UN NETWORKS
ದೇರಳಕಟ್ಟೆ: ಆರೋಗ್ಯಕರ ಶರೀರಕ್ಕೆ ಪ್ರತಿಯೊಂದು ಅವಯಗಳೂ ಆರೋಗ್ಯಯುತವಾಗಿರಬೇಕು, ಅದೇ ರೀತಿ ದೇಶದಲ್ಲಿರುವ ಪ್ರತಿಯೊಂದು ರಾಜ್ಯಗಳೂ ಅಭಿವೃದ್ಧಿ ಕಂಡಾಗ ಮಾತ್ರವೇ ಸರ್ಕಾರದ ಯೋಜನೆಗಳು ಫಲಪ್ರದವಾಗಲು ಸಾಧ್ಯ ಎಂದು ನಾಗಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಅಭಿಪ್ರಾಯಪಟ್ಟರು.
ಉತ್ತರ ರಾಜ್ಯಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅಸ್ಸಾಂನ ರಾಮ್‍ಕುಯಿ ಜಿಮ್ ಹಾಗೂ ಅರುಣಾಚಲ ಪ್ರದೇಶದ ಲತ್ಸಮ್ ಕಿಮುನ್ ಅವರಿಗೆ ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ದೇರಳಕಟ್ಟೆ ಕ್ಷೇಮಾ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾಲಯ ಉತ್ತರ ಭಾರತ ರಾಜ್ಯಗಳ ಹೆಣ್ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜೊತೆಗೆ ಆ ಭಾಗದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಸೇವೆಗೆ ಇನ್ನಷ್ಟು ಬಲ ತುಂಬುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಸಂದರ್ಭ ಸಾಧನೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, ನಿಟ್ಟೆ ವಿಶ್ವವಿದ್ಯಾಲಯ ಸಾಮಾಜಿಕಾಗಿ ಸೇವೆಯಲ್ಲಿ ನಿರತರಾಗಿರುವವರನ್ನು ಸದಾ ಗುರುತಿಸುವ ಕೆಲಸ ಮಾಡುತ್ತಾ ಬಂದಿದೆ. ಉತ್ತರ ರಾಜ್ಯಗಳ ಶಿಕ್ಷಣ ವ್ಯವಸ್ಥೆ ಸುಧಾರಣೆಗಾಗಿ ಈಗಾಗಲೇ ನಮಸ್ತೇ ಮೂಲಕ ಕಾರ್ಯಕ್ರಮ ಸಂಯೋಜಿಸಲಾಗುತ್ತಿದೆ ಎಂದರು.
ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ಪರಿಕ್ಷಾ ನಿಯಂತ್ರಣಾಧಿಕಾರಿ ಡಾ.ಪ್ರಸಾದ್ ಬಿ.ಶೆಟ್ಟಿ, ಕುಲಸಚಿವೆ ಡಾ.ಅಲ್ಕಾ ಕುಲಕರ್ಣಿ ಹಾಗೂ ಡಾ.ಇಂದ್ರಾಣಿ ಕರುಣಾಸಾಗರ್ ಉಪಸ್ಥಿತರಿದ್ದರು.ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಸ್ವಾಗತಿಸಿದರು. ಡಾ.ಅನಿರ್ಬನ್ ಚಕ್ರಬೊರ್ತಿ ವಂದಿಸಿದರು.


