UN NETWORKS
ದೇರಳಕಟ್ಟೆ: ನೂತನ ಫುಟ್ಬಾಲ್ ಕ್ಲಬ್‍ಗಳು ಆರಂಭವಾಗುವುದರಿಂದ ಆಟಗಾರರು ಜೊತೆಗೆ ಫುಟ್ಬಾಲ್ ಮತ್ತಷ್ಟು ವಿಜೃಂಭಿಸಲಿದೆ . ಸದ್ಯ ಹೆಚ್ಚಾಗಿ ಮಹಿಳೆಯರು ಫುಟ್ಬಾಲ್ ಆಟದಲ್ಲಿ ಉತ್ಸಾಹ ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿಯೂ ಮಹಿಳಾ ಕ್ರೀಡಾಳುಗಳು ಕ್ಲಬ್ ಗಳಲ್ಲಿ ನೋಂದಾಯಿಸುವ ಮೂಲಕ ತಂಡಗಳನ್ನು ಕಟ್ಟಿಕೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯ ಫುಟ್ಬಾಲ್ ಎಸೋಸಿಯೇಷನ್ ಅಧ್ಯಕ್ಷ, ಶಾಂತಿನಗರ ಶಾಸಕ ಎನ್. ಎ. ಹ್ಯಾರಿಸ್ ಹೇಳಿದರು.
ದೇರಳಕಟ್ಟೆಯ ಯೇನೆಪೊಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಂಗಳೂರು ಫುಟ್ಬಾಲ್ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಯುವ ಜನತೆ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಅತಿ ಮುಖ್ಯ. ಈ ದೇಶಕ್ಕೆ ಉತ್ತಮ ಆರೋಗ್ಯಕರ ವಾತವಾವರಣ ಮೂಡಿಸಬೇಕಾದ ಜವಾಬ್ದಾರಿ ಯುವಜನತೆಯ ಮುಂದಿದೆ. ಹೆಚ್ಚಿನ ಪರಿಕರಗಳ ಅವಶ್ಯಕತೆಗಳು ಇಲ್ಲದ ಕೇವಲ ಮೈದಾನ ಹಾಗೂ ಒಂದು ಚೆಂಡಿನ ಆಟವಾಗಿರುವ ಫುಟ್ಬಾಲ್ ಆಟದಲ್ಲಿ ಆಟಗಾರರಿಗೆ ಮಂಗಳೂರು ಫುಟ್ಬಾಲ್ ಕ್ಲಬ್ ಒಂದು ಉತ್ತಮ ವೇದಿಕೆಯಾಗಲಿದೆ ಎಂದು ನುಡಿದರು. ಕೆಲವೇ ಭಾಗಗಳಿಗೆ ಸೀಮಿತವಾಗಿದ್ದ ಫುಟ್ಬಾಲ್ ಈಗ ಕ್ರಿಕೆಟ್‍ನಂತೆ ಮಿಂಚುತ್ತಿದೆ. ಯೇನೆಪೊಯ ವಿವಿ ಯುವ ಆಟಗಾರರಿಗೆ ಅವಕಾಶ ಕೊಡುತ್ತಾ ಬಂದಿದ್ದು ಆಟಗಾರರು ಯಾವುದಾದರೂ ಕ್ಲಬ್‍ಗೆ ಸೇರಬೇಕು. ಮುಖ್ಯವಾಗಿ ಫುಟ್ಬಾಲ್‍ನಲ್ಲಿ ಒಂದೂವರೆ ಗಂಟೆಯ ಅವಧಿಯಲ್ಲಿ ಫಲಿತಾಂಶ ತಿಳಿಯಲು ಸಾಧ್ಯ. ಆದರೆ ಟೆಸ್ಟ್ ಕ್ರಿಕೆಟ್‍ನಲ್ಲಿ ಐದು ದಿನಗಳು ಬೇಕು. ಆ ನೆಲೆಯಲ್ಲಿ ಸಂಪೂರ್ಣ ವ್ಯಾಯಾಮ ಹಾಗೂ ಉತ್ತಮ ಆರೋಗ್ಯಕ್ಕಾಗಿ ಫುಟ್ಬಾಲ್ ಸಹಕಾರಿ ಎಂದರು.
ಯೇನೆಪೊಯ ಗ್ರೂಪ್ ಹಣಕಾಸು ನಿರ್ದೇಶಕ, ಫುಟ್ಬಾಲ್ ಕ್ಲಬ್ ಮಂಗಳೂರು ಅಧ್ಯಕ್ಷ ಫರ್ಹಾದ್ ಯೇನೆಪೊಯ ಮಾತನಾಡಿ ಯೇನೆಪೊಯ ಸಂಸ್ಥೆ ಔದ್ಯಮಿಕವಾಗಿ ಮಾತ್ರವಲ್ಲದೆ ಸಮಾಜಮುಖಿಯಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿಉತ್ತಮ ಹೆಸರು ಸಂಪಾದಿಸಿದೆ. ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ಕೊಡುತ್ತಾ ಬಂದಿದೆ. ವಿವಿಯ ಫುಟ್ಬಾಲ್ ತಂಡ ಅತ್ಯುತ್ತಮವಾಗಿದೆ. ಮಂಗಳೂರು ಫುಟ್ಬಾಲ್ ಕ್ಲಬ್ ಆರಂಭದ ಬಳಿಕ ಫುಟ್ಬಾಲ್ ತರಬೇತಿ ಪ್ರಕ್ರಿಯೆ ಆರಂಭವಾಗಿದೆ. ಆ ಮೂಲಕ ಆಟಗಾರನೊಬ್ಬ ಸ್ಥಳೀಯ ಕ್ಲಬ್, ವಿಶ್ವವಿದ್ಯಾಲಯ, ಜಿಲ್ಲೆ, ರಾಜ್ಯ, ದೇಶ ಮಟ್ಟದಲ್ಲಿಮಿಂಚುವುದರ ಜೊತೆಗೆ 2030ರೊಳಗೆ ಫಿಫಾ ವಿಶ್ವಕಪ್ ಪಂದ್ಯದಲ್ಲಿಆಡುವ ಆಟಗಾರನೊಬ್ಬ ಯೇನೆಪೊಯ ವಿವಿಯ ವಿದ್ಯಾರ್ಥಿ ಆಗಿರಬೇಕು ಎಂಬ ಮಹದಾಸೆ ನಮ್ಮದಾಗಿದ್ದು ಅದಕ್ಕೆ ಬೇಕಾದ ಎಲ್ಲ ತರಬೇತಿ ಕೊಡಲಿದ್ದೇವೆ ಎಂದರು.
ಭಾರತೀಯ ಫುಟ್ಬಾಲ್ ತಂಡದ ಮಾಜಿ ಕಪ್ತಾನ ಐ.ಎಂ. ವಿಜಯನ್ ಮಾತನಾಡಿ ಯೇನೆಪೊಯ ವಿವಿಯ ಫುಟ್ಬಾಲ್ ತಂಡಕ್ಕೆ ಒಳ್ಳೆಯ ಹೆಸರು ಇದೆ. ಭವಿಷ್ಯವೂ ಇದೆ. ಫುಟ್ಬಾಲ್ ಆಟಕ್ಕೆ ಯೇನೆಪೊಯ ವಿವಿ ಆದ್ಯತೆ ನೀಡದ್ದು ಅತ್ಯುತ್ತಮ ಹುಲ್ಲುಹಾಸಿನಿಂದ ಕೂಡಿದ ಕ್ರೀಡಾಂಗಣವಿದ್ದು ಆಟಗಾರರ ಪಾಲಿಗೆ ಸಿಕ್ಕಿದಂತಹ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.ಯೇನೆಪೊಯ ವಿವಿ ಸಹ ಕುಲಸಚಿವ ಪ್ರೊ. ಸಿ. ವಿ. ರಘುವೀರ್ ಹಾಗೂ ಕುಲಸಚಿವ ಗಂಗಾಧರ್ ಸೋಮಯಾಜಿ ಉಪಸ್ಥಿತರಿದ್ದರು. ಮಾಳವಿಕಾ ಆರ್.ಜೆ. ಸ್ವಾಗತಿಸಿದರು. ಫರ್ಹಾ ಮಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ರಘುವರ್ಧನ್ ವಂದಿಸಿದರು.


