UN NETWORKS
ಕೊಣಾಜೆ: ಶಿಕ್ಷಕರ ದಿನಾಚರಣೆಯಂದು ರಾಜ್ಯ ಸರಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡ ಕುರ್ನಾಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅಷ್ಪಾಕ್ ಅಹ್ಮದ್ ಮ್ಯಾಗೇರಿ ಅವರನ್ನು ಮುಡಿಪು ಕಾಲೇಜಿನಲ್ಲಿ ಶನಿವಾರ ಗೌರವಿಸಿ ಸನ್ಮಾನಿಸಲಾಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ ಅವರು, ಅಷ್ಪಾಕ್ ಅಹ್ಮದ್ ಮ್ಯಾಗೇರಿ ಅವರು ತಪ್ಪಿನ ಜೊತೆ ರಾಜಿ ಮಾಡಿಕೊಳ್ಳದೆ, ನಿಷ್ಪಕ್ಷಪಾತವಾಗಿ, ಶಿಸ್ತಿನ ಸಿಪಾಯಿಯಾಗಿ ಸೇವೆ ಸಲ್ಲಿಸುವುದರೊಂದಿಗೆ ಶ್ರೇಷ್ಠ ಶಿಕ್ಷಕನಾಗಿ ರಾಜ್ಯ ಸರಕಾರದಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಪ್ರತಿಯೊಂದಕ್ಕೂ ಲಾಭಿ ನಡೆಯುವುತ್ತಿರುವ ಇಂದಿನ ಕಾಲದಲ್ಲಿ ತನ್ನ ಅರ್ಹತೆಯ ಮೂಲಕವೇ ಮ್ಯಾಗೇರಿಯವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಅರಸಿಕೊಂಡು ಬಂದಿರುವುದು ಅವರ ಪ್ರಾಮಾಣಿಕತೆ ಮತ್ತು ಆದರ್ಶಕ್ಕೆ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದ ಕಾಲೇಜು ಆಡಳಿತ ಮಂಡಳಿಯ ಕೊಲ್ಲರಮಜಲು ಈಶ್ವರ ಭಟ್ ಅವರು, ನಾವು ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಯೋಗ ಮತ್ತು ಯೋಗ್ಯತೆ ಎರಡೂ ಬೇಕು. ಇವೆರಡೂ ಅಷ್ಪಾಕ್ ಅಹ್ಮದ್ ಮ್ಯಾಗೇರಿ ಅವರಿಗೆ ಇರುವ ಕಾರಣದಿಂದಲೇ ಅವರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸಿರುವ ಮ್ಯಾಗೇರಿವರು ಕುರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಮುಂದಿನ ವರ್ಷವೇ ನಿವೃತ್ತರಾಗಲಿದ್ದಾರೆ. ವಿದ್ಯಾರ್ಥಿಗಳನ್ನು ಹಾಗೂ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವ ಮನೋಭಾವ ಅವರದ್ದಾಗಿದ್ದು ಮುಂದೆಯೂ ಅವರ ಸೇವೆ ಸಮಾಜಕ್ಕೆ ಲಭಿಸುವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪುರಸ್ಕೃತ ಅಷ್ಪಾಕ್ ಅಹ್ಮದ್ ಮ್ಯಾಗೇರಿ ಅವರನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ, ಕಾಲೇಜು ಶಿಕ್ಷಕರ ವತಯಿಂದ, ವಿದ್ಯಾರ್ಥಿಗಳ ವತಿಯಿಂದ ಹಾಗೂ ನಾಗರಿಕರ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ಮಾಜಿ ಸದಸ್ಯ ಸಂತೋಷ್ ಕುಮಾರ್ ಬೋಳಿಯಾರ್, ತಾಲೂಕು ಪಂಚಾಯಿತಿ ಸದಸ್ಯ ನವೀನ್ ಪಾದಲ್ಪಾಡಿ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪ್ರಶಾಂತ್ ಕಾಜವ, ಉಮ್ಮರ್ ಪಜೀರು, ಶೀನ ಶೆಟ್ಟಿ, ಕೆ.ಎಚ್.ಮಹಮ್ಮದ್, ಅಂದು ಕುಂಞ, ಮೂಸೆ ಕುಂಞ, ಅಬೂಬಕ್ಕರ್, ನಾಸೀರ್ ನಡುಪದವು, ಸಿ.ಎಂ.ಶರೀಫ್ ಚೆಂಬೆತೋಟ, ನಿವೃತ್ತ ಶಿಕ್ಷಕರಾದ ಬಸವರಾಜ ಪಲ್ಲಕಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ರಾಘವೇಂದ್ರ ಬಿ.ಅವರು ಸ್ವಾಗತಿಸಿದರು. ಉಪನ್ಯಾಸಕಿ ಡಾ.ಲತಾ ಅಭಯಕುಮಾರ್ ಅವರು ವಂದಿಸಿದರು. ಉಪನ್ಯಾಸಕ ಅಂಬಾಪ್ರಸಾದ್ ಅವರು ಕಾರ್ಯಕ್ರಮ ನಿರೂಪಿಸಿದರು.


