UN NETWORKS
ಉಳ್ಳಾಲ: ಸಮುದ್ರ ತೀರದಿಂದ ಜೆಸಿಬಿ ಮೂಲಕ ಅಗೆದು ರೆಸಾರ್ಟ್ ಸುತ್ತಲೂ ದಾಸ್ತಾನಿರಿಸಿರುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಳ್ಳಾಲ ಸಮ್ಮರ್ ಸ್ಯಾಂಡ್ ಸಮೀಪವಿರುವ ಗಿಲ್ಟೆಕ್ ಹೆಸರಿನಲ್ಲಿ ನೋಂದಾವಣೆಯಲ್ಲಿರುವ ರೆಸಾರ್ಟ್ನಲ್ಲಿ ಅಕ್ರಮ ಮರಳುಗಾರಿಕೆ ನಡೆದಿದೆ. ಮದುವೆ ಸಮಾರಂಭದ ನಿಮಿತ್ತ ಎಕರೆಯಷ್ಟು ಸ್ಥಳದಲ್ಲಿರುವ ರೆಸಾರ್ಟ್ನ ನವೀಕರಣ ಕಾಮಗಾರಿ ನಡೆಯುತ್ತಿದೆ. ರೆಸಾರ್ಟ್ ಸುತ್ತಲೂ ಇಂಟರ್ ಲಾಕ್ ಅಳವಡಿಸುವ ಸಲುವಾಗಿ ಸಮುದ್ರ ತೀರದ ಮರಳನ್ನು ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಿಗ್ಗೆಯಾಗುಷ್ಟರಲ್ಲಿ ಜೆಸಿಬಿ ಮೂಲಕ ಅಗೆದು ರೆಸಾರ್ಟ್ ಹಿಂಭಾಗದಲ್ಲಿ ಹಲವು ದಿಬ್ಬಗಳಾಗಿ ಶೇಖರಿಸಿಡಲಾಗಿತ್ತು. ಇದನ್ನು ಕಂಡ ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸಿ ಕಾಮಗಾರಿ ನಿರ್ವಹಿಸುತ್ತಿರುವ ಜೆಸಿಬಿ ಸಿಬ್ಬಂದಿಯನ್ನು ತಡೆದು, ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಮರಳು ತೆಗೆಯುವುದನ್ನು ಸ್ಥಗಿತಗೊಳಿಸಿದ್ದಾರೆ.
ಮರಳು ತೆಗೆದಲ್ಲಿ ಹೆಚ್ಚಾಗುವುದು ಕಡಲ್ಕೊರೆತ!
ಸದ್ಯ ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಕಡಲಿಗೆ ಮರಳಿನ ಗೋಣಿ ಮತ್ತು ಕಲ್ಲುಗಳನ್ನ ಹಾಕಿ ಕೊರೆತವನ್ನು ನಿಯಂತ್ರಣಕ್ಕೆ ತರುವ ಪ್ರಯತ್ನಗಳು ನಡೆಯುತ್ತಿದೆ ಇದೇ ಸಮುದ್ರ ತೀರದ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುವ ಮೂಲಕ ಕಡಲ್ಕೊರೆತ ಹೆಚ್ಚಳವಾಗಲು ರೆಸಾರ್ಟ್ ಮಾಲಕರು ಕಾರಣರಾಗಿದ್ದಾರೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಈಗಾಗಲೇ ಲೋಡುಗಟ್ಟಲೇ ಮರಳನ್ನು ತೆಗೆದು ಸಾಗಿಸಲಾಗಿದ್ದು, ಸಮುದ್ರ ತೀರದಲ್ಲಿ ಮರಳು ಖಾಲಿಯಾಗಿ ಹೊಂಡ ಬಿದ್ದಿದೆ. ಇದರಿಂದ ಕಡಲ್ಕೊರೆತ ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಹೀಗಾಗಿ ತಕ್ಷಣ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಜೆಡಿಎಸ್ ಮುಖಂಡ, ಪರಿಷತ್ ಸದಸ್ಯರಿಗೆ ಸೇರಿದ ರೆಸಾರ್ಟ್ ಇದಾಗಿದೆ ಅನ್ನುವ ಆರೋಪವಿದ್ದರೂ, ಈಗಲೂ ದಾಖಲೆಗಳಲ್ಲಿ ಶಾಗಿಲ್ ಸಂಸ್ಥೆಯ ಗಿಲ್ಟೆಕ್ ಅನ್ನುವ ಸಂಸ್ಥೆ ಹೆಸರಲ್ಲಿ ನೋಂದಾವಣಿಯಲ್ಲಿದೆ. ಆದರೆ ಸ್ಥಳದಲ್ಲಿ ಮರಳು ಅಗೆಯುವ ಕಾಮಗಾರಿಯಲ್ಲಿ ಅದೇ ಜೆಡಿಎಸ್ ಮುಖಂಡರಿಗೆ ಸೇರಿದ ಫಿಝಾ ಡೆವಲಪ್ಪರ್ಸ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಪ್ರೈ.ಲಿ ಸಂಸ್ಥೆಗೆ ಸೇರಿದ ಜೆಸಿಬಿಗಳು ಕಾಮಗಾರಿ ನಡೆಸಿದೆ. ಇದು ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ. ಉಳ್ಳಾಲ ಪೊಲೀಸರು ಸ್ಥಳೀಯರ ದೂರು ಸ್ವೀಕರಿಸಿದ್ದಾರೆ. ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಇದರ ವಿರುದ್ಧ ಕ್ರಮಕೈಗೊಳ್ಳುವರೇ ಅನ್ನುವುದು ಕಾದು ನೋಡಬೇಕಾಗಿದೆ.


