UN NETWORKS
ದೇರಳಕಟ್ಟೆ: ಆರೋಗ್ಯ ಹಾಗೂ ಸಾಮಾಜಿಕ ಭದ್ರತೆ ದೃಷ್ಟಿಯಿಂದ ಭಾರತದಲ್ಲಿ 2020-30ರಲ್ಲಿ ಬಹಳಷ್ಟು ಪ್ರಗತಿ ಕಾಣಲಿದ್ದು ರೇಡಿಯೇಶನ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಕಾಣಲು ಸಾಧ್ಯ ಎಂದು ಇಂಡಿಯನ್ ಸೊಸೈಟಿ ಫಾರ್ ರೇಡಿಯೇಶನ್ ಬಯೋಲಾಜಿ ಅಧ್ಯಕ್ಷೆ ಡಾ. ಮಧುಬಾಲ ಅಭಿಪ್ರಾಯಪಟ್ಟರು.
ನಿಟ್ಟೆ ವಿಶ್ವವಿದ್ಯಾಲಯದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಹಾಗೂ ಇಂಡಿಯನ್ ಸೊಸೈಟಿ ಫಾರ್ ರೇಡಿಯೇಶನ್ ಬಯೋಲಾಜಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ರೇಡಿಯೇಶನ್ ಬಯೋಲಾಜಿಯಲ್ಲಿನ ಪ್ರಗತಿ, ರೇಡಿಯೇಶನ್ ಥೆರಪಿ ಹಾಗೂ ಪ್ರತಿ ಮಾರ್ಗೋಪಾಯದ ಕುರಿತಾಗಿ ನಡೆದ ಅಂತರಾಷ್ಟೀಯ ಸಮ್ಮೇಳನವನ್ನು ಕ್ಷೇಮ ಆಡಿಟೋರಿಯಂನಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇಮದಲ್ಲಿರುವ ರೇಡಿಯೇಶನ್ ವಿಭಾಗ ಕರ್ನಾಟಕದಲ್ಲಿಯೇ ಅತಿ ಪ್ರಾಮುಖ್ಯತೆ ಪಡೆದ ವೈದ್ಯಕೀಯ ರಂಗದಲ್ಲಿ ರಾಜ್ಯದಲ್ಲಿಯೇ ಅತ್ಯಾಧುನಿಕ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಕ್ಯಾನ್ಸರ್ ಕುರಿತಾಗಿ ಬಹಳಷ್ಟು ಜಾಗೃತಿ ಕಾರ್ಯಗಾರಗಳು ನಡೆಯುತ್ತಿದ್ದು ಈ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ರೇಡಿಯನ್ ತಜ್ಞರು ಪಾಲ್ಗೊಂಡಿದ್ದು ರೇಡಿಯೇಶನ್ ಕ್ಷೇತ್ರದಲ್ಲಿನ ನೂತನ ಆವಿಷ್ಕಾರಗಳು, ಚಿಕಿತ್ಸೆ ಪ್ರತಿ ಮಾರ್ಗೋಪಾಯಗಳ ಕುರಿತಾಗಿ ನೂತನ ದೃಷ್ಟಿಕೋನ ಸೇರಿದಂತೆ ಬಹಳಷ್ಟು ವಿಷಯಗಳು ಸಮ್ಮೇಳನದಲ್ಲಿ ಯುವ ಸಂಶೋಧಕರಿಗೆ ಲಭ್ಯವಾಗಲಿದೆ ಎಂದು ನುಡಿದರು.
ಸಮ್ಮೇಳನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ನಿಟ್ಟೆ ವಿವಿ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಹುಟ್ಟಿಕೊಂಡ ನಿಟ್ಟೆ ಸಂಸ್ಥೆ ಅಂತರಾಷ್ಟ್ರೀಯವಾಗಿ ಗುರುತಿಸಿಕೊಂಡಿದೆ. ದೇಶದ ಎಂಟು ನೂರಕ್ಕೂ ಮಿಕ್ಕಿದ ವಿವಿಗಳಲ್ಲಿ ನಿಟ್ಟೆ ವಿವಿ 77ನೇ ರಾವ್ಯಂಕ್ ಹಾಗೂ ಎ ಗ್ರೇಡ್ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಾಗಿದ್ದು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಾ ಅತ್ಯುತ್ತಮ ಹೆಸರು ಸಂಪಾದಿಸಿದೆ ಎಂದರು.
ನವ ಮುಂಬಯಿಯ ಕ್ಯಾನ್ಸರ್ ಚಿಕಿತ್ಸೆ , ಸಂಶೋಧನೆ ಹಾಗೂ ಶಿಕ್ಷಣ ಕೇಂದ್ರದ ನಿರ್ದೇಶಕಿ ಡಾ. ಶುಭದಾ ಚಿಪ್ಲುಂಕರ್ ಮಾತನಾಡಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೇಡಿಯೇಶನ್ ಥೆರಪಿ ಪ್ರಮುಖವಾಗಿ ಕಾರ್ಯನಿರ್ವಹಿತ್ತದೆ.ಉತ್ತಮ ಪರಿಸರ, ಅಗತ್ಯ ಪರಿಕರಗಳನ್ನು ಹೊಂದಿರುವ ನಿಟ್ಟೆ ವಿವಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಇಂತಹ ಅವಕಾಶ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ರೇಡಿಯೇಶನ್ ಆಂಕೋಲಾಜಿ ಎಂಬುದು ಒಂದು ಅಂತರಶಿಕ್ಷಣ ಕ್ಷೇತ್ರವಾಗಿದ್ದು, ಇದು ರೋಗಿಯ ಆರೈಕೆ ಮತ್ತು ನಿರ್ವಹಣೆಯನ್ನು ಮುಂದುವರೆಸಲು ಭೌತಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ, ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ಶಿಕ್ಷಣ ಸಂಯೋಜಿಸುತ್ತದೆ. ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೇಡಿಯೊ ಥೆರಪಿ ಕಳೆದ ಕೆಲವು ವರ್ಷಗಳಿಂದ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ ಎಂದರು.
ಕ್ಷೇಮ ಡೀನ್, ಸಮ್ಮೇಳನ ಮುಖ್ಯಸ್ಥ ಪ್ರೊ. ಡಾ.ಪಿ. ಎಸ್. ಪ್ರಕಾಶ್, ಶೈಕ್ಷಣಿಕ ವೈಸ್ ಡೀನ್ ಡಾ. ಮಿರಾಜ್ಕರ್, ಸಮ್ಮೇಳನ ಸಂಚಾಲಕ ಡಾ. ಜಯರಾಮ ಶೆಟ್ಟಿ , ಮಂಗಳೂರಿನ ಕೆಎಂಸಿ ಪರಿವೀಕ್ಷಕ ಡಾ. ಕಮಲಾಕ್ಷ ಹಾಗೂ ನಿಟ್ಟೆ ವಿವಿ ಕುಲಸಚಿವೆ ಡಾ. ಅಲ್ಕಾ ಕುಲಕರ್ಣಿ ಉಪಸ್ಥಿತರಿದ್ದರು.
ಕ್ಷೇಮ ಆಡಳಿತ ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಶಿಲ್ಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಸಮ್ಮೇಳನ ಸಂಘಟನಾ ಕಾರ್ಯದರ್ಶಿ ಡಾ. ಸುಚೇತ ವಂದಿಸಿದರು.
ನಿಟ್ಟೆ ವಿಶ್ವವಿದ್ಯಾಲಯದ ಯುವ ಶಿಕ್ಷಣ ಸಂಸ್ಥೆಯಾಗಿದೆ. ನಿವೃತ್ತ ನ್ಯಾಯಾಧೀಶರಾಗಿದ್ದ ಕೆ.ಎಸ್.ಹೆಗ್ಡೆ ಯವರು ದೊಡ್ಡ ನಗರಗಳಲ್ಲಿ ವಾಸಿಸುವ ಸಾಮರ್ಥ್ಯವಿದ್ದರೂ ಸಾಮಾಜಿಕ ಕಳಕಳಿಯಿಂದ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದರು. ಅಂದಿನಗಿಡ ಇಂದು ಹೆಮ್ಮರವಾಗಿ ಬೆಳೆದಿದ್ದು ಪ್ರಸ್ತುತಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ಅಲಂಕರಿಸಿದೆ.
ಡಾ. ಸತೀಶ್ ಕುಮಾರ್ ಭಂಡಾರಿ
ಕುಲಪತಿ
ನಿಟ್ಟೆ ವಿಶ್ವವಿದ್ಯಾಲಯ


