UN NETWORKS
ಬಾಳೆಪುಣಿ: ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಅಗತ್ಯವಿರುವಲ್ಲಿ ಕೊಳವೆಬಾವಿ ನಿರ್ಮಿಸಲಾಗಿದ್ದು ಬಾಳೆಪುಣಿಯಲ್ಲಿ ಅತ್ಯಧಿಕ ಕೊಳವೆಬಾವಿಗಳಿವೆ, ಆದರೂ ನೀರಿನ ಸಮಸ್ಯೆ ನೀಗಿಲ್ಲ, ನೀರಿನ ಸಮಸ್ಯೆ ಪರಿಹಾರಕ್ಕೆ ಕ್ಷೇತ್ರ ಮಟ್ಟದಲ್ಲೇ ದೊಡ್ಡ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಬಾಳೆಪುಣಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಬಳಿಕ ನವಗ್ರಾಮ ಸೈಟ್‍ನಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೆಯೂ ಕ್ಷೇತ್ರದಲ್ಲಿ ಶಾಸಕರು, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಿದ್ದರೂ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿಲ್ಲ, ಇದೀಗ ಕಾಂಗ್ರೆಸ್ ಪ್ರತಿನಿಧಿಗಳು ಆಯ್ಕೆಯಾದ ಬಳಿಕ ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ, ಹೊಸ ರಸ್ತೆಗಳ ನಿರ್ಮಾಣ, ಕಾಂಕ್ರೀಟ್ ಕಾಮಗಾರಿ ನಡೆದಿದ್ದು, ಸಣ್ಣ ರಸ್ತೆಗಳು ಮಾತ್ರವೇ ಬಾಕಿಯಾಗಿವೆ. ಅವುಗಳನ್ನೂ ಶೀಘ್ರ ಅಭಿವೃದ್ಧಿಪಡಿಸಲಾಗುವುದು. ಮುಂದಿನ ದಿನಗಳಲ್ಲಿ ವಸತಿರಹಿತರಿಗೂ ಯೋಜನೆ ರೂಪಿಸಲಿದ್ದು, ಫಲಾನುಭವಿಗಳು ಪ್ರಯೋಜನಪಡೆಯಬೇಕು ಎಂದು ಹೇಳಿದರು.
ಪಡಿಕ್ಕಲ್‍ನಲ್ಲಿ 150 ಮನೆಗಳಿದ್ದು ಹಿಂದೆಯೂ ನೀರಿನ ಸಮಸ್ಯೆ ಪರಿಹಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ ಆರ್ಥಿಕವಾಗಿ ತೀರಾ ಹಿಂದುಳಿದಿರುವ, ಎಲ್ಲಾ ಧರ್ಮೀಯರು ವಾಸವಿರು ನವಗ್ರಾಮ ಸೈಟ್‍ನಲ್ಲಿ 50 ಸಾವಿರ ಲೀಟರ್ ಸಾಮಥ್ರ್ಯದ ನೀರಿನ ಟ್ಯಾಂಕ್ ನಿರ್ಮಿಸಲು ಶಂಕು ಸ್ಥಾಪನೆ ನಡೆಸಲಾಗಿದ್ದು ಕೆಲಸ ಶೀಘ್ರ ಮುಗಿಯಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕಾಜವ, ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷೆ ಜಯಲಕ್ಷ್ಮಿ ಹೆಗ್ಡೆ, ಸದಸ್ಯರಾದ ನಾಸೀರ್ ನಡುಪದವು, ಹನೀಫ್, ಶರೀಫ್ ಚೆಂಬೆತೋಟ, ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಪಜೀರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೀತಾರಾಮ ಶೆಟ್ಟಿ, ಸದಸ್ಯೆ ಫ್ಲೋರಿನ್, ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಸ್ತಫಾ ಮಲಾರ್ ಇನ್ನಿತರರು ಉಪಸ್ಥಿತರಿದ್ದರು.












