UN NETWORKS
ಪಾವೂರು: ಗ್ರಾಮೀಣ ಭಾಗದ ಕ್ರೀಡೆ ಎನಿಸಿಕೊಂಡಿದ್ದ ಕಬಡ್ಡಿ ಇಂದು ನಗರ ಭಾಗದಲ್ಲೂ ಜನಪ್ರಿಯತೆ ಪಡೆದಿದ್ದು, ಪ್ರೋತ್ಸಾಹ ನೀಡುವಲ್ಲಿ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಮುಂಚೂಣಿಯಲ್ಲಿದೆ ಎಂದು ಉಳ್ಳಾಲ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಭಟ್ನಗರ ಅಭಿಪ್ರಾಯಪಟ್ಟರು.
ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಪಾವೂರು ಸರ್ಕಾರಿ ಪ್ರೌಢಶಾಲೆಯ ಸಹಕಾರದಲ್ಲಿ ಪಾವೂರು ಶಾಲಾ ಮೈದಾದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಬಡ್ಡಿ ಎನ್ನುವುದು ಒಂದು ರೀತಿಯ ಸಾಹಸ ಕ್ರೀಡೆ, ಮಕ್ಕಳು ಶಾಲಾ ಜೀವನದಲ್ಲೇ ಶಿಕ್ಷಣಕ್ಕೆ ಆಸಕ್ತಿ ತೋರಿಸಿದಂತೆ ಕ್ರೀಡೆಯತ್ತಲೂ ಒಲವು ಹೊಂದಿರಬೇಕು. ಶಿಕ್ಷಣ ಮತ್ತು ಕ್ರೀಡೆಯ ಮೂಲಕ ಸಮಾಜಕ್ಕೆ ಸ್ಪೂರ್ತಿಯಾಗುವ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಮೋನು ಮಾತನಾಡಿ, ಮಂಗಳೂರು ತಾಲೂಕಿನಲ್ಲಿದೈಹಿಕ ಶಿಕ್ಷಕರ ಅತ್ಯುತ್ತಮ ತಂಡ ದಕ್ಷಿಣ ವಲಯದಲ್ಲಿದೆ. ಅದರಿಂದಾಗಿ ಈ ಭಾಗದಲ್ಲಿ ಕ್ರೀಡಾಕೂಟಗಳು ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಇಂತಹ ಅವಕಾಶ ಸದುಪಯೋಗಪಡಿಸಿಕೊಂಡು ರಾಷ್ಟ್ರೀಯ ಕ್ರೀಡಾಪಟುವಾಗುವತ್ತ ವಿದ್ಯಾರ್ಥಿಗಳ ಚಿತ್ತ ಇರಬೇಕು ಎಂದರು.
ಪಾವೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಫಿರೋಜ್ ಮಲಾರ್ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ದಕ್ಷಿಣ ವಲಯ ಶಿಕ್ಷಣಾಧಿಕಾರಿ ಲೋಕೇಶ್ ಸಿ.ಎಸ್., ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು, ಮಂಗಳೂರು ಲಯನ್ಸ್ ಕ್ಲಬ್ ಕಾರ್ಯದರ್ಶಿ ಹೇಮಾ ರಾವ್, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಸಂಯೋಜಕ ಶಂಕರಾನಂದ ಎನ್. ಇನವಳ್ಳಿ, ದಕ್ಷಿಣ ವಲಯ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಡಾ.ಪ್ರಶಾಂತ್ ಕುಮಾರ್, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ, ಶೇಖರ ಕಡ್ತಲ, ರಾಜೀವ ನಾಯಕ್, ಲ್ಯಾನ್ಸಿ ಸಿಕ್ವೇರ್, ಪಾವೂರು ಗ್ರಾಮ ಪಂಚಾಯಿತಿ ಸದಸ್ಯ ಐ.ಬಿ. ಸಾದಿಕ್, ಉದ್ಯಮಿ ವಿನ್ಸೆಂಟ್ ಲೋಬೋ, ಯಾದ್ ಫೌಂಡೇಶನ್ ಅಧ್ಯಕ್ಷ ರಿಯಾಝ್ ಮಲಾರ್, ಉಳ್ಳಾಲ ವಲಯ ನೋಡೆಲ್ ಅಧಿಕಾರಿ ಉರ್ಬನ್ ಮಸ್ಕರೇನಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ರಾವ್ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಲೋಕನಾಥ್ ಉಪಸ್ಥಿತರಿದ್ದರು.
ಪಾವೂರು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಕರುಣಾ ಎಸ್. ಸ್ವಾಗತಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೋಹನ್ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಜಮೀಲಾ ವಂದಿಸಿದರು.


