UN NETWORKS
ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಶಾಸಕರ ಹಾಗೂ ಮುಖ್ಯಮಂತ್ರಿಗಳ ಬಹುತೇಕ ಅನುದಾನವನ್ನು ವಿನಿಯೋಗಿಸಿ ಮಂಗಳೂರು ನಗರದಂತೆ ನಗರೀಕರಣ ಮಾಡಲಾಗಿದೆ. ಅಭಿವೃದ್ಧಿ ಕಾರ್ಯಗಳನ್ನು ಜನ ಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನ ಎಲ್ಲಾ ಅಭ್ಯರ್ಥಿಗಳನ್ನು ಬೆಂಬಲಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ರಸ್ತೆ ಕಾಂಕ್ರೀಟಿಕರಣ, ಕಡಲ್ಕೊರೆತ ತಡೆಗೆ ಯೋಜನೆ, ಮೀನುಗಾರಿಕಾ ಜಟ್ಟಿಯಂತಹ ಅಭಿವೃದ್ಧಿ ಪರ ಯೋಜನೆಗಳನ್ನು ಕ್ಷೇತ್ರದಲ್ಲಿ ನಡೆಸಲಾಗಿದೆ. ಮುಂದೆಯೂ ಅಭಿವೃದ್ಧಿ ಕಾರ್ಯ ನಡೆಸಲು ಕಾಂಗ್ರೆಸ್ ಅಭ್ಯರ್ಥಿಗಳನ್ನು ಜನತೆ ಬೆಂಬಲಿಸಬೇಕಿದೆ. ನಗರೋತ್ಥಾನ ಯೋಜನೆಯಡಿ 25 ಕೋಟಿ ಅನುದಾನವನ್ನು ಮಂಜೂರುಗೊಳಿಸಲಾಗಿದ್ದು, ಕ್ಷೇತ್ರ ವ್ಯಾಪ್ತಿ ಕಾಂಕ್ರೀಟಿಕರಣದಿಂದ ಬಾಕಿಯಾಗಿರುವ ರಸ್ತೆಗಳ ಕಾಮಗಾರಿ ಮಳೆಗಾಲ ಮುಗಿದ ತಕ್ಷಣ ನಡೆಯಲಿದೆ. ಒಂಭತ್ತುಕೆರೆ ಸಮೀಪ ಪ್ರತ್ಯೇಕ ಟ್ಯಾಂಕ್ ನಿರ್ಮಿಸಿ ನೂತನ ಪೈಪ್ ಲೈನ್ ಅಳವಡಿಸಿ ನಗರಸಭೆ ವ್ಯಾಪ್ತಿಗೆ 24 ಗಂಟೆಗಳ ಕಾಲ ಕುಡಿಯುವ ನೀರಿನ ಯೋಜನೆಯನ್ನು ರೂಪಿಸಲಾಗಿದೆ. ಸಮಯಕ್ಕೆ ಸರಿಯಾಗಿ ಲೈಸೆನ್ಸ್, ರೇಷನ್ ಕಾರ್ಡು ಕೊಡುವ ವ್ಯವಸ್ಥೆ ನಗರಸಭೆ ಆಡಳಿತದಿಂದ ನಡೆದಿದೆ.
ಉಳ್ಳಾಲವನ್ನು ಮಾದರಿ ನಗರವನ್ನಾಗಲು ಮಾಡಲು ಜನತೆಯ ಬೆಂಬಲ ಸಿಗಬೇಕಿದೆ. ಸಮಾನತೆ, ಪ್ರೀತಿ ವಿಶ್ವಾಸದಿಂದ ಬಾಳುವಂತಹ ವಾತಾವರಣ ಕ್ಷೇತ್ರದಲ್ಲಿದ್ದು, ಪ್ರತಿಯೊಂದು ಧಾರ್ಮಿಕ ಕೇಂದ್ರಗಳಿಗೆ ತಾರತಮ್ಯವಿಲ್ಲದೆ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಪ್ರತಿಪಕ್ಷಗಳ ಆರೋಪ ನಿರಾಧಾರ ಅವರ ಮನೆಮುಂದೆ ಐದು ವರ್ಷಗಳ ಹಿಂದೆ ಹೇಗಿತ್ತು, ಇಗ ಸ್ಥಿತಿ ಹೇಗಿದೆ ಅನ್ನುವುದನ್ನು ಆರೋಪಿಸುವವರು ತಿಳಿದುಕೊಳ್ಳಬೇಕಿದೆ. ಎದುರು ಪಕ್ಷಗಳನ್ನು ನೋಡಿ ಚುನಾವಣೆಗೆ ಸ್ಪರ್ಧಿಸಿಲ್ಲ, ಕಾರ್ಯಕರ್ತರನ್ನು ನೋಡಿ ಚುನಾವಣೆಗೆ ಸ್ಪರ್ಧಿಸಿದ್ದು, ನಗರಸಭೆ ಅಭ್ಯರ್ಥಿಗಳು ಅದೇ ನೀತಿಯನ್ನು ಅನುಸರಿಸಿದ್ದಾರೆ. ಪಕ್ಷಕ್ಕಾಗಿ ದುಡಿದು ಶ್ರಮ ವಹಿಸಿದವರು ಟಿಕೇಟು ಕೇಳುವುದು ತಪ್ಪಲ್ಲ. ಆದರೆ ಅರ್ಹತೆಗೆ ಅನುಗುಣವಾಗಿ , ಮೀಸಲಾತಿ ಪ್ರಕಾರ ಟಿಕೇಟು ನೀಡಲಾಗಿದೆ. ಬೂತ್ ಮಟ್ಟದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರ ಭರವಸೆಯಿಂದ ಎಲ್ಲಾ ಸದಸ್ಯರು ಜಯಗಳಿಸುವ ವಿಶ್ವಾಸವಿದೆ. ಕಾನೂನು ಪ್ರಕಾರವೇ ಮೀಸಲಾತಿಯನ್ನು ಪ್ರಕಟಿಸಲಾಗಿದೆ ಎಂದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸದಾಶಿವ ಉಳ್ಳಾಲ್, ಕೆಪಿಸಿಸಿ ಕಾರ್ಯದರ್ಶಿ ರಾಜಶೇಖರ್ ಕೋಟ್ಯಾನ್, ಮಂಗಳೂರು ಮಹಾನಗರಪಾಲಿಕೆ ಮೇಯರ್ ಭಾಸ್ಕರ್ ಮೊಯ್ಲಿ, ಮಾಜಿ ಮೇಯರ್ ಶಶಿಧರ್ ಹೆಗಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ತಾ.ಪಂ ಅಧ್ಯಕ್ಷ ಮೋನು ಮಲಾರ್, ಮುಖಂಡರುಗಳಾದ ಕೃಪಾ ಅಮರ್ ಆಳ್ವ, ದಿನೇಶ್ ರೈ, ದೀಪಕ್ ಪೂಜಾರಿ, ಪ್ರವೀಣ್ ಚಂದ್ರ ಆಳ್ವ, ನಝರ್ ಷಾ, ನಾಸೀರ್ ಸಾಮಣಿಗೆ, ಪುರುಷೋತ್ತಮ ಅಂಚನ್, ಇಕ್ಬಾಲ್ ಸಾಮಣಿಗೆ, ಅಚ್ಯುತ್ತ ಗಟ್ಟಿ, ರವೂಫ್ ಸಿ.ಎಂ, ಸುರೇಶ್ ಭಟ್ನಗರ ಉಪಸ್ಥಿತರಿದ್ದರು.


