UN NETWORKS
ಮಂಜನಾಡಿ : 2004ರಲ್ಲಿ25ಮಕ್ಕಳಿಂದ ಆರಂಭಗೊಂಡ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸಂಸ್ಥೆಯಲ್ಲಿಇದೀಗ 3500 ಅನಾಥ ಮಕ್ಕಳಿದ್ದಾರೆ. ನಿಜಕ್ಕೂ ರಾಜ್ಯದ ಮಟ್ಟಿಗೆ ಇದು ದೊಡ್ಡ ಸಾಧನೆ. ಸಂಸ್ಥೆಯ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಅವರು ಚಿಂತನೆ ಹೊಂದಿದ್ದು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಹಾಗಾಗಿ ಒಳ್ಳೆಯ ಮನಸ್ಸಿನಿಂದ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡರೆ ರಾಜ್ಯದಲ್ಲಿಅನಾಥ ಮಕ್ಕಳು ಇರಲು ಸಾಧ್ಯವಿಲ್ಲ ಎಂದು ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಮಂಜನಾಡಿಯ ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಬೆಳ್ಳಿಹಬ್ಬ ಆಚರಣೆಯ ಪ್ರಯುಕ್ತ ಸಂಸ್ಥೆಗೆ ಗುರುವಾರ ಭೇಟಿ ನೀಡಿ, ನೂತನವಾಗಿ ನಿರ್ಮಾಣವಾಗಲಿರುವ ಅನಾಥಾಲಯ ಕಟ್ಟಡಕ್ಕೆ ಶಿಲಾನ್ಯಾಸಗೈದು ಮಾತನಾಡಿದ ಅವರು ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮೂಲಕ ಅದೆಷ್ಟೋ ಅನಾಥ ಮಕ್ಕಳ ಬದುಕು ಹಸನಾಗಿದೆ. ನಾನೀಗ ರಾಜ್ಯದ ಮಂತ್ರಿ ಆಗಿದ್ದೇನೆ. ಅದಕ್ಕೂ ಮುಂಚೆ ನಾನು ಒಬ್ಬ ಸಾಮಾನ್ಯ ಮನುಷ್ಯ, ಸಾಮಾನ್ಯ ಮುಸ್ಲಿಂ. ಈ ಸಂಸ್ಥೆ ವಕ್ಪ್ ಬೋರ್ಡ್ ನಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಇದಕ್ಕೆ ಸರಕಾರದಿಂದ ಕೊಡುವಂತಹ ಕಾನೂನು ರೀತಿಯ ಎಲ್ಲಅನುದಾನ ಕೊಡಬಹುದು. ಇಲ್ಲದಿದ್ದರೆ ನನ್ನ ವತಿಯಿಂದ ಸಹಾಯ ಮಾಡುತ್ತೇನೆ ಎಂದರು.
ನಮ್ಮ ಊರಿನ ಮಸೀದಿಯ ಧಾರ್ಮಿಕ ಗುರುಗಳ ಹಜ್ ಯಾತ್ರೆ ಕೈಗೊಳ್ಳುವ ಬಹುಕಾಲದ ಮಹದಾಸೆ ಈಡೇರಿಸುತ್ತಾ ಅಂದಿನಿಂದ ಪ್ರತಿ ವರ್ಷ ಕನಿಷ್ಠ ಇಪ್ಪತ್ತೈದು ಮಂದಿ ಧಾರ್ಮಿಕ ಗುರುಗಳನ್ನು ನನ್ನದೇ ಖರ್ಚಿನಲ್ಲಿ ಹಜ್ ಯಾತ್ರೆಗೆ ಕಳುಹಿಸುತ್ತಿದ್ದೇನೆ. ನಾನು ಹಳ್ಳಿಯಿಂದ ಬಂದವನು. ಧಾರ್ಮಿಕ ಗುರುಗಳನ್ನು ಗುರುತಿಸಿ, ಅದರಂತೆ ಕಳೆದ ಕೆಲವು ವರ್ಷಗಳಿಂದ 50ಮಂದಿಯನ್ನು ರಾಜ್ಯದಿಂದ ಕಳುಹಿಸುತ್ತಿದ್ದೇನೆ. ಹಾಗಾಗಿ ಈ ವರ್ಷ ಅಲ್ ಮದೀನಾ ಸಂಸ್ಥೆಯ ಹತ್ತು ಮಂದಿ ಧಾರ್ಮಿಕ ಗುರುಗಳನ್ನು ಹಜ್ಗೆ ಕಳುಹಿಸುತ್ತೇನೆ. ಅದಕ್ಕೆ ನನಗೆ ಅರ್ಜಿ ಹಾಕುವುದಷ್ಟೆ ನಿಮ್ಮ ಕೆಲಸ ಎಂದು ನುಡಿದರು.
ಲಾಭ ಇಲ್ಲದೆ ಯಾರೂ ಕೆಲಸ ಮಾಡೊಲ್ಲ:
ಯಾರೂ ಕೂಡಾ ಲಾಭ ಇಲ್ಲದೆ ಕೋಟ್ಯಂತರ ರೂ. ದಾನ ಸೇವೆ ಮಾಡೋದಿಲ್ಲ. ನಾನು ಕೂಡಾ ಲಾಭದ ದೃಷ್ಟಿಯಿಂದಲೇ ಕೆಲಸ ಮಾಡೋದು. ಅದರ ಭಾಗವಾಗಿ ಹೆಣ್ಣುಮಕ್ಕಳ ಮದುವೆ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ, ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಧನ, ಧಾರ್ಮಿಕ ಗುರುಗಳನ್ನು ಹಜ್ಗೆ ಕಳುಹಿಸುವ ಕೆಲಸ ಮಾಡುತ್ತಿದ್ದೇನೆ. ಆದರೆ ನನ್ ಲಾಭದ ದೃಷ್ಟಿ ಹೇಗೆ ಅಂದ್ರೆ ಇಹಲೋಕದಲ್ಲಿ ಎಲ್ಲ ಕಡೆಯಿಂದಲೂ ನಾನುಯಶಸ್ವಿಯಾಗಿದ್ದೇನೆ. ನನಗೆ ಪರಲೋಕದ ಯಶಸ್ಸು ಮಾತ್ರ ಬೇಕಿದೆ. ಅದೊಂದೇ ಲಭಿಸಬೇಕೆಂಬ ಲಾಭದ ಚಿತ್ತ ನನ್ನದು, ಆ ಆಶೆಯಿಂದಷ್ಟೆ ನಾನು ಸೇವೆ ಮಾಡೋದು ಎಂದು ನುಡಿದರು.
ಜಮೀರ್ ಅಹ್ಮದ್ ಖಾನ್ಗೆ ಯಾವ ಅಧಿಕಾರದ ಆಸೆ ಇಲ್ಲ. ನಾನು ಯಾವತ್ತಿಗೂ ನಿಮ್ಮ ಜೊತೆ ಇರ್ತೇನೆ. ನಮ್ಮ ಸಮಾಜ ತಲೆ ಎತ್ತಿ ನಡೆಯುವಂತಹ ಕೆಲಸ ಮಾಡುತ್ತೇನೆ. ತಲೆ ತಗ್ಗಿಸುವ ಕೆಲಸ ಎಂದೂ ಮಾಡೊಲ್ಲ. 2006ರಲ್ಲಿಕುಮಾರಸ್ವಾಮಿ ಸರಕಾರದಲ್ಲಿನಾನು ಮಂತ್ರಿಯಾಗಿದ್ದೆ. ಕುಮಾರಸ್ವಾಮಿ ಹಿಂದೊಮ್ಮೆಬಕ್ರಿದ್ ಗೆ ಬರುವ ಭರವಸೆ ಕೊಟ್ಟದ್ದು ಮನೆಯಲ್ಲಿದ್ದರೂ ಬರಲಿಲ್ಲ. ನಮ್ಮಸಮಾಜಕ್ಕೆ ಅವಮಾನ ಮಾಡಿದರು. ಮಾತು ತಪ್ಪಿದ ಕಾರಣ ನನ್ನ ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಟ್ಟು ಹೊರ ಬಂದವ ನಾನು ಎಂದರು.
ನಾನು ಪರಲೋಕ ಯಶಸ್ಸಿಗಾಗಿಯೇ ಶ್ರಮಿಸುವುದು. ಯಾರೂ ಜಮೀರ್ ಅಹ್ಮದ್ಗೆ ಸಂಪತ್ತು, ಆಯಸ್ಸು, ಆರೋಗ್ಯ, ರಾಜಕೀಯದಲ್ಲಿ ದೊಡ್ಡ ಸ್ಥಾನ ಅಧಿಕಾರ ಕೇಳಬೇಡಿ. ಅದ್ಯಾವುದು ಶಾಶ್ವತವಲ್ಲ. ಅಲ್ ಮದೀನಾ ಜೊತೆಗೆ ನಾನು ಒಬ್ಬ ಸದಸ್ಯ ಎಂದು ತಿಳಿದುಕೊಳ್ಳಿ ಆಶಿಸಿದರು.
ಬಳಿಕ ಕಳೆದ ಸಾಲಿನ ಎಸ್ಎಸ್ಎಲ್ಸಿಯಲ್ಲಿಅತ್ಯುತ್ತಮ ಅಂಕ ಗಳಿಸಿದ ಸಂಸ್ಥೆಯ ಎಂಟು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ತಲಾ 10ಸಾವಿರ ರೂ. ಪ್ರೋತ್ಸಾಹ ಧನ ನೀಡಿದರು.ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ನ ಅಧ್ಯಕ್ಷ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್, ಕಣಚೂರು ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ವಕ್ಪ್ ಜಿಲ್ಲಾಧ್ಯಕ್ಷ ಯು.ಕೆ. ಮೋನು, ಯು.ಟಿ. ಫರೀದ್ ಫೌಂಡೇಶನ್ ಚೇರ್ ಮೆನ್ ಡಾ. ಯು.ಟಿ. ಇಫ್ತಿಕಾರ್ ಅಲಿ, ಅಲ್ಪಸಂಖ್ಯಾತ ಜಿಲ್ಲಾ ಅಧಿಕಾರಿ ಉಸ್ಮಾನ್, ಸಂಸ್ಥೆಯ ಮೆನೇಜರ್ ಅಬ್ದುಲ್ ಖಾದರ್ ಸಖಾಫಿ, ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಮಂಜನಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಅಸೈ, ಸದಸ್ಯ ಕುಂಞ ಬಾವ ಕಲ್ಕಟ್ಟ, ಉದ್ಯಮಿ ಶೌಕತ್ ದೇರಳಕಟ್ಟೆ, ವಕ್ಪ್ ಸಲಹಾ ಸಮಿತಿ ಸದಸ್ಯ ಅಬೂಬಕ್ಕರ್ ಸಜಿಪ, ಅಲ್ ಮದೀನಾ ಪ್ರಾಂಶುಪಾಲ ಮುನೀರ್ ಕಾಮಿಲ್ ಸಖಾಫಿ, ಕಾಂಗ್ರೆಸ್ ಕಾರ್ಮಿಕ ಘಟಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮೀರ್ ತುಂಬೆ, ಅಲ್ ಮದೀನಾ ಮಲಾಝ್ ಘಟಕದ ಗೌರವ ಅಧ್ಯಕ್ಷ ಫಾರೂಕ್ ಅಬ್ಬಾಸ್ ಹಾಜಿ ಉಳ್ಳಾಲ, ಯು.ಎಸ್. ಅಬೂಬಕ್ಕರ್ ಹಾಜಿ ಉಳ್ಳಾಲ ಉಪಸ್ಥಿತರಿದ್ದರು.
ಅಲ್ ಮದೀನಾ ನ್ಯೂಬಿ ಸ್ಕೂಲ್ ನಿರ್ದೇಶಕ ಮನ್ಸೂರ್ ಇಮಾಮಿ ಸ್ವಾಗತಿಸಿದರು. ಲೆಕ್ಕಪರಿಶೋಧಕ ಅಬ್ದುಲ್ ರಝಾಕ್ ಮಾಸ್ಟರ್ ವಂದಿಸಿದರು.


