UN NETWORKS
ನರಿಂಗಾನ :ವಾರ್ಡ್ ಸಭೆಗಳಲ್ಲಾದ ನಡಾವಳಿಯನ್ನು ಸಭೆಯಲ್ಲಿಗ್ರಾಮಸ್ಥರ ಮುಂದೆಯೇ ಓದಿ ಅಲ್ಲೇ ಸಹಿ ಹಾಕಿಸಬೇಕು ಎಂಬ ನಿಯಮವನ್ನು ಪಿಡಿಒ ಸಮರ್ಪಕವಾಗಿ ಕಾರ್ಯಗತಗೊಳಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು ಚರ್ಚಿಸಿ ಕೊನೆಗೂ ಯಶಸ್ವಿಯಾದರು. ಅಷ್ಟಕ್ಕೂ ಅದಕ್ಕೆ ತೆಗೆದುಕೊಂಡ ಸಮಯ ಬರೋಬ್ಬರಿ ಎರಡು ಗಂಟೆ. ಹೌದು ಇದು ನರಿಂಗಾನ ಗ್ರಾಮಸಭೆಯಲ್ಲಿ ಹಲವು ವರ್ಷಗಳ ಬಳಿಕ ಸುದೀರ್ಘ ಚರ್ಚಾ ವಿಷಯದ ಫಲಶ್ರುತಿ.
ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯಿತಿಗೆ ಮೊಂಟೆಪದವು ಸರಕಾರಿ ಪ್ರೌಢಶಾಲೆಯಲ್ಲಿಮಂಗಳವಾರ ನಡೆದ 2018-19ರ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿವಾರ್ಡ್ ಸಭೆಗಳಲ್ಲಾದ ಚರ್ಚೆ ಬಳಿಕ ತೆಗೆದುಕೊಂಡ ನಿರ್ಣಯಗಳನ್ನು ಅಲ್ಲೇ ನಡಾವಳಿ ಮಂಡಿಸದೆ ನಿರ್ಲಕ್ಷ್ಯ ತೋರುವವರ ವಿರುದ್ಧ ಗ್ರಾಮಸ್ಥರು ಬರೋಬ್ಬರಿ ಎರಡು ಗಂಟೆಗಳ ಕಾಲ ಚರ್ಚಿಸಿ ತೆಗೆದುಕೊಂಡ ನಿರ್ಣಯಗಳನ್ನು ಸ್ವತಃ ಪಿಡಿಒ ಅವರಿಂದಲೇ ಓದಿಸಿ ಹಳೆಯ ಪದ್ಧತಿಗೆ ತಿಲಾಂಜಲಿ ಹಾಕಿದರು. ವಾರ್ಡ್ ಸಭೆಯ ನಡಾವಳಿ ವಾರ್ಡ್ ಸಭೆಯಲ್ಲಿಯೇ ಮುಗಿಸಬೇಕು. ಹೊರತು ಸಭೆ ಮುಗಿದು ಮನೆಯಲ್ಲಿಇಷ್ಟ ಬಂದ ಹಾಗೆ ಬರೆಯುವುದಕ್ಕೆ ಇರೋದಲ. ಗ್ರಾಮದ ಒಂದನೆಯ ವಾರ್ಡ್ ಸಭೆ ಹಾಗೇ ಆಗಿದೆ. ಗ್ರಾಮಸಭೆಯನ್ನು ಕೂಡಾ ಹಾಗೆ ಕಾಟಾಚಾರಕ್ಕೆ ಮಾಡಬೇಡಿ, ಕ್ರಮಬದ್ಧವಾಗಿ ಮಾಡುವುದಾದರೆ ಮಾಡಿ ಎಂದು ಹೇಳಿದ್ದರೂ ನೀವು ಅನುಸರಿಸುತ್ತಿಲ್ಲ ಎಂದು ಮಾಜಿ ಸದಸ್ಯ ನವಾಝ್ ಆರೋಪಿಸಿದರು.
ಅದಕ್ಕೆ ಉತ್ತಿರಿಸಿದ ಪಿಡಿಒ ವಾರ್ಡ್ ಸಭೆಯ ನಡಾವಳಿ ಬರೆದಿದ್ದೆ, ರರ್ಫ ಅಗಿ ಬರೆದಿದ್ದೆ, ಬುಕ್ ಆಚೆ ಈಚೆ ಆಗಿತ್ತು ಎಂದು ಉತ್ತರಿಸಿದಾಗ ನಡಾವಳಿ ಅಲ್ಲೇ ಮಂಡಿಸಿದ್ದರೆ ಮತ್ತೆ ಗ್ರಾಮಸಭೆಯಲ್ಲಿ ಸಮಯ ವ್ಯರ್ಥ ಪಡಿಸಬೇಕಾಗಿಲ್ಲ. ನಡಾವಳಿ ಬರೆಯಲು ತಿಳಿಯದಷ್ಟು ನೀವು ಅಸಮರ್ಥರಾ? ನೀವು ಆಫೀಸರ್ ಅಲ್ವಾ? ಹಾಗಿದ್ದರೂ ನೀವು ರಫ್ ಆಗಿಯೇ ಬರೆದ ಡೈರಿಗೆ ವಾರ್ಡ್ ಸಭೆಗೆ ಸೇರಿದವರ ಸಹಿ ಹಾಕಿಸಬೇಕಿತ್ತು ಎಂದು ಗ್ರಾಮಸ್ಥರು ಸಲಹೆ ನೀಡಿದರು. ಒಂದು ಹಂತದಲ್ಲಿ ಕಲ್ಲರಕೋಡಿಯಲ್ಲಿನಡೆದ ಗ್ರಾಮಸಭೆ ರದ್ದಾಗಿದ್ದರೂ ಮತ್ತೆ ಗ್ರಾಮಸಭೆ ನಡೆಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಗೈರು ಕಂಡು ವಿರೋಧ ವ್ಯಕ್ತಪಡಿಸಿದ ಇಸ್ಮಾಯಿಲ್ ಮೋರ್ಲ, ಗ್ರಾಮ ಸಭೆಗೆ ಹಾಜರಾಗದೆ ಪಕ್ಷದ ಸಭೆಗೆ ತೆರಳುವ ಅನಿವಾರ್ಯತೆ ಇರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಸದಸ್ಯರು ನಮಗೆ ಬೇಡ. ಅವರಿಗೆ ಪಕ್ಷ ಮುಖ್ಯವಾದರೆ ಅವರಿಗೆ ಅನುಕೂಲವಾಗುವ ದಿನವನ್ನು ಹೊಂದಿಸಿ ಗ್ರಾಮ ಸಭೆ ಕರೆಯಿರಿ. ಸರಕಾರಿ ಕಾರ್ಯಕ್ರಮ ಉಲ್ಲಂಘಿಸುವುದು ಸಲ್ಲದು. ಅಧ್ಯಕ್ಷರೇ ನೀವಂತು ಸಂವಿಧಾನಬದ್ಧವಾಗಿ ಸಿಗುವ ಅನುದಾನ ಮಾತ್ರ ಹಂಚುವ ಕೆಲಸ ಮಾತ್ರ ಮಾಡುತ್ತೀರಿ. ಅದಕ್ಕಾಗಿ ನೀವು ಅವರನ್ನು ಗ್ರಾಮಸಭೆಗೆ ಕರೆಸಿ. ಅವರಿಂದ ಬೇಕಾದ ಅನುದಾನ ನಾವು ತರಿಸುತ್ತೇವೆ ಎಂದರು.
*ಆರೋಗ್ಯ ಇಲಾಖೆಗೆ 35ಲಕ್ಷ ರೂ. ಮಂಜೂರಾಗಿದ್ದು ಎರಡು ವರ್ಷ ಕಳೆದರೂ ಉಪ ಆರೋಗ್ಯ ಕೇಂದ್ರ ಇನ್ನೂ ಅನುಷ್ಠಾನ ಗೊಂಡಿಲ್ಲ. ಕೇವಲ ಪ್ರೊಪೊಸಲ್ ಕಳುಹಿಸಿದರೆ ಸಾಲದು. ಅದರ ಹಿಂದೆ ಬೀಳಬೇಕು. ಒಬ್ಬರು ಆರೋಗ್ಯ ಸಹಾಯಕಿ ಇಲ್ಲಿಗೆ ಬೇಕು ಎಂದು ಬೇಡಿಕೆ ಸಲ್ಲಿಸಿದ್ದೇವೆ. ಅವರಿಗೆ ನಿವೃತ್ತಿಯಾಗಿ ಬೇರೊಬ್ಬರು ಬಂದಿದ್ದಾರೆ. ಆ ಬಳಿಕ ಇದುವರೆಗೆ ನೂತನ ಆರೋಗ್ಯ ಸಹಾಯಕಿ ಬರಲಿಲ್ಲ. ಪಕ್ಕದ ಗ್ರಾಮದ ಆರೋಗ್ಯ ಸಹಾಯಕಿ ಇಲ್ಲಿ ಪ್ರಭಾರ ಸೇವೆ ಸಲ್ಲಿಸುತ್ತಿದ್ದಾರೆ. ಇಷ್ಟು ದೊಡ್ಡ ಗ್ರಾಮಕ್ಕೆ ಆರೋಗ್ಯ ಸಹಾಯಕಿ ನೇಮಕಾತಿ ಯಾಕೆ ವಿಳಂಬ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಅಧ್ಯಕ್ಷರು ಆಶಾ ಕಾರ್ಯಕರ್ತರನ್ನು ಮೊದಲ್ಗೊಂಡು ಇಲಾಖೆ ಅಧಿಕಾರಿಗಳು, ಸಚಿವರ ತನಕ ಸಂಬಂಧಪಡುವ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆರೋಗ್ಯ ಇಲಾಖೆ ನೂತನ ಕಟ್ಟಡ ನಿರ್ಮಾಣದವರೆಗೆ ಪಂಚಾಯಿಯಿಯ ನೂತನ ಸಭಾಂಗಣದಲ್ಲಿ ಆರೋಗ್ಯಕ್ಕೆ ಸಂಬಂಧಿತ ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ನುಡಿದರು.
*ಪಶುಭಾಗ್ಯ ಯೋಜನೆಯಡಿ ವಿವಿಧ ಯೋಜನೆ ಬಗ್ಗೆ ವಿವರಿಸಿದ ಕುರ್ನಾಡು ಪಶು ಚಿಕಿತ್ಸಾಲಯದ ವೈದ್ಯ ಡಾ. ನಿಖಿಲ್ ರಾಜ್ ಅವರ ಜೊತೆ ಚರ್ಚಿಸಿದ ಗ್ರಾಮಸ್ಥರು, ಪಶುವಿಗಾಗಿ ಸಲ್ಲಿಸಿದ ಸುಮಾರು ಎರಡು ಸಾವಿರದಷ್ಟು ಅರ್ಜಿ ಇಲಾಖೆಯಲ್ಲಿ ಕೊಳೆಯುತ್ತಿದೆ. ಯಾರಿಗೂ ಪಶು ಭಾಗ್ಯ ಕರುಣಿಸಿಲ್ಲ. ನರಿಂಗಾನ ಗ್ರಾಮಸ್ಥರು ಬಹಳಷ್ಟು ಅರ್ಜಿ ಸಲ್ಲಿಸಿದ್ದಾರೆ. ಯಾರಿಗಾದರೂ ಸಿಕ್ಕಿದೆಯಾ ಎಂದು ಸಭೆಯಲ್ಲಿಯೇ ಕೇಳಿ, ಯಾರಿಗೂ ಸಿಕ್ಕಿಲ.್ಲ ಅಂದ ಮೇಲೆ ನೀವು ಕೊಟ್ಟಿಲ್ಲ. ಅಂದ್ರೆ ನಮ್ಮ ಗ್ರಾಮದಲ್ಲಿ ಯಾರೂ ಅರ್ಹರಿಲ್ಲವೇ? ಸುಮ್ಮನೆ ಆ ಯೋಜನೆ ಈ ಯೋಜನೆ ಬಾಯಿ ಮಾತಿನಲ್ಲಿ ಹೇಳಬೇಡಿ ಎಂದು ಇಸ್ಮಾಯಿಲ್ ಕುಟುಕಿದರು.
*ಗ್ರಾಮ ಪಂಚಾಯಿತಿ ಸದಸ್ಯರ ಮನೆ ಎದುರುಗಡೆಯಲ್ಲಿ ಕೇವಲ ಐದೂವರೆ ಅಡಿ ಎತ್ತರದಲ್ಲಿ ತಂತಿ ಹಾದಿ ಹೋಗುತ್ತಿದ್ದು ಅಪಾಯದ ಕುರಿತಾಗಿ ಬಹಳಷ್ಟು ಬಾರಿ ಎಚ್ಚರಿಸಿದರೂ ಇನ್ನು ಇಲಾಖೆ ಕ್ರಮ ಕೈಗೊಂಡಿಲ್ಲ, ಹಾಗೆಯೇ ಮೋರ್ಲ ಆಲಿಕುಂಞÂ ಅವರ ಮನೆಯ ಬಳಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬ ಇಂದೋ ನಾಳೆಯೋ ಬೀಳುವ ಸಾಧ್ಯತೆ ಇದ್ದು ತಕ್ಷಣ ಕಂಬ ಸ್ಥಳಾಂತರಿಸುವುದು ಒಳ್ಳೆಯದು ಎಂದು ಮಾಜಿ ಸದಸ್ಯ ನವಾಝ್ ಪ್ರಶ್ನೆಗೆ ಆ ಸಮಸ್ಯೆಯನ್ನು ಒಂದು ವಾರದೊಳಗೆ ಸರಿಪಡಿಸುತ್ತೇವೆ ಎಂದು ಹೇಳಿದ ಮೆಸ್ಕಾಂ ಅಧಿಕಾರಿ ಸಭೆ ನಡೆಯುತ್ತಿದ್ದಂತೆಯೇ ಸ್ಥಳೀಯರ ಜೊತೆಗೆ ಸಮಸ್ಯೆ ಇರುವ ಪ್ರದೇಶಕ್ಕೆ ಭೇಟಿ ನೀಡಿ ಕರ್ತವ್ಯ ನಿಷ್ಠೆ ಮೆರೆದರು. ಬಳಿಕ ಯಾವುದೇ ಮೀಟಿಂಗ್ ಇದ್ದರೂ ತಹಶೀಲ್ದಾರ್, ಜಿ.ಪಂ. ಹಾಗೂ ತಾಲೂಕು ಪಂಚಾಯಿತಿ ಸದಸ್ಯರು ಹಾಜರಾಗಲೇ ಬೇಕು, ತಪ್ಪಿದರೆ ಮುಂದಿನ ಗ್ರಾಮ ಸಭೆ ರದ್ದು ಮಾಡುವ ಕುರಿತಾಗಿ ಹೋರಾಟ ನಡೆಸಲಿದ್ದೇವೆ ಎಂದು ಗ್ರಾಮಸ್ಥರು ಎಚ್ಚರಿಸಿದರು.10.30ಕ್ಕೆ ಅರಂಭವಾದ ಗ್ರಾಮಸಭೆ 3.30ಕ್ಕೆ ಮುಗಿಯಿತು.
*ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಪಂಚಾಯಿತಿ ಉಪಾಧ್ಯಕ್ಷೆ ನಳಿನಾಕ್ಷಿ ಹಾಗೂ ಪಂಚಾಯಿತಿ ಸದಸ್ಯರು, ಕಿರಿಯ ಇಂಜಿನಿಯರ್ ರವಿಚಂದ್ರ, ಅಧಿಕಾರಿಗಳಾದ ಕಸ್ತೂರಿ, ಕೊರಗಪ್ಪ, ಡಾ. ಹನ್ನತ್ ಆಯಿಶಾ, ರೆಹನಾ ಬೇಗಂ, ಶಿವಪ್ರಕಾಶ್, ಚಿದಾನಂದಪ್ಪ ಹಾಗೂ ಸಿಂಧು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಭೆ ನಡೆಸಿಕೊಟ್ಟರು.
ನಿರ್ಣಯಗಳು
*ವಾಸ್ತವ್ಯ ಇಲ್ಲದ ಹಕ್ಕುಪತ್ರ ಹೊಂದಿರುವ ಮನೆಗಳನ್ನು ವಸತಿ ರಹಿತರಿಗೆ ಹಂಚಲು ಕ್ರಮಕೈಗೊಳ್ಳುವುದು.
*ಮಾತೃಪೂರ್ಣ ಯೋಜನೆಯ ಪರಿಷ್ಕರಣೆ, ಅಂಗನವಾಡಿಗೆ ಹೋಗುವ ಬದಲಿಗೆ ಗರ್ಭಿಣಿ ಮಹಿಳೆಗೆ ಸಾಮಗ್ರಿ ಮನೆಗೆ ತಲುಪಿಸಲು ಕ್ರಮ.
*ಮನೆತೆರಿಗೆ ಪರಿಷ್ಕರಣೆ
*ಗ್ರಾಮದ ಪ್ರತಿಷ್ಠಿತ ಆಸ್ಪತ್ರೆಯೊಂದರ ಕಾಮಗಾರಿ ನಡೆಯುತ್ತಿರುವಾಗ ಹಾಳಾದ ರಸ್ತೆ ದುರಸ್ತಿಗೆ ಕ್ರಮ.
*ನೆತ್ತಿಲ ಪದವು ಬಳಿ ಖಾಲಿ ಇರುವ ಎರಡು ಎಕರೆ ಬೂಮಿಯಲ್ಲಿ ದಫನ ಭೂಮಿ.
*ಶೀಘ್ರಗತಿಯಲ್ಲಿ ರೇಶನ್ ಕಾರ್ಡ್ ವಿತರಣೆಗೆ ಕ್ರಮ.


