UN NETWORKS
ಮುಡಿಪು: ಮುಡಿಪಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ಸ್ ಘಟಕದ ವತಿಯಿಂದ ಸದ್ಭಾವನಾ ದಿನ ಮತ್ತು ಕೋಮು ಸೌಹಾರ್ದ ಸಪ್ತಾಹ ನಡೆಯಿತು.
ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಭಾವೈಕ್ಯತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನರ ಪಾತ್ರ ಮತ್ತು ಸೌಹಾರ್ದತೆಯಲ್ಲಿ ಮಹಿಳೆಯರ ಜವಾಬ್ದಾರಿಗಳು, ರಾಷ್ಟ್ರೀಯತೆ, ತ್ಯಾಗ, ಸ್ನೇಹ, ಸಂಯಮ, ಶಿಕ್ಷಣ ಸಂಸ್ಥೆಗಳ ಪಾತ್ರ ಯುವ ಪೀಳಿಗೆಯ ಕರ್ತವ್ಯ ಇತ್ಯಾದಿ ವಿಷಯಗಳನ್ನು ಪದವಿ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ರೇಂಜರ್ಸ್ ಲೀಡರ್ ಶುಭ ಕೆ. ಎಚ್. ವಿದ್ಯಾರ್ಥಿಗಳಿಗೆ ಸದ್ಭಾವನಾ ಪ್ರತಿಜ್ಞೆ ಬೋಧಿಸಿದರು. ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆದರು.
ಸಮಾರೋಪದಲ್ಲಿ ವಿವಿಧ ಸಂಸ್ಥೆಯ ರೇಂಜರ್ಸ್‍ಗಳಿಗೆ ಮುಡಿಪು ಗ್ರಾಮದ ಸ್ಕೌಟ್ ಮತ್ತು ಗೈಡ್ಸ್‍ಗಳಿಗೆ ಸದ್ಭಾವನೆ ಮತ್ತು ಸೌಹಾರ್ದತೆಯ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು.
ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಲತಾ ಜಿ. ಎಸ್ ಮಾತನಾಡಿ ಸೌಹಾರ್ದತೆ ಎಂಬುದು ಕುಸಿದು ಬಿದ್ದ ಗುಡ್ಡಗಳ ನಡುವೆ ತಲೆ ಎತ್ತಿ ನಿಂತಿವೆ. ಭಾರತ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವೈಶಿಷ್ಟ್ಯತೆಯನ್ನು ಹೊಂದಿದೆ. ಇತ್ತೀಚೆಗೆ ನಡೆದ ಪ್ರಕೃತಿ ವಿಕೋಪ ಜನರ ಸಂಕಷ್ಟಗಳಿಗೆ, ನೋವು ದುಖಃಗಳಿಗೆ ಕಾರಣವಾಗಿದೆ. ಕಷ್ಟದ ಸಮಯದಲ್ಲಿ. ಸಹಾಯಹಸ್ತ, ಪರಸ್ಪರ ಸಹಕಾರ ಅತೀ ಮುಖ್ಯ ಎಂದರು.
ತ್ಯಾಗ, ಸ್ನೇಹ, ಪ್ರೇಮದ ಗುಣ ನಮ್ಮಲ್ಲಿ ಇರಬೇಕು. ಸತ್ಯ ಹಾಗೂ ಅಹಿಂಸೆ ಭಾರತಾಂಬೆಯ ಎರಡು ಕಣ್ಣುಗಳಿದ್ದಂತೆ, ಏಕತೆಯು ಭಾರತಾಂಬೆಯ ಹೃದಯ. ಅವಳ ರಕ್ತದ ಕಣ ಕಣಗಳಲ್ಲಿ ಕಾರುಣ್ಯತೆ ತುಂಬಿದೆ. ಮನುಷ್ಯರಾಗಿ ಹುಟ್ಟಿದ ನಾವು ಮಾನವೀಯತೆಯಿಂದ, ಶಾಂತಿಯಿಂದ ಮನುಷ್ಯರಾಗಿಯೇ ಇರಬೇಕು. ರಾಕ್ಷಸ ಗುಣವನ್ನು ಅಳವಡಿಸದೆ ಭಾರತಾಂಬೆಯ ಈ ಸುಂದರ ತೋಟದಲ್ಲಿ ಹಲವಾರು ಜಾತಿ, ಧರ್ಮ, ಪಂಗಡ, ಆಚಾರ ವಿಚಾರ, ತೊಡುಗೆ, ದೈವಗಳ-ದೇವರುಗಳೆಂಬ ಹೂವುಗಳಿವೆ. ಅವನ್ನ ನಮ್ಮ ಭಾರತಾಂಬೆಯ ಸೌಹಾರ್ದತೆಯ ಒಂದು ದಾರದ ಮೂಲಕ ಎಲ್ಲಾ ವಿವಿಧತೆಗಳನ್ನು ತನ್ನ ಮಾಲೆಯಲ್ಲಿ ಜೋಡಿಸಿಕೊಂಡಿದ್ದಾಳೆ. ಆ ಮಾಲೆಯಲ್ಲಿರುವ ಹೂವುಗಳು ದಾರದಲ್ಲಿ ಒಣಗದಂತೆ ಬಿದ್ದುಹೋಗದಂತೆ, ಮತ್ತು ಕಳಚಿ ಹೋಗದಂತೆ ನೋಡಿಕೊಳ್ಳವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಪ್ರಾಂಶುಪಾಲ ಡಾ. ಗಿರಿಧರ್ ರಾವ್ ಎಂ. ಎಸ್ ಅಧ್ಯಕ್ಷತೆ ವಹಿಸಿದ್ದರು. ಶುಭ ಕೆ.ಎಚ್. ಸ್ವಾಗತಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಚೈತ್ರ ವಂದಿಸಿದರು.


