UN NETWORKS
ಕುತ್ತಾರು: ಮನುಷ್ಯನಿಗೆ ಕಾಯಿಲೆಗಳು ಬರುವುದು ಸಾಮಾನ್ಯ, ಈ ಸಂದರ್ಭ ಮಾನಸಿಕವಾಗಿ ಕುಗ್ಗದೆ ಮನೋಸ್ಥೈರ್ಯದ ಜೊತೆ ದೇವಬಲವೂ ನಮ್ಮಲ್ಲಿದ್ದರೆ ಎಂತಹ ಕಾಯಿಲೆಗಳಿಂದಲೂ ಮುಕ್ತಿ ಪಡೆಯಲು ಸಾಧ್ಯ ಎಂದು ಬಬ್ಬುಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸೀತಾಲಕ್ಷ್ಮಿ ಅಭಿಪ್ರಾಯಪಟ್ಟರು.
ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಸಮಿತಿಯಿಂದ ದಿ. ರಾಜಮಾತೆ ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಾಬ್ಧಿ ಪ್ರಯುಕ್ತ ಮಹಿಳಾ ಮೋರ್ಚಾ ಮಂಗಳೂರು ಸಮಿತಿ ಹಾಗೂ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಹಭಾಗಿತ್ವದಲ್ಲಿ ಭಾನುವಾರ ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಳಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಉಚಿತ ಆರೋಗ್ಯ ಹಾಗೂ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ತನ್ನ 32ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ಗೆ ಗುರಿಯಾಗಿದ್ದರೂ ಬದುಕಬೇಕೆನ್ನುವ ಛಲ ಹುಟ್ಟಿ ಕಿಮೋಥೆರಪಿ ಮಾಡಿಸಿಕೊಂಡಿದ್ದೆ. ತನ್ನಲ್ಲಿದ್ದ ಮನೋಸ್ಥೈರ್ಯದಿಂದಾಗಿ ವೃತ್ತಿ ಜೀವನ ಪೂರೈಸಿ ನಿವೃತ್ತಿಯೂ ಆದೆ. ಕಿಮೋಥೆರಪಿ ಬಳಿಕ ತಲೆಕೂದಲೂ ಉದುರಲಿಲ್ಲ. ವೃತ್ತಿಯಲ್ಲಿ ಪ್ರಾಮಾಣಿಕತೆ ಹೊಂದಿದ ಫಲವಾಗಿ ದೇವಬಲ ಬಂದು ಕಿಮೋಥೆರಪಿ ಬಳಿಕವೂ 30ವರ್ಷ ಬದುಕಿದ್ದು ಇನ್ನೂ ಬದುಕುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವೈದ್ಯಕೀಯ ಪ್ರಕೋಷ್ಠ ಸಂಚಾಲಕ ಡಾ. ರಾಘವೇಂದ್ರ ಭಟ್ ಮಾತನಾಡಿ, ವಿದೇಶದಲ್ಲಿ ಎರಡು ವರ್ಷಕ್ಕೊಮ್ಮೆ ಹಾಗೂ 50ವರ್ಷ ದಾಟಿದವರು ವರ್ಷಕ್ಕೊಮ್ಮೆ ಸ್ತನ ಕ್ಯಾನ್ಸರ್ ತಪಾಸಣೆ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ನಮ್ಮಲ್ಲಿ ಅರಿವಿನ ಕೊರತೆಯಿಂದಾಗಿ ಕಾಯಿಲೆ ಬಂದವರು ವೈದ್ಯರಲ್ಲಿ ಬರುವಾಗ ತಡವಾಗಿರುತ್ತದೆ ಎಂದು ಹೇಳಿದರು.ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷೆ ಜಿ. ಪೂಜಾ ಪೈ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಗೀತಾಂಜಲಿ ಸುವರ್ಣ, ಪ್ರಭಾ ಮಾಲಿನಿ, ಸಂಧ್ಯಾ ವೆಂಕಟೇಶ್ ಹಾಗೂ ರಜನಿ ದುಗ್ಗಣ್ಣ ಉಪಸ್ಥಿತರಿದ್ದರು. ರಮಣಿ ಸ್ವಾಗತಿಸಿದರು. ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಜೀವಿ ಕೆಂಪುಮಣ್ಣು ಅಭಿನಂದನಾ ಪತ್ರ ವಾಚಿಸಿದರು. ಮಮತಾ ಸೋಮೇಶ್ವರ ವಂದಿಸಿದರು.


