UN NETWORKS
ಉಳ್ಳಾಲ: ತಂತ್ರಜ್ಞಾನ ಎಂಬುದು ಇಂಜಿನಿಯರ್ ಗಳಿಗೆ ಮಾತ್ರ ಸೀಮಿತವಾಗಿರದೆ ಪ್ರತಿ ಕ್ಷೇತ್ರದಲ್ಲೂ ಬಳಕೆಯಾಗುತ್ತಿದ್ದು, ಹತ್ತು ವರ್ಷಗಳ ತಂತ್ರಜ್ಞಾನದ ಬೆಳವಣಿಗೆಯಿಂದ ಹಲವು ಕಂಪೆನಿಗಳು ಮುಚ್ಚಿದ್ದರೂ, ಇನ್ನು ಹಲವು ಅಭಿವೃದ್ಧಿಯನ್ನು ಹೊಂದಿದೆ ಎಂದು ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ ಗೋಪಿಕೃಷ್ಣನ್ ಹೇಳಿದರು.
ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ನಡೆದ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನ ಸಂಸ್ಥೆ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಹತ್ತೊಂಬತ್ತನೇ ಕಾಲೇಜು ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ನೂತನ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ನಿರೀಕ್ಷೆಗೂ ಮೀರಿ ವಿನೂತನ ತಂತ್ರಜ್ಞಾನಗಳು ಬರಲಿದ್ದು ಉದ್ಯಮ ರಂಗಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾಗಲಿದೆ. ತಾಂತ್ರಿಕವಾಗಿ ಮುಂದುವರಿಯದ ಹಿನ್ನೆಲೆಯಲ್ಲಿ ಹಿಂದಿನ ಶೇ.70 ರಷ್ಟು ಸಂಸ್ಥೆಗಳು ನಷ್ಟ ಅನುಭವಿಸಿದೆ. ಮುಂದುವರಿದಂತೆ ಮನುಷ್ಯನ ಪ್ರತಿಯೊಂದು ಕೆಲಸಗಳು ಸೆನ್ಸಾರ್ ಮೂಲಕ ನಡೆಯುವ ಯಂತ್ರಗಳು ತಯಾರಾಗಬಹುದು. ಟೆಸ್ಲಾ ಇಲೆಕ್ಟ್ರಾನಿಕ್ ಕಾರುಗಳು ಸೆನ್ಸಾರ್ ಮೂಲಕ ಕಾರ್ಯಾಚರಿಸಲಿದೆ. ಚಾಲಕನ ಪ್ರತಿಯೊಂದು ಲೋಪಗಳು ಸೆನ್ಸಾರ್ ಮೂಲಕ ಪತ್ತೆಹಚ್ಚುವಿಕೆ, ದಿನಕ್ಕೆ ಅನುಗುಣವಾಗಿ ಸೆನ್ಸಾರ್ ನೀಡಿದ ಮಾಹಿತಿಯ ಅನುಸಾರ ಇನ್ಶುರೆನ್ಸ್ ಪಾವತಿಯಾಗುವ ತಂತ್ರಜ್ಞಾನ ಮುಂದುವರಿಯಲಿದೆ ಎಂದರು. ನಿಟ್ಟೆ ವಿವಿ ಸಹ ಕುಲಾಧಿಪತಿ ವಿಶಾಲ್ ಹೆಗ್ಡೆ ಮಾತನಾಡಿ ವಿದ್ಯಾರ್ಥಿಗಳು ವೈಯಕ್ತಿಕವಾಗಿ ಒಂಟಿಗಳಾಗಿದ್ದರೂ ಕಾಲೇಜು ವಿದ್ಯಾರ್ಥಿ ಸಂಘದ ಮೂಲಕ ಎಲ್ಲರೊಂದಿಗೆ ಬೆರೆಯುತ್ತಾ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಗೆಡಹಲು ಸಾಧ್ಯವಾಗುವುದಲ್ಲದೆ ಭವಿಷ್ಯದ ಉಜ್ವಲ ಬದುಕಿಗೆ ಸಂಘ ನೆರವಾಗಲಿದೆ. ಹಾಗೆಯೇ ವೈದ್ಯರು ತಮ್ಮ ವೈಯಕ್ತಿಕ ಆರೋಗ್ಯ ಚೆನ್ನಾಗಿಟ್ಟುಕೊಳ್ಳುವ ಮೂಲಕ ಇತರರ ಆರೋಗ್ಯವನ್ನು ಕಾಪಾಡುವ ಕಾಯಕದಲ್ಲಿ ಇಳಿಯಬೇಕಿದೆ ಎಂದರು.
ಇದೇ ಸಂದರ್ಭ ನಂದನ ಮುರಲೀಧರ್ ಸಂಪಾದಕತ್ವದ ಕಾಲೇಜು ಸ್ಮರಣ ಸಂಚಿಕೆ ” ಕ್ಯೂರ್ಯೋ” ಬಿಡುಗಡೆಗೊಳಿಸಲಾಯಿತು.
ನಿಟ್ಟೆ ವಿವಿ ಸಹ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ, ವಿದ್ಯಾರ್ಥಿ ಸಂಘ ಸಿಬ್ಬಂದಿ ಸಲಹೆಗಾರ ಡಾ. ಸಿದ್ಧಾರ್ಥ ಶೆಟ್ಟಿ, ನಿಟ್ಟೆ ವಿವಿ ಕುಲಸಚಿವೆ ಪ್ರೊ. ಅಲ್ಕಾ ಕುಲಕರ್ಣಿ, ಕ್ಷೇಮ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ್ ಹೀರೇಮಠ, ಡಾ. ಪ್ರಸಾದ್ ಶೆಟ್ಟಿ, ಡಾ. ಸಮುಲತಾ ಶೆಟ್ಟಿ ಉಪಸ್ಥಿತರಿದ್ದರು. .
ಕ್ಷೇಮ ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ ಶೈಕ್ಷಣಿಕ ಸಾಧಕರ ಪ್ರಶಸ್ತಿ ಪಟ್ಟಿ ವಾಚಿಸಿದರು. ನಿಟ್ಟೆ ವಿವಿ ಕ್ರೀಡಾ ಮರಲೀಕೃಷ್ಣ ಕ್ರೀಡಾ ವಿಜೇತರ ಹೆಸರು ವಾಚಿಸಿದರು. ಕ್ಷೇಮ ಡೀನ್ ಡಾ. ಪಿ.ಎಸ್. ಪ್ರಕಾಶ್ ಸ್ವಾಗತಿಸಿದರು. ಕ್ಷೇಮ ವೈಸ್ ಡೀನ್ ಡಾ. ಅಮೃತ ಮಿರಾಜ್ಕರ್ ವಾರ್ಷಿಕ ವರದಿ ಮಂಡಿಸಿದರು. ಮಾಜಿ ಅಧ್ಯಕ್ಷೆ ಇಂಧೂ ಕುರುಪ್ ಸಂಘದ ಕುರಿತಾಗಿ ಸವಿನೆನಪು ಹಂಚಿಕೊಂಡರು. ನೂತನ ಸಾಲಿನ ಸಂಘದ ಪದಗ್ರಹಣ ನಡೆಯಿತು. ಶಿಶಿರ್ ದರ್ಭ ಹಾಗೂ ಪೂಜಾ ಸಿಂಗ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷೆ ಟಿಯಾ ಆವ್ಯನ್ ಮೈಕಲ್ ವಂದಿಸಿದರು.


