UN NETWORKS
ಕೋಟೆಕಾರ್: ಕೋಳಿ ಸಾಕುವುದರಿಂದ ಸ್ವಚ್ಛ ಪರಿಸರ ನಿರ್ಮಾಣ, ಹಲವು ರೋಗಳಿಂದ ದೂರವಿರಲು ಸಾಧ್ಯ, ಅದರಲ್ಲೂ ಗಿರಿರಾಜ ಕೋಳಿಗಳಿಂದ ಹೆಚ್ಚು ಮಾಂಸವೂ ದೊರಕುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅಭಿಪ್ರಾಯಪಟ್ಟರು. ಪಶುಪಾಲನಾ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಜಂಟಿ ಆಶ್ರಯದಲ್ಲಿ ಕೋಟೆಕಾರ್ ಪಶು ಆಸ್ಪತ್ರೆಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಕೋಳಿಗಳನ್ನು ವಿತರಿಸಿ ಮಾತನಾಡಿದರು.
ಜನರಿಂದ ಆರಿಸಲ್ಪಟ್ಟ ಜನಪ್ರತಿನಿಧಿಗಳು ತಮ್ಮ ಐದು ವರ್ಷದ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕಾಗಿದೆ, ಶೇ.75ರಷ್ಟು ಜನಪ್ರತಿನಿಧಿಗಳು ಕೆಲಸ ಮಾಡುತ್ತಿದ್ದರೂ ಫಲಾನುಭವಿಗಳು ಸಮರ್ಪಕ ದಾಖಲೆಗಳನ್ನು ನೀಡದ ಕಾರಣ ಯೋಜನೆಗಳನ್ನು ದೊರಕಿಸಲು ಸಾಧ್ಯವಾಗುತ್ತಿಲ್ಲ. ಇಂದು ಅಂತರ್ಜಾಲದ ಮುಖಾಂತರ ಸಂಬಂಧಪಟ್ಟ ಇಲಾಖೆಗಳಿಗೆ ದಾಖಲೆಗಳನ್ನು ಸಲ್ಲಿಸಬೇಕಿದ್ದು, ಅರ್ಹರಿಗೆ ಸರ್ಕಾರಿ ಸವಲತ್ತು ಸಿಗುವುದರಲ್ಲಿ ಸಂಶಯ ಬೇಡ ಎಂದು ಹೇಳಿದರು.
ಸೋಮೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಮಾತನಾಡಿ, ಹಿಂದಿನಿಂದಲೂ ಗಿರಿರಾಜ ಕೋಳಿಗಳಿದ್ದರೂ ಅದನ್ನು ಸಾಕುವ ರೀತಿಯ ಬಗ್ಗೆ ಜನರಲ್ಲಿ ಅರಿವಿನ ಕೊರತೆಯಿದೆ. ಇದೀಗ ಇಲಾಖೆಯಿಂದ ದೊರಕಿರುವ ಕೋಳಿಗಳನ್ನು ಉತ್ತಮ ರೀತಿಯಲ್ಲಿ ಸಾಕಿದರೆ ಮುಂದಿನ ದಿನಗಳಲ್ಲಿ ಇಲಾಖೆ ಬೇಡಿಕೆಯನ್ನಾಧರಿಸಿ ಇನ್ನಷ್ಟು ಫಲಾನುಭವಿಗಳಿಗೆ ಕೋಳಿಗಳನ್ನು ವಿತರಿಸಬಹುದು ಎಂದು ತಿಳಿಸಿದರು.
ಪಶು ಪಾಲನಾ ಇಲಾಖೆಯ ನಿರೀಕ್ಷಕ ಡಾ.ಎಸ್.ನಾಗರಾಜ್ ಮಾತನಾಡಿ, ಕರ್ನಾಟಕದಲ್ಲಿ ಮಾತ್ರವೇ ಗಿರಿರಾಜ ಕೋಳಿಗಳಿದ್ದು, ಹೊರರಾಜ್ಯಗಳಿಂದ ಬೇಡಿಕೆ ಬರುತ್ತಿದೆ. ಇದನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಈ ವರ್ಷದಿಂದ ಬೇಡಿಕೆ ಸಲ್ಲಿಸುವ ಎಲ್ಲರಿಗೂ ಕೋಳಿಗಳನ್ನು ವಿತರಿಸುತ್ತಿದ್ದು, ಈ ವಿಷಯದಲ್ಲಿ ಜಿಲ್ಲಾ ಪಂಚಾಯಿತಿ ಉತ್ತಮವಾಗಿ ಸ್ಪಂದಿಸಿದೆ ಎಂದರು.
ತಾಲೂಕು ಪಂಚಾಯಿತಿ ಸದಸ್ಯ ರವಿಶಂಕರ್ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದರು. ಪಶುಪಾಲನಾ ಇಲಾಖೆಯ ನಿರೀಕ್ಷಕರಾದ ದೇವಾನಂದ ಜಾಲಗಿರಿ, ಚಂದ್ರಹಾಸ, ಅಣ್ಣಪ್ಪ ಅಂಬ್ಲಮೊಗರು ಉಪಸ್ಥಿತರಿದ್ದರು.ಡಾ.ರೇಖಾ ವಂದಿಸಿದರು.
`ಕೋಟೆಕಾರ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಸ್ಥರು ಕೋಳಿ ಸಾಕಾಣಿಕೆಯತ್ತ ಉತ್ಸಾಹಿತರಾಗಬೇಕು ಎನ್ನುವ ನೆಲೆಯಲ್ಲಿ ಸದಸ್ಯೆ ಧನಲಕ್ಷ್ಮಿ ಗಟ್ಟಿ ಅವರು ಸಾಕಷ್ಟು ಶ್ರಮ ವಹಿಸಿರುವುದು ಶ್ಲಾಘನೀಯ’
ರವಿಶಂಕರ್, ತಾಲೂಕು ಪಂಚಾಯಿತಿ ಸದಸ್ಯ


