಾಮಕ ದಳದ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಕುಡಿಯುವ ನೀರನ್ನು ಪರಿಶೀಲಿಸಿದ್ದಾರೆ. ಸ್ಥಳೀಯರ ಆರೋಪದ ಹಿನ್ನೆಲೆಯಲ್ಲಿ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಕಾರ್ಯಚರಿಸುತ್ತಿರುವ ಪೆಟ್ರೋಲ್ ಬಂಕ್ ಅನ್ನು ತಾತ್ಕಾಲಿಕವಾಗಿ ಪೊಲೀಸರು ಬಂದ್ ಮಾಡಿಸಿದ್ದಾರೆ.
ಬೆಳಿಗ್ಗೆ 9 ಗಂಟೆ ವೇಳೆ ಸ್ಥಳಕ್ಕೆ ಅಗ್ನಿ ಶಾಮಕ ದಳ ದೌಡಾಯಿಸಿ ಬಾವಿಯನ್ನು ಮತ್ತು ಸ್ಥಳವನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮವನ್ನು ವಹಿಸಿಕೊಂಡರು. ಸಂಜೆವರೆಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದರು. ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳದಲ್ಲಿ ಬಾವಿಯನ್ನು ನೋಡಲು ಬಂದ ಕುತೂಹಲಿಗರನ್ನು ನಿಯಂತ್ರಿಸಿದರು. ಪೆಟ್ರೋಲ್ ಬಂಕ್ ನಿಂದಾಗಿ ಸೋರಿಕೆ ಉಂಟಾಗುತ್ತಿದೆ ಅನ್ನುವ ಆರೋಪಕ್ಕೆ ಸಂಬಂಧಿಸಿ ಬಂಕ್ ಮಾಲೀಕರಿಗೆ ಪರಿಶೀಲನೆ ನಡೆಸಿ ದೃಢೀಕರಣ ನೀಡಿದ ನಂತರ ವೇ ತೆರೆಯುವಂತೆ ಆದೇಶಿಸಿದ ಎಸಿಪಿ ರಾಮರಾವ್, ಪೆಟ್ರೋಲ್ ಬಂಕ್ ಅನ್ನು ಮುಚ್ಚುಗಡೆ ನಡೆಸಿದ್ದಾರೆ. ಸಂಜೆಯವರೆಗೂ ಕಾನೆಕೆರೆ ಪ್ರದೇಶ ಜನರಿಂದ ಕೂಡಿತ್ತು.
ಕೆಲವು ಸಮಯದ ಹಿಂದೆ ಪೆಟ್ರೋಲ್ ಪಂಪ್ ಪಕ್ಕದಲ್ಲೇ ಇರುವ ವಾಣಿಜ್ಯ ಕಟ್ಟಡದಿಂದ ಶೌಚಗೃಹದ ನೀರು ಸಮರ್ಪಕ ವ್ಯವಸ್ಥೆಯಿಲ್ಲದೆ ಕಾನಕೆರೆಯಲ್ಲಿರುವ ಬಾವಿಗಳಿಗೆ ನುಗ್ಗಿ ನೀರು ಕುಡಿಯಲು ಸಮಸ್ಯೆಯಾಗಿತ್ತು. ಪಂಚಾಯಿತಿ ಹಲವು ಬಾರಿ ಎಚ್ಚರಿಕೆ ನೀಡಿದ ಪರಿಣಾಮ ಇತ್ತೀಚೆಗಷ್ಟೇ ನೀರು ಶೇಖರಣೆಗೆ ತೊಟ್ಟಿ ನಿರ್ಮಿಸಲಾಗಿತ್ತು. ಇದಾದ ಬಳಿಕ ಸ್ಥಳೀಯರು ಬಾವಿ ನೀರು ಬಳಸಲು ಆರಂಭಿಸುತ್ತಿದ್ದಂತೆಯೇ ಇದೀಗ ಪೆಟ್ರೋಲ್ ಸಮಸ್ಯೆ ಎದುರಾಗಿದೆ. ಇಲಾಖೆ ಅಧಿಕಾರಿಗಳು ಪರೀಕ್ಷಿಸಿ ಪ್ರಯೋಗಾಲಯದ ವರದಿ ಹೊರ ಬಂದ ಬಳಿಕ ಸತ್ಯಾಸತ್ಯತೆ ಹೊರತರುವುದಾಗಿ ತಿಳಿಸಿದ್ದಾರೆ.
ಹದಿನೈದು ವರ್ಷಗಳ ಹಿಂದೆ ಪಂಪ್ ಪಕ್ಕದ ಮನೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಿಂತಲೂ ಪಂಪ್ ಕುಸಿಯುವ ಕುರಿತು ವದಂತಿ ಹರಡಿತ್ತು. ವಾಸ್ತವದಲ್ಲಿ ಸಿಡಿಲಿನ ಹೊಡೆತಕ್ಕೆ ಪಂಪ್ ಆವರಣ ಗೋಡೆ ಕುಸಿದಿತ್ತು. ಹಾಗಾಗಿ ಅಂದು ಆವರಣ ಗೋಡೆ ಕುಸಿದು ದುರಸ್ಥಿಗೊಳಿಸಲಾಗಿದ್ದರೂ ಸ್ಥಳೀಯ ನಿವಾಸಿಗಳು ಇನ್ನೂ ಆತಂಕದಿಂದ ಹೊರಬಂದಿಲ್ಲ. ಸಾರ್ವಜನಿಕರು ಟ್ಯಾಂಕ್ ಒಡೆದು ಹೋಗಿರಬೇಕು ಎಂಬ ಅನುಮಾನ ವ್ಯಕ್ತಪಡಿಸುತ್ತಿರುವುದು ಹಾಗೂ ಬಾವಿಯ ನೀರಿನಲ್ಲಿ ಪೆಟ್ರೋಲ್ ವಾಸನೆ ಬರುತ್ತಿರುವುದು ಇನ್ನಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಬಾವಿ ನೀರನ್ನು ಎಳೆದು ಬೆಂಕಿಕೊಟ್ಟಾಗ ನೀರು ತೈಲದಂತೆ ಉರಿಯುತ್ತಿರುವುದು ಆತಂಕ ಹೆಚ್ಚಾಗಲು ಕಾರಣವಾಗಿದೆ.
ಐಓಸಿಎಲ್ ಕಂಪೆನಿ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯರಿಂದ ಪೆಟ್ರೋಲ್ ಬಂಕ್ ಮಾಲೀಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಜನರಲ್ಲಿಯೂ ಮುಂಜಾಗ್ರತಾ ಕ್ರಮವನ್ನು ವಹಿಸಿಕೊಳ್ಳುವಂತೆ ಸೂಚಿಸಿದ್ದಾರೆ. ರಾಸಾಯನಿಕ ಬಾವಿ ಸೇರಿರುವುದರಿಂದ ನೀರು ಕಲುಷಿತಗೊಂಡಿರುವುದು ಪ್ರಾಥಮಿಕ ಹಂತದಲ್ಲಿ ತಿಳಿದುಬರುತ್ತದೆ. ಬಹಳ ಸಮಯದಿಂದ ಸುರಿದ ತ್ಯಾಜ್ಯ ನೀರು ಮಿಥಾನಾಲ್ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಇದರಲ್ಲಿಯೂ ಬೆಂಕಿ ಕಾಣಿಸಬಹುದು. ನೀರು ಸಂಗ್ರಹಿಸಲಾಗಿದ್ದು ವರದಿ ಬಂದ ಬಳಿಕವೇ ಸಮಸ್ಯೆ ನಿಖರ ಕಾರಣವನ್ನು ತಿಳಿಸಬಹುದು ಎಂದಿದ್ದಾರೆ.
ಪೆಟ್ರೋಲ್ ಪಂಪ್ ಕೆಳಭಾಗದಲ್ಲಿ ಕೆಲವು ಮನೆಗಳಿತ್ತು. ಹದಿನೈದು ವರ್ಷದ ಹಿಂದೆ ಸಿಡಿಲಿನ ಹೊಡೆತಕ್ಕೆ ತಡೆಗೋಡೆಗೆ ಹಾನಿಯಾಗಿತ್ತೇ ಹೊರತು ಟ್ಯಾಂಕ್ ಗೆ ಯಾವುದೇ ಹಾನಿಯಾಗಿರಲಿಲ್ಲ. ತಜ್ಞರನ್ನು ಕರೆಸಿ ಪರಿಶೀಲಿಸಲಾಗಿತ್ತು. ಆ ಬಳಿಕವೂ ಅಧಿಕಾರಿಗಳು ಪರಶೀಲಿಸಿದ್ದರು. ಪೆಟ್ರೋಲ್ ಸೋರಿಕೆ ಆಗಿಲ್ಲ ಎಂಬುದು ಖಚಿತವಾಗಿತ್ತು. ತಡೆಗೋಡೆ ಕೆಲವು ಸಮಯದಲ್ಲೇ ಸರಿಪಡಿಸಲಾಗಿತ್ತು. ಗೋಡೆ ಬಿರುಕು ಬಿಟ್ಟಾಗ ಪಕ್ಕದ ಮನೆಯವರಿಗೆ ವಸತಿಗೆ ಪಂಪ್ ಮಾಲೀಕರು ಹಣ ಕೊಟ್ಟು ತಾತ್ಕಾಲಿಕ ಪರ್ಯಾಯ ವ್ಯವಸ್ಥೆ ಮಾಡಿದ್ದರು. ದುರಸ್ತಿಪಡಿಸಲಾಗಿದೆಯಾದರೂ ಅದರಿಂದ ಪೆಟ್ರೋಲ್ ಸೋರಿಕೆಯಾಗಿ ಬಾವಿ ಸೇರುತ್ತಿದೆ ಎಂಬ ಸಂಶಯ ಸ್ಥಳೀಯರದ್ದಾಗಿದ್ದು ಅದಕ್ಕೆ ಪುರಾವೆ ಇಲ್ಲ.
ಸೀತಾರಾಮ ಶೆಟ್ಟಿ ದಡಸ್
ಪೆಟ್ರೋಲ್ ಬಂಕ್ ಮಾಲೀಕರು


